ಮಡಿಕೇರಿ: ಬಡವರು ಸಾಗುವಳಿ ಮಾಡಿರುವ ಭೂಮಿಯನ್ನು ಸಕ್ರಮಗೊಳಿಸದೆ ಭೂ ಮಾಲಕರ ಅಕ್ರಮ ಒತ್ತುವರಿಯನ್ನು ಸಕ್ರಮಗೊಳಿಸಲು ಸರಕಾರ ಮುಂದಾದಲ್ಲಿ ಭೂ ಸಂಘರ್ಷ ಚಳವಳಿಯನ್ನು ಆರಂಭಿಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷರಾದ ಎಸ್.ಆರ್. ಮಂಜುನಾಥ್ ಜಿಲ್ಲೆ ಯಲ್ಲಿರುವ ಸಿ ಮತ್ತು ಡಿ ಭೂಮಿಯನ್ನು ಬಡವರಿಗೆ ಹಂಚಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಭೂಹೀನರಿಗೆ ಭೂಮಿ ನೀಡಲು ಜಿಲ್ಲೆಯಲ್ಲಿ ಸರಕಾರಿ ಭೂಮಿ ಇಲ್ಲ. ಈಗ ಇರುವ ಭೂಮಿ ಅರಣ್ಯ ಇಲಾಖೆಗೆ ಸೇರಿದೆ ಎಂಬ ಹೇಳಿಕೆ ನೀಡುವುದರಲ್ಲಿ ಅಧಿಕಾರಿಗಳು ಸಫಲರಾಗುತ್ತಿದ್ದಾರೆ ಎಂದು ಆರೋಪಿಸಿದರು. ಜಿಲ್ಲೆ ಮತ್ತು ರಾಜ್ಯದ ಇತರೆ ಪ್ರಗತಿಪರ ಸಂಘಟನೆಗಳು ಸೇರಿಕೊಂಡು ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ರಚಿಸಿ ಪ್ರತಿಭಟನಾ ಸಮಾವೇಶ ನಡೆಸುವುದರ ಮೂಲಕ ಮೇಲೆ ಒತ್ತಡ ಹೇರಿದ ಪರಿಣಾಮ ಜಿಲ್ಲೆಯಲ್ಲಿರುವ 6,105 ಎಕರೆ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಅರಣ್ಯ ಇಲಾಖೆಯಿಂದ ಹಿಂಪಡೆದು ಭೂ ಹೀನ ಬಡವರಿಗೆ ಹಂಚಲು ರಾಜ್ಯ ಸರಕಾರ ಮುಂದಾಗಿದೆ. ಇದನ್ನು ಕರ್ನಾಟಕ ರೈತ ಸಂಘ ಸ್ವಾಗತಿಸುತ್ತದೆ ಎಂದು ಮಂಜುನಾಥ್ ತಿಳಿಸಿದರು.
ಅರಣ್ಯ ಇಲಾಖೆಯಿಂದ ಹಿಂಪಡೆದಿರುವ ಸಿ ಮತ್ತು ಡಿ ಭೂಮಿಯನ್ನು ಭೂರಹಿತ ಕಡು ಬಡವ ಆದಿವಾಸಿ ಮತ್ತು ಭೂರಹಿತ ದಲಿತರಿಗೆ ನೀಡಬೇಕು ಮತ್ತು ಉಳ್ಳವರು ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ತೆರವುಗೊಳಿಸಿ ಬಡವರಿಗೆ ಹಂಚಬೇಕು ಎಂದು ಒತ್ತಾಯಿಸಿದರು. ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಎಚ್.ಇ. ಸಣ್ಣಪ್ಪ ಮಾತನಾಡಿ, 2006-07 ರಲ್ಲಿ ಅಂದಿನ ಜಿಲ್ಲಾಧಿಕಾರಿ ಸುಭೋದ್ ಯಾದವ್ ಅವರು ಜಿಲ್ಲೆಯಲ್ಲಿ 36 ಸಾವಿರ ಎಕರೆ ಸಿ ಮತ್ತು ಡಿ ದರ್ಜೆಯ ಭೂಮಿ ಗುರುತಿಸಿ ಭೂ ಹೀನರಿಗೆ ಹಂಚಲು ಯೋಜನೆ ರೂಪಿಸಿದ್ದರು. ಆದರೆ ಸರ್ವೆ ಅಧಿಕಾರಿಗಳ ಕೊರತೆ, ಭೂ ಮಾಲಕರು, ಅರಣ್ಯ ಇಲಾಖೆಯ ಹಾಗೂ ಆಳುವವರ್ಗದ ವಿರೋಧದಿಂದ ಈ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು. ಬಡವರು, ಆದಿವಾಸಿಗಳು, ದಲಿತರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಯಾವುದೊ ಇಲಾಖೆಗಳಿಗೆ ನೀಡಲು ಮುಂದಾಗಿರುವುದು ಮತ್ತು ಭೂ ಮಾಲಕರು ಒತ್ತುವರಿ ಮಾಡಿರುವ ಭೂಮಿಯನ್ನು ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸಿ ರುವುದನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದರು.
ಸರಕಾರ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಅರಣ್ಯ ಇಲಾಖೆಯಿಂದ ಹಿಂಪಡೆದು ಭೂ ಹೀನರಿಗೆ ವಿತರಿಸಬೇಕು, ಅಕ್ರಮ ಸಾಗುವಳಿ ಮಾಡಿರುವ ಭೂಮಾಲಕರ ಭೂಮಿಯನ್ನು ತೆರವುಗೊಳಿಸಿ ಬಡವರಿಗೆ ಹಂಚಬೇಕೆಂದು ಒತ್ತಾಯಿಸಿದರು.
ವ್ಯವಸಾಯ ಮಾಡದ ಭೂಮಿಯನ್ನು ಉಳ್ಳವರಿಂದ ಮರಳಿ ಪಡೆದು ಬಡವರಿಗೆ ಹಂಚಲು ಸರಕಾರ ಮುಂದಾಗಿರುವುದನ್ನು ಸ್ವಾಗತಿಸುವುದಾಗಿ ಸಣ್ಣಪ್ಪ ತಿಳಿಸಿದರು. ರಾಜ್ಯ ಸರಕಾರ ಸಿ ಮತ್ತು ಡಿ ಭೂಮಿಯನ್ನು ಬಡವರಿಗೆ ಹಂಚಲು ಕ್ರಮ ಕೈಗೊಂಡಿದೆ. ಆದರೆ ಜಿಲ್ಲೆಯ ಶಾಸಕರು ತಮ್ಮ ಪ್ರಯತ್ನದಿಂದ ಭೂಮಿ ಹಂಚಿಕೆಯಾಗುತ್ತಿದೆ ಎಂದು ಪ್ರತಿಬಿಂಬಿಸಿಕೊಳ್ಳುತ್ತಿದ್ದು, ಇದು ಚುನಾವಣಾ ಗಿಮಿಕ್ ಎಂದು ಆರೋಪಿಸಿದರು.
ದಿಡ್ಡಳ್ಳಿ ಹೋರಾಟದ ಸಂದರ್ಭ ಬಡವರ ಪರ ಧ್ವನಿ ಎತ್ತದ ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಕೂಡ ತಮ್ಮ ಒತ್ತಡದಿಂದ ನಿರಾಶ್ರಿತರಿಗೆ ಸರಕಾರ ಆಶ್ರಯ ಕಲ್ಪಿಸಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ಅತ್ಯಂತ ಖಂಡನೀಯವೆಂದು ಸಣ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ.ಟಿ. ಆನಂದ್, ಸದಸ್ಯರಾದ ಕೆ.ಎಂ. ದಿನೇಶ್ ಹಾಗೂ ಎಚ್.ಡಿ. ಸೋಮಶೇಖರ್ ಉಪಸ್ಥಿತರಿದ್ದರು.