Advertisement

ಎಡಕುಮೇರಿ ಬಳಿ ಹಳಿ ಮೇಲೆ ಮಣ್ಣು

03:51 PM Aug 09, 2018 | Team Udayavani |

ಸುಬ್ರಹ್ಮಣ್ಯ/ಸಕಲೇಶಪುರ: ಭಾರೀ ಮಳೆ ಪರಿಣಾಮ ಮಂಗಳೂರು-ಬೆಂಗಳೂರು ರೈಲುಮಾರ್ಗದ ಮೇಲೆ ಎಡ ಕುಮೇರಿ ಸಮೀಪ ಮೂರು ಕಡೆಗಳಲ್ಲಿ ಬಂಡೆ ಸಹಿತ ಮಣ್ಣು ಜರಿದುಬಿದ್ದು, ಮಂಗಳೂರು-ಬೆಂಗಳೂರು ರೈಲು ಸಂಚಾರ ವ್ಯತ್ಯಯವಾಗಿದೆ. ನೆಟ್ಟಣ ನಿಲ್ದಾಣದಿಂದ 65 ಕಿ.ಮೀ. ದೂರದ ಸಿರಿಬಾಗಿಲು ಕೊಡಗರವಳ್ಳಿಯಲ್ಲಿ ಘಟನೆ ಸಂಭವಿಸಿದ್ದು, ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದರು. ಎಡಕುಮೇರಿ – ಸಿರಿಬಾಗಿಲು ನಡುವೆ ಬೆಳಗ್ಗೆ 7.30ರ ವೇಳೆಗೆ ಭಾರೀ ಪ್ರಮಾಣದಲ್ಲಿ ಮಣ್ಣು, ಕಲ್ಲುಗಳು ಹಳಿಯ ಮೇಲೆ ಕುಸಿದವು. ಇಲಾಖೆ ಸಿಬಂದಿ ಸ್ಥಳಕ್ಕೆ ತೆರಳಿ ತೆರವು ಮಾಡಿದ ಮೇಲೆ ಗೂಡ್ಸ್‌ ರೈಲು ಈ ಮಾರ್ಗದಲ್ಲಿ ಸಂಚರಿಸಿತು.

Advertisement

ಮತ್ತೆ ಕುಸಿತ
10 ಗಂಟೆಯ ವೇಳೆಗೆ ಮತ್ತೆ ಕೊಡಗರವಳ್ಳಿ ಸಮೀಪ ಹಳಿಗೆ ಕಲ್ಲು, ಮರಗಳ ಸಹಿತ ಗುಡ್ಡ ಜರಿಯಿತು. ರೈಲ್ವೇ ಸಿಬಂದಿ ತೆರವು ನಡೆಸಿದರು. ಅಧಿಕ ಪ್ರಮಾಣದಲ್ಲಿ ಮಣ್ಣು ಹಳಿ ಮೇಲೆ ಶೇಖರಣೆಗೊಂಡ ಕಾರಣ ಮಧ್ಯಾಹ್ನದ ರೈಲು ಸಂಚಾರವನ್ನು ತಡೆಹಿಡಿಯಲಾಯಿತು. ಮಣ್ಣು ತೆರವು ಕಾರ್ಯ ಮುಂದುವರಿದಿದೆ.
ಜೂನ್‌ನಿಂದ ಈ ತನಕ ಈ ಪ್ರದೇಶದಲ್ಲಿ 11ನೇ ಬಾರಿ  ಗುಡ್ಡ ಕುಸಿದಿದ್ದು ರೈಲು ಪ್ರಯಾಣಿಕರಿಗೆ ಭಾರೀ ಸಮಸ್ಯೆಯಾಗಿ ಪರಿಣಮಿಸಿದೆ.

ಬಸ್‌ಗಳಲ್ಲಿ  ಪ್ರಯಾಣ
ಬೆಳಗ್ಗೆ 11 ಗಂಟೆಗೆ ಹಾಸನ ನಿಲ್ದಾಣಕ್ಕೆ ತಲುಪಿದ ಬೆಂಗಳೂರು-ಮಂಗಳೂರು ಕಾರವಾರ ಎಕ್ಸ್‌ಪ್ರಸ್‌ ರೈಲು ಸಂಚಾರವನ್ನು ಹಾಸನದ ನಿಲ್ದಾಣ ದಲ್ಲೇ ಸ್ಥಗಿತಗೊಳಿಸಲಾಯಿತು. ಅಪರಾಹ್ನ 3 ಗಂಟೆ ಯಾದರೂ ಸ್ಥಳಕ್ಕೆ ಸಂಬಂಧ ಪಟ್ಟ ಯಾವ ಅಧಿಕಾರಿಯೂ ಬಂದು ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಇದ್ದದ್ದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣ ವಾಯಿತು. ಬಳಿಕ ಪ್ರಯಾಣಿಕರನ್ನು 9 ಹೆಚ್ಚು ಬಸ್‌ಗಳ ಮೂಲಕ ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು, ಉಡುಪಿ ಕಡೆಗಳಿಗೆ ರೈಲ್ವೇ ಇಲಾಖೆ ಕಳುಹಿಸಿಕೊಟ್ಟಿತು.

ರೈಲು ಯಾನ ರದ್ದು 
ಮಂಗಳೂರು: ಭೂ ಕುಸಿತ ಹಿನ್ನೆಲೆಯಲ್ಲಿ ಯಶವಂತಪುರ- ಮಂಗಳೂರು ಜಂಕ್ಷನ್‌- ಕಾರವಾರ (ವಾರದಲ್ಲಿ ಮೂರು ದಿನ ಓಡಾಡುವ ರೈಲು ನಂ: 16515) ರೈಲನ್ನು ಹಾಸನ- ಮಂಗಳೂರು ಜಂಕ್ಷನ್‌- ಕಾರವಾರ ಮಧ್ಯೆ ಭಾಗಶಃ ರದ್ದುಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next