Advertisement

ಇಂದು ರೈತರ ಬಂದ್‌ : ಭೂ ಸುಧಾರಣೆ ಕಾಯ್ದೆ , ಎಪಿಎಂಸಿ ತಿದ್ದುಪಡಿಗೆ ವಿರೋಧ

02:10 AM Sep 28, 2020 | Hari Prasad |

ಬೆಂಗಳೂರು: ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತಿದ್ದುಪಡಿ ಮಸೂದೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳು ಸೋಮವಾರ ‘ಕರ್ನಾಟಕ ಬಂದ್‌’ ನಡೆಸಲಿವೆ. ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಬಂದ್‌ ನಡೆಯಲಿದೆ.

Advertisement

ಕೃಷಿ ಮಸೂದೆಗೆ ಸಂಬಂಧಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ಧ್ವನಿ ಎತ್ತಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿವೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಕೂಡ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಕಾಂಗ್ರೆಸ್‌ ಕೂಡ ಬಂದ್‌ ಬೆಂಬಲಿಸಿದೆ. ಕರ್ನಾಟಕ ರಕ್ಷಣ ವೇದಿಕೆಯ ನಾರಾಯಣ ಗೌಡ ಬಣ, ಕರವೇಯ ಪ್ರವೀಣ್‌ ಶೆಟ್ಟಿ ಬಣ, ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌, ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು ಮತ್ತಿತರ ಕನ್ನಡ ಪರ ಸಂಘಟನೆಗಳ ನಾಯಕರು ರೈತರ ಹೋರಾಟಕ್ಕೆ ಕೈಜೋಡಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತ, ಕಾರ್ಮಿಕ ವಿರೋಧಿ ಧೋರಣೆ ಹೊಂದಿವೆ ಎಂದು ಆರೋಪಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಹೋರಾಟ ನಡೆಸಿದ್ದ ವಿವಿಧ ರೈತ ಸಂಘಟನೆಗಳ “ಐಕ್ಯ ಹೋರಾಟ ವೇದಿಕೆ’ ಈಗ ಕನ್ನಡಪರ ಸಂಘಟನೆಗಳ ಜತೆಗೂಡಿ “ಕರ್ನಾಟಕ ಬಂದ್‌’ಗೆ ಕರೆ ನೀಡಿದೆ. ಕಬಿನಿ ರೈತ ಹಿತರಕ್ಷಣ ಸಮಿತಿ, ರಾಜ್ಯ ಕೃಷಿ ಪಂಪ್‌ಸೆಟ್‌ ಬಳಕೆದಾರರ ಸಂಘ, ಮಹಾದಾಯಿ ನೀರು ಹೋರಾಟ ಸಮಿತಿ, ಓಲಾ ಮತ್ತು ಉಬರ್‌ ಆಟೋ ಚಾಲಕರ ಸಂಘ ಸಹಿತ 100ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಘೋಷಿಸಿವೆ.

ಬೆಳಗಾವಿ, ಬಾಗಲಕೋಟೆ, ಬೀದರ್‌, ದಾವಣಗೆರೆ, ಬಳ್ಳಾರಿ, ಕಲಬುರಗಿ, ಧಾರವಾಡ, ಹುಬ್ಬಳ್ಳಿ , ಶಿವಮೊಗ್ಗ, ಮಂಡ್ಯ, ಮೈಸೂರು, ಚಾಮರಾಜನಗರ ಸಹಿತ ಹಳೆ ಮೈಸೂರು ಭಾಗದ ಜಿಲ್ಲೆಗಳ ರೈತ ಸಂಘಟನೆಗಳು ಹೋರಾಟದಲ್ಲಿ ಭಾಗಿಯಾಗಲಿವೆ. ವಿವಿಧ ಕಾರ್ಮಿಕ ಮತ್ತು ಮಹಿಳಾಪರ ಸಂಘಟನೆಗಳು ಬೆಂಬಲ ನೀಡಿವೆ.

Advertisement

ಕಣ್ಣೊರೆಸುವ ತಂತ್ರ
ಸೋಮವಾರದ ಬಂದ್‌ ಬಗ್ಗೆ ಈಗಾಗಲೇ ಹಲವು ರೈತಪರ ಮತ್ತು ಕನ್ನಡ ಪರ ಸಂಘಟನೆಗಳೊಂದಿಗೆ ಚರ್ಚೆ ನಡೆಸಲಾಗಿದೆ. ರಾಜ್ಯದ ವಿವಿಧೆಡೆ ಪ್ರತಿಭಟನ ಮೆರವಣಿಗೆ ಜತೆಗೆ ಬೈಕ್‌ ರ್ಯಾಲಿ ಕೂಡ ನಡೆಯಲಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ್‌ ಅವರು ಸ್ಪಷ್ಟಪಡಿಸಿದ್ದಾರೆ.

ಯಡಿಯೂರಪ್ಪ ಅವರು ರೈತರ ನಿಯೋಗವನ್ನು ಕರೆದು ಮಾತನಾಡಿಸಿರುವುದು ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಸರಕಾರ ರೈತ ವಿರೋಧಿ ಕೃಷಿ ಮಸೂದೆಗಳನ್ನು ಹಿಂಪಡೆಯುವ ವರೆಗೂ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ.

ರೈತರ ಹೆಸರಿನಲ್ಲಿ ಅಧಿಕಾರದ ಗದ್ದುಗೆ ಏರಿರುವ ಯಡಿಯೂರಪ್ಪ ಅವರು ಈಗ ರೈತರನ್ನು ಬೀದಿಪಾಲು ಮಾಡಲು ಹೊರಟಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಹೇಳಿದ್ದಾರೆ. ಈ ಹಿಂದೆ ದೇವರಾಜ ಅರಸು ಅವರು ಉಳುವವನನ್ನು ಹೊಲದ ಒಡೆಯನನ್ನಾಗಿ ಮಾಡಿದ್ದರು. ಆದರೆ ಈಗಿನ ಸರಕಾರ ಬಂಡವಾಳಶಾಹಿ ವ್ಯವಸ್ಥೆಗೆ ರತ್ನಗಂಬಳಿ ಹಾಕಲು ಹೊರಟಿದ್ದು, ಉದ್ಯಮಿಗಳಿಗೆ ರೈತರ ಭೂಮಿಯನ್ನು ಮಾರಾಟ ಮಾಡಲು ಹೊರಟಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ರೈತರು ಉತ್ತರ ನೀಡಲಿದ್ದಾರೆ ಎಂದಿದ್ದಾರೆ.

ರೈಲು ನಿಲ್ದಾಣ, ಸರಕಾರಿ ಕಚೇರಿಗೆ ಮುತ್ತಿಗೆ
ಬಂದ್‌ಗೆ ಕರ್ನಾಟಕ ರಕ್ಷಣ ವೇದಿಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅದರ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹೇಳಿದ್ದಾರೆ. ಸರಕಾರದ ರೈತ ಮತ್ತು ಕಾರ್ಮಿಕ ವಿರೋಧಿ ಧೋರಣೆ ಖಂಡಿಸಿ ರಾಜ್ಯವ್ಯಾಪಿಯಾಗಿ ತಮ್ಮ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನಲ್ಲಿ ರೈಲ್ವೇ, ವಿಮಾನ ನಿಲ್ದಾಣ ಮತ್ತು ಸರಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಲಿದ್ದಾರೆ. ಬಸ್‌ ಸಂಚಾರ ಆರಂಭಿಸಿದರೆ ಆಗುವ ಅನಾಹುತಗಳಿಗೆ ನಾವು ಕಾರಣರಲ್ಲ ಎಂದು ಎಚ್ಚರಿಸಿದ್ದಾರೆ.

ಮುಚ್ಚಳಿಕೆ ಪ್ರಕ್ರಿಯೆ ಕೈಬಿಡಿ
ಸರಕಾರದ ಆಸ್ತಿಗೆ ಹಾನಿ ಉಂಟಾದರೆ ಅದಕ್ಕೆ ಪ್ರತಿಭಟನೆ ನಡೆಸುವ ಸಂಘಟನೆಗಳೆ ನೇರ ಹೊಣೆ ಎಂದು ಪೊಲೀಸರು ರೈತ ಮತ್ತು ಕನ್ನಡಪರ ಸಂಘಟನೆಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲು ಮುಂದಾಗಿದ್ದಾರೆ. ಇದನ್ನು ಪೊಲೀಸ್‌ ಇಲಾಖೆ ಕೈಬಿಡಬೇಕು. ಯಾವ ಸಂಘಟನೆಗಳು ಕೂಡ ಮುಚ್ಚಳಿಕೆಗೆ ಸಹಿ ಹಾಕಬಾರದು ಎಂದು ವಾಟಾಳ್‌ ನಾಗರಾಜ್‌ ಮನವಿ ಮಾಡಿದ್ದಾರೆ.

ಕರಾವಳಿಯಲ್ಲಿ ಬೆಂಬಲ
ಬಂದ್‌ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ರೈತ ಪರ ಸಂಘಟನೆಗಳು ಮತ್ತು ಕೆಲವು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ವಿವಿಧೆಡೆ ಪ್ರತಿಭಟನಾ ಸಭೆ, ಮೆರವಣಿಗೆ, ರಸ್ತೆ ತಡೆ ಚಳವಳಿ ನಡೆಯಲಿದೆ.
ಬಂದ್‌ ಕರೆ ಹಿನ್ನೆಲೆಯಲ್ಲಿ ಮಂಗಳೂರು ನಗರ ಸಹಿತ ದ. ಕನ್ನಡ ಜಿಲ್ಲೆಯಲ್ಲಿ ವಿಶೇಷ ಬಂದೋಬಸ್ತ್ ಏರ್ಪಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 14 ಸಂಘಟನೆಗಳು ಬೆಂಬಲ ಘೋಷಿಸಿವೆ. ಬಲವಂತದ ಬಂದ್‌ಗೆ ಅವಕಾಶ ಇಲ್ಲ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ. ಉಭಯ ಜಿಲ್ಲೆಗಳಲ್ಲಿ ಸಿಟಿ ಬಸ್‌, ಸರ್ವೀಸ್‌ ಮತ್ತು ಎಕ್ಸ್‌ಪ್ರೆಸ್‌ ಬಸ್‌ ಸಂಚಾರ ಇರಲಿದೆ.

ಏನು ಇರುತ್ತದೆ?
ಔಷಧದ ಅಂಗಡಿ, ಆ್ಯಂಬುಲೆನ್ಸ್‌ , ಹಾಲು ಸಹಿತ ಇನ್ನಿತರ ಅಗತ್ಯ ಸೇವೆಗಳು
– ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌
– ಮೆಟ್ರೋ ಸೇವೆ
– ರೈಲು ಸೇವೆ
– ಹೊಟೇಲ್‌ಗ‌ಳು
– ಎಪಿಎಂಸಿ ಸೇವೆ
– ಕೈಗಾರಿಕೆಗಳು
– ವಿಮಾನ ಯಾನ

ಏನು ಇರುವುದಿಲ್ಲ ?
ವಿ.ವಿ.ಗಳ ಪರೀಕ್ಷೆ, ಓಲಾ ಮತ್ತು ಉಬರ್‌ ಸೇವೆ, ಆಟೋ, ಟ್ಯಾಕ್ಸಿ , ಖಾಸಗಿ ಬಸ್‌ ಸೇವೆ (ಭಾಗಶಃ)

ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಅನುಕೂಲ ಇದೆ. ಶೇ. 90ಕ್ಕೂ ಅಧಿಕ ರೈತರು ಈ ಕಾಯ್ದೆಯನ್ನು ಬೆಂಬಲಿಸಿದ್ದಾರೆ. ವಿಪಕ್ಷಗಳು ಅನಗತ್ಯ ಗೊಂದಲ ಸೃಷ್ಟಿಸ ಬಾರದು. ಕರ್ನಾಟಕ ಬಂದ್‌ ನಿರ್ಧಾರವನ್ನು ಕೈಬಿಡಬೇಕು.
– ಬಿ.ಎಸ್‌. ಯಡಿಯೂರಪ್ಪ , ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next