Advertisement

ಭೂಮಿ, ವಸ‌ತಿ ಹಕ್ಕು ವಂಚಿತರ ಸಮಿತಿ ಪ್ರತಿಭಟನೆ

12:36 AM Aug 08, 2019 | Sriram |

ಮಡಿಕೇರಿ: ಪ್ರಕೃತಿ ವಿಕೋಪದ ನಿರಾಶ್ರಿತರಿಗೆ ಹಾಗೂ ಕಡು ಬಡವರ್ಗದ ಮಂದಿಗೆ ನಿವೇಶನವನ್ನು ಒದಗಿಸಬೇಕೆಂದು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.

Advertisement

ನಗರದ ಗಾಂಧಿ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಸಮಿತಿಯ ಅಧ್ಯಕ್ಷ ನಿರ್ವಾಣಪ್ಪ, 94ಸಿ ಮತ್ತು 94ಸಿಸಿ ಯಡಿ ಸಲ್ಲಿಕೆಯಾಗಿರುವ ಬಡ ವರ್ಗದ ನಿವೇಶನದ ಅರ್ಜಿಗಳು ಜಿಲ್ಲೆಯ ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದ ವಿಲೇವಾರಿಯಾಗದೆ ಬಾಕಿ ಉಳಿದಿದೆ. ದಲಿತರು, ಮುಸ್ಲಿಮರು, ಹಿಂದುಳಿದ ವರ್ಗಗಳು ಹಾಗೂ ಕಡುಬಡವರ ಅಭ್ಯುದಯಕ್ಕೆ ಒತ್ತು ನೀಡದೆ ಕಾಲಹರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಜಿಲ್ಲಾಡಳಿತವನ್ನು ಮತ್ತೆ ಎಚ್ಚರಿಸುವ ಉದ್ದೇಶದಿಂದ ಹೋರಾಟವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಜನಪರ ಒಕ್ಕೂಟದಿಂದ 2014 ರಿಂದ ದಿಡ್ಡಳ್ಳಿ ಹೋರಾಟವನ್ನು ಪ್ರಾರಂಭಿಸಿ ಕೊಡಗಿನ ಮೂಲ ನಿವಾಸಿಗಳಾಗಿರುವ ಆದಿವಾಸಿ ಕುಟುಂಬಗಳ ಸುಮಾರು 530 ಕ್ಕೂ ಹೆಚ್ಚು ಭೂ ಹೀನ ಆಶ್ರಯ ರಹಿತರ ಕುಟುಂಬಗಳನ್ನು ಸರ್ಕಾರದ ಮುಖ್ಯ ವಾಹಿನಿಗೆ ತಂದು ಅವರ ಕುಟುಂಬಕ್ಕೆ ಕನಿಷ್ಟ ನ್ಯಾಯ ದೊರಕಿಸುವ ಕೆಲಸವನ್ನು ನಮ್ಮ ಸಮಿತಿ ಮಾಡಿದೆ ಎಂದರು.

ಸಮಿತಿಯ ಕಾರ್ಯದರ್ಶಿ ಅಮೀನ್‌ ಮೊಹಿಸಿನ್‌ ಮಾತನಾಡಿ, ನಿವೇಶನ ಕೋರಿ ಈಗಾಗಲೇ ಸಾಕಷ್ಟು ಬಾರಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರೂ ಬಡವರ ಬೇಡಿಕೆಗಳನ್ನು ಈಡೇರಿಸುವಲ್ಲಿ ಜಿಲ್ಲಾಡಳಿತ ವಿಫ‌ಲವಾಗಿದೆ. ಕಪ್ರಕೃತಿ ವಿಕೋಪದಿಂದ ಅನೇಕರು ಮನೆಗಳನ್ನು ಕಳೆದುಕೊಂಡಿದ್ದಾರೆ. ಸಂತ್ರಸ್ತರಿಗಾಗಿ ನೂತನ ಮನೆಗಳನ್ನು ತರಾತುರಿಯಲ್ಲಿ ನಿರ್ಮಿಸಲಾಗಿದ್ದು, ಇದರ ಗುಣಮಟ್ಟದ ಬಗ್ಗೆ ಸಂಶಯವಿದೆ ಎಂದು ಟೀಕಿಸಿದರು. ಜಿಲ್ಲೆಯ ಶಾಸಕರುಗಳು ಪ್ರತಿನಿಧಿಸುವ ಸರಕಾರವೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದರೂ ಸಂತ್ರಸ್ತರ ಬಗ್ಗೆ ನಿರೀಕ್ಷಿತ ಕಾಳಜಿ ತೋರುತ್ತಿಲ್ಲವೆಂದು ಅಮೀನ್‌ ಮೊಹಿಸಿನ್‌ ಆರೋಪಿಸಿದರು.

Advertisement

ಲೈನ್‌ ಮನೆ, ಬಾಡಿಗೆ ಮನೆ
ಕಳೆದ ಅನೇಕ ವರ್ಷಗಳಿಂದ ಸಾವಿರಾರು ಕೂಲಿ ಕಾರ್ಮಿಕರು ಲೈನ್‌ ಮನೆ ಹಾಗೂ ಬಾಡಿಗೆ ಮನೆಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರುಗಳಿಗೆ ಭೂಮಿ ಮತ್ತು ವಸತಿ ಹಂಚಿಕೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಸ್ಪಂದನೆ ಸಿಕ್ಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಕೇವಲ ಉಳ್ಳವರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ನಿರ್ವಾಣಪ್ಪ, ಬಡವರ ಭೂಮಿ, ವಸತಿ, ಸ್ಮಶಾನ ಜಾಗದ ಸಮಸ್ಯೆಗಳಿಗೆ ಜಿಲ್ಲಾಡಳಿತ ಸ್ಪಂದಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next