Advertisement

ನಿಯಮ ಉಲ್ಲಂಘಿಸಿ ಭೂಸ್ವಾಧೀನ: ಬಿಡಿಎಗೆ 1.25 ಲಕ್ಷ ದಂಡ

11:29 AM Aug 18, 2017 | Team Udayavani |

ಬೆಂಗಳೂರು: ಐದು ಭೂ ಸ್ವಾಧೀನ ಪ್ರಕರಣಗಳ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ತಲಾ 25 ಸಾವಿರ ರೂ. ದಂಡ ವಿಧಿಸಿ ಹೈಕೋರ್ಟ್‌ ಗುರುವಾರ ಆದೇಶಿಸಿದೆ. ಜ್ಞಾನ ಭಾರತಿ ಬಡಾವಣೆ ಮತ್ತು ಮಾಗಡಿ ರಸ್ತೆ-ಮೈಸೂರು ರಸ್ತೆ ಸಂಪರ್ಕಿಸುವ ಹೊರವರ್ತುಲ ರಸ್ತೆ ನಿರ್ಮಾಣ ಮಾಡಲು ಭೂ ಸ್ವಾಧೀನ ಆದೇಶ ಹೊರಡಿಸದೇ ವಲಗೇರಹಳ್ಳಿ, ನಾಗದೇವನಹಳ್ಳಿ ಮತ್ತು ಬಿಕಾಸಿಪುರದಲ್ಲಿ ಜಮೀನು ವಶಪಡಿಸಿಕೊಂಡಿದ್ದ ಬಿಡಿಎ, ಭೂ ಮಾಲೀಕರಿಗೆ ಯಾವುದೇ ಪರಿಹಾರ ನೀಡಿರಲಿಲ್ಲ.

Advertisement

ವಶಪಡಿಸಿಕೊಂಡ ಭೂಮಿಗೆ ಪ್ರತಿಯಾಗಿ ಭೂ ಮಾಲೀಕರಿಗೆ ಪರ್ಯಾಯ ಜಮೀನು ನೀಡಬೇಕು. ಇಲ್ಲವೇ 2013ರಲ್ಲಿ ಜಾರಿಗೆ ಬಂದಿರುವ ಹೊಸ ಭೂ ಸ್ವಾಧೀನ ಕಾಯ್ದೆ (ಭೂ ಸ್ವಾಧೀನ ಪ್ರಕ್ರಿಯೆಲ್ಲಿ ಪಾರದರ್ಶಕತೆ, ಪರಿಹಾರ ಮತ್ತು ಪುನರ್ವಸತಿ ಹಕ್ಕು ಕಾಯ್ದೆ-2013) ಅನ್ವಯ ಸದ್ಯದ ಮಾರುಕಟ್ಟೆ ಬೆಲೆ ಅನುಸಾರ ಪರಿಹಾರ ನೀಡಬೇಕು. ಆದರೆ ಈ ಯಾವುದೇ ನಿಯಮಗಳನ್ನು ಅನುಸರಿಸದ ಬಿಡಿಎ ಕಾರ್ಯ ವೈಖರಿಯನ್ನು ಹೈಕೋರ್ಟ್‌ ಕಟುವಾಗಿ ಟೀಕಿಸಿತು. ಜತೆಗೆ ಭೂ ಸ್ವಾಧೀನ ಪ್ರಕ್ರಿಯೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಕಟ್ಟಾಜ್ಞೆ ಮಾಡಿದೆ.

“ಸರ್ಕಾರದ ಅಧೀನ ಸಂಸ್ಥೆಯಾಗಿರುವ ಬಿಡಿಎ, ಶಾಸನಗಳಡಿಯಲ್ಲಿ ಸ್ಥಾಪನೆಯಾದ ಮತ್ತು ಕಾನೂನು ಪಾಲನೆ ಮಾಡಬೇಕಿರುವ ಜವಾಬ್ದಾರಿಯುತ ಸಂಸ್ಥೆಯಾಗಿದೆ. ಕಾನೂನು ಪಾಲನೆ ಮಾಡಬೇಕಿರುವ ಸಂಸ್ಥೆಯೇ ಕಾನೂನು ಉಲ್ಲಂಘಿಸಿ, ಆದೇಶ ಹೊರಡಿಸದೇ ಜಮೀನು ವಶಪಡಿಸಿಕೊಂಡಿದೆ.

ಆ ಮೂಲಕ ಬಿಡಿಎಯಿಂದಲೇ ವಂಚನೆ ನಡೆದಿದೆ. ಇದು ಕಾನೂನು ಬಾಹಿರವಾಗಿದ್ದು, ಇಂತಹ ಕಾರ್ಯ ವೈಖರಿಯಿಂದ ಬಿಡಿಎ ದೂರವಿರಬೇಕು. ಕಾನೂನು ಪ್ರಕಾರವೇ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿ ಭೂ ಮಾಲೀಕರಿಗೆ ಪರಿಹಾರ ನೀಡಬೇಕು. ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿ ಕಾನೂನುಗಳನ್ನು ಹಿಂದಿಕ್ಕಬಾರದು,’ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

ಪ್ರಕರಣವೇನು?
ಜ್ಞಾನ ಭಾರತಿ ಬಡಾವಣೆ, ಮಾಗಡಿ ರಸ್ತೆ-ಮೈಸೂರು ರಸ್ತೆ ಸಂಪರ್ಕಿಸುವ ಹೊರವರ್ತುಲ ರಸ್ತೆ ಮತ್ತು ಬನಶಂಕರಿ 5ನೇ ಹಂತ ನಿರ್ಮಾಣಕ್ಕಾಗಿ ನಾಗದೇವನಹಳ್ಳಿಯಲ್ಲಿ ಪೆದ್ದಕ್ಕ ಎಂಬುವವರ 2.2 ಎಕರೆ, ವಲಗೇರಹಳ್ಳಿಯಲ್ಲಿ ಮುನಿರಾಜು ಅವರ 20 ಗುಂಟೆ, ಮಂಜುನಾಥ ಎಂಬುವರಿಗೆ ಸೇರಿದ 2.15 ಎಕರೆ, ಮಹೇಶ್‌ ಅವರ 2.12 ಎಕರೆ, ಬಿಸಾಕಿಪುರದಲ್ಲಿ ರಾಜಲಕ್ಷ್ಮೀ ಎಂಬುವವರ 5.12 ಎಕರೆ ಜಾಗವನ್ನು ಯಾವುದೇ ಭೂ ಸ್ವಾಧೀನ ಆದೇಶ ಹೊರಡಿಸದೆ 2011ರಲ್ಲಿ ಬಿಡಿಎ ವಶಪಡಿಸಿಕೊಂಡಿತ್ತು.

Advertisement

ಅಲ್ಲದೆ, ಇದುವರೆಗೂ ಯಾವುದೇ ಪರಿಹಾರ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಈ ಐವರು ಭೂ ಮಾಲೀಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬಿಡಿಎ ತಮ್ಮಿಂದ ವಶಪಡಿಸಿಕೊಂಡ ಭೂಮಿಗೆ ಪರ್ಯಾಯವಾಗಿ ಜಮೀನು ಮಂಜೂರು ಮಾಡಬೇಕು ಅಥವಾ 2013ರ ಭೂ ಸ್ವಾಧೀನ ಕಾಯ್ದೆಯನ್ವಯ ಪರಿಹಾರ ನೀಡಬೇಕು. ಹಾಗೇ, ಪ್ರಕರಣದಲ್ಲಿ ಈವರೆಗೆ ಬಿಡಿಎ ಮಾಡಿರುವ ಹಾನಿಗೆ ಹಾಗೂ ಕಿರುಕುಳಕ್ಕೆ ನಷ್ಟ ಪರಿಹಾರ ಕಲ್ಪಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.

ಭೂ ಮಾಲೀಕರ ಎಲ್ಲ ಅರ್ಜಿಗಳನ್ನು ಮಾನ್ಯ ಮಾಡಿದ ಹೈಕೋರ್ಟ್‌, ಐದು ಭೂ ಸ್ವಾಧೀನ ಪ್ರಕರಣಗಳಲ್ಲೂ ಬಿಡಿಎಗೆ ಪ್ರತ್ಯೇಕವಾಗಿ 25 ಸಾವಿರ ರೂ. ದಂಡ ವಿಧಿಸಿ, ಅದನ್ನು ಭೂ ಮಾಲೀಕರಿಗೆ ನಷ್ಟ ಪರಿಹಾರವಾಗಿ ನೀಡಬೇಕು. ಹಾಗೆಯೇ, ಅರ್ಜಿದಾರರ ಹೆಸರಿಗೆ ನೀಡಲಾಗಿರುವ ನಿವೇಶನಗಳ ಸಂಬಂಧ ಕ್ರಯಪತ್ರ ಮಾಡಿಸಿಕೊಡಬೇಕು ಎಂದು ಬಿಡಿಎಗೆ ನಿರ್ದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next