Advertisement
ಸುಪ್ರೀಂ ತೀರ್ಪು ಭೂಮಾಲೀಕರು, ರೈತರು, ಈಗಾಗಲೇ ಮನೆ, ಕಟ್ಟಡಗಳನ್ನು ನಿರ್ಮಿಸಿಕೊಂಡ ನೂರಾರು ಜನರ ಸೇರಿದಂತೆ ಶಿವರಾಮ ಕಾರಂತ ಬಡಾವಣೆ ಭೂಸ್ವಾಧೀನ ವ್ಯಾಪ್ತಿಯ ಸುಮಾರು 17ಕ್ಕೂ ಹೆಚ್ಚು ಹಳ್ಳಿಗಳಿಗೆ ಸೇರಿದ ಜಮೀನು ಕಳೆದುಕೊಳ್ಳಲಿರುವ ಕುಟುಂಬಗಳು ಮತ್ತೂಂದು ಸುತ್ತಿನ ಕಾನೂನು ಹೋರಾಟ ನಡೆಸುವ ಅನಿವಾರ್ಯತೆಯನ್ನು ತಂದೊಡ್ಡಿದೆ. ಜೊತೆಗೆ ಬೀದಿ ಹೋರಾಟಕ್ಕೆ ಸಜ್ಜಾಗುವಂತೆ ಮಾಡಿದೆ.
Related Articles
Advertisement
ಸುದೀರ್ಘ ಕಾನೂನು ಹೋರಾಟ: ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಭೂಸ್ವಾಧೀನಕ್ಕೆ ಬಿಡಿಎ 2008ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಆದಾದ 10 ವರ್ಷಗಳ ಬಳಿಕ 3,546 ಎಕರೆ ಜಮೀನು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಈ ಮಧ್ಯೆ ರೈತರ ಆಕ್ಷೇಪಣೆ ಹಿನ್ನೆಲೆಯಲ್ಲಿ 257 ಎಕರೆ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಸರ್ಕಾರ ಬಿಡಿಎಗೆ ಸೂಚಿಸಿತ್ತು.
ಮತ್ತೇ 446 ಎಕರೆ ಜಮೀನು ಭೂಸ್ವಾಧೀನದಿಂದ ಕೈಬಿಡುವಂತೆ ಒತ್ತಾಯ ಕೇಳಿ ಬಂದಿತ್ತು. ಇದರಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. 2012ರಲ್ಲಿ ಈ ವಿಚಾರ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆಗೆ ಬಂದು, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿತ್ತು.
ಈ ಮಧ್ಯೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ 5 ವರ್ಷಗಳಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿಲ್ಲ ಎಂದು ಆಕ್ಷೇಪಿಸಿ ಕೆಲವು ರೈತರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಏಕಸದಸ್ಯ ಪೀಠ ಹಾಗೂ ವಿಭಾಗೀಯ ಪೀಠ ರೈತರ ಪರ ತೀರ್ಪು ಕೊಟ್ಟಿತ್ತು.
ಇದನ್ನು ಬಿಡಿಎ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಮೂರು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ 2018ರಲ್ಲಿ ಸುಪ್ರೀಂ ಹೇಳಿತ್ತು. ಇದನ್ನು ಪ್ರಶ್ನಿಸಿ ಕೆಲವರು ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಮೇಲ್ಮನವಿಗಳನ್ನು ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿದೆ.
ಡಾ.ಶಿವರಾಮ ಕಾರಂತ ಬಡಾವಣೆಯ ಜಮೀನು ಸ್ವಾಧೀನ ಪ್ರಕ್ರಿಯೆ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಪಾಲನೆ ಮಾಡಲಾಗುವುದು.-ರಾಕೇಶ್ ಸಿಂಗ್, ಬಿಡಿಎ ಆಯುಕ್ತರು. ಶಿವರಾಮ ಕಾಂರತ ಬಡಾವಣೆಯಲ್ಲಿ 3,542 ಎಕರೆ ಭೂಮಿ ಇದ್ದು, ಆ ಜಾಗದಲ್ಲಿ ಈಗಾಗಲೇ ಸುಮಾರು 15 ರಿಂದ 20 ಸಾವಿರ ಮುಂದಿ ಮನೆ ಕಟ್ಟಿಕೊಂಡಿದ್ದಾರೆ. ಇದರಲ್ಲಿ ಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನ್ಯಾಯಾಲಯದ ಆದೇಶದಿಂದ ಇವರೆಲ್ಲರೂ ಬೀದಿಗೆ ಬರುವ ಆತಂಕದಲ್ಲಿದ್ದು, ಸುಪ್ರೀಂ ಆದೇಶ ಪ್ರಶ್ನಿಸಿ “ಪರಿಹಾರಕ ಅರ್ಜಿ’ ಸಲ್ಲಿಸಲಾಗುವುದು’
-ಬಿ.ಆರ್. ನಂಜುಂಡಪ್ಪ, ಅಧ್ಯಕ್ಷರು, ಎಸ್‌ಕೆ ಬಡಾವಣೆ ಸಂತ್ರಸ್ತರ ಹಿತಾರಕ್ಷಣಾ ಸಮಿತಿ. ಸರ್ಕಾರ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ. ಇಲ್ಲದಿದ್ದರೆ ಬಿಡಿಎ ಕಚೇರಿ ಎದುರು ಮತ್ತೆ ಹೋರಾಟ ನಡೆಸಲಾಗುವುದು. ಈ ಪ್ರಕರಣದಲ್ಲಿ ಬಿಡಿಎ ಸುಪ್ರೀಂಕೋರ್ಟ್‌ಗೆ ವಾಸ್ತವ ಸ್ಥಿತಿಯನ್ನು ಮುಚ್ಚಿಟ್ಟು, ತನಗೆ ಅನುಕೂಲವಾಗುವಂತೆ ಮಾಹಿತಿ ನೀಡಿದೆ. ಸರ್ಕಾರ ತೆಗೆದುಕೊಳ್ಳುವ ತೀರ್ಮಾನದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು.
-ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡ.