Advertisement

ಸರ್ಕಾರದಿಂದಲೇ ಭೂಸ್ವಾಧೀನ ಹಣ

12:07 PM Nov 20, 2018 | |

ಬೆಂಗಳೂರು: ರಾಜಧಾನಿಯ ಸಂಚಾರ ದಟ್ಟಣೆ ನಿವಾರಣೆಗಾಗಿ 2005ರಲ್ಲಿ ರೂಪಿಸಿದ್ದ ಪೆರಿಫೆರಲ್‌ ರಿಂಗ್‌ ರಸ್ತೆಗೆ ಅಗತ್ಯವಾದ ಭೂ ಸ್ವಾಧೀನ ವೆಚ್ಚ 4500 ಕೋಟಿ ರೂ. ರಾಜ್ಯ ಸರ್ಕಾರವೇ ಭರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

Advertisement

ಇದರಿಂದಾಗಿ ಯೋಜನೆಗೆ ಇದ್ದ ದೊಡ್ಡ ಸವಾಲು ನಿವಾರಣೆಯಾಗಿದ್ದು, ಆದಷ್ಟು ಬೇಗ ಯೋಜನೆಯ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಯೋಜನೆಗಾಗಿ ಒಟ್ಟು 1810 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಿದೆ. 65 ಕಿ..ಮೀ ಉದ್ದ, 75 ಮೀ. ಅಗಲದ ರಸ್ತೆ ನಿರ್ಮಾಣವಾಗಲಿದ್ದು, ಯೋಜನೆಗೆ 17 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಖಾಸಗಿ ಸಾರ್ವಜನಿಕ ಸಹಭಾಗಿತ್ವದಡಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಈಗಾಗಲೇ ನಗರದ ಒಂದು ಭಾಗದ ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ ಮಾರ್ಗದಲ್ಲಿ ಹೊರವರ್ತುಲ ರಸ್ತೆಯನ್ನು ನೈಸ್‌ ಸಂಸ್ಥೆಯಿಂದ ನಿರ್ಮಿಸಲಾಗಿದೆ. ಅದರ ಮುಂದುವರಿದ ಭಾಗವಾಗಿ ಪೆರಿಫೆರಲ್‌ ರಸ್ತೆ ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆ, ಹಳೇ ಮದ್ರಾಸ್‌ ರಸ್ತೆ, ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸಲಿದೆ. ಇದರಿಂದ ಒಂದು ಸುತ್ತು  ರಸ್ತೆ ನಿರ್ಮಾಣವಾದಂತಾಗುತ್ತದೆ.

ಈ ಮಾರ್ಗದಿಂದ ನಗರದ ಸಂಚಾರ ದಟ್ಟಣೆ ನಿವಾರಣೆಯಾಗಲಿದೆ. ಮೆಟ್ರೋ, ಸಬ್‌ ಅರ್ಬನ್‌ ರೈಲು ಜತೆಗೆ ಹೊರವರ್ತುಲ ರಸ್ತೆ, ಪೆರಿಫೆರಲ್‌ ರಿಂಗ್‌ ರಸ್ತೆ, ಸಿಗ್ನಲ್‌ ಮುಕ್ತ ಕಾರಿಡಾರ್‌ ಹೀಗೆ ಎಲ್ಲ ರೀತಿಯಲ್ಲೂ ನಗರದ ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ ಸರ್ಕಾರ ಕೈಗೊಳ್ಳುತ್ತಿದೆ ಎಂದು ಹೇಳಿದರು.

Advertisement

ಪೆರಿಫೆರಲ್‌ ರಿಂಗ್‌ ರಸ್ತೆಯಲ್ಲಿ ಟೋಲ್‌ ವಸೂಲಿ ಮೂಲಕ ವೆಚ್ಚ ಭರಿಸಲಾಗುವುದು. ಯೋಜನೆಗೆ ದೊಡ್ಡ ಮೊತ್ತ ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರದ ನಗರಮಾಲಾ ಯೋಜನೆಯ ನೆರವು ಸಿಗಬಹುದು ಎಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಆದರೆ, ಕೇಂದ್ರದಿಂದ ಯಾವುದೇ ರೀತಿಯ ಸ್ಪಂದನೆ ದೊರೆಯಲಿಲ್ಲ. ಹೀಗಾಗಿ, ರಾಜ್ಯ ಸರ್ಕಾರವೇ ಭೂ ಸ್ವಾಧೀನ ವೆಚ್ಚ ಭರಿಸುವ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಇದರಿಂದ ಆರ್ಥಿಕ ಹೊರೆಯಾಗಬಹುದು.ಆದರೆ, ಯೋಜನೆ ಪೂರ್ಣಗೊಳಿಸಲು ಇದು ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂದು ತಿಳಿಸಿದರು.

ಹೊಸಕೋಟೆ ಕೆರೆಗಳಿಗೆ ಸಂಸ್ಕರಿಸಿದ ನೀರು: ಇದೇ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ 30 ಕೆರೆಗಳಿಗೆ ಬೆಂಗಳೂರಿನ ತಾಜ್ಯ ನೀರು ಸಂಸ್ಕರಿಸಿ ಹರಿಸಲು ಸಣ್ಣ ನೀರಾವರಿ ಇಲಾಖೆಯ 100 ಕೋಟಿ ರೂ. ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ. 

ಜಯದೇವದಲ್ಲಿ ಹೆಚ್ಚುವರಿ 1150 ಹಾಸಿಗೆ: ಪ್ರತಿಷ್ಠಿತ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಹೆಚ್ಚುವರಿಯಾಗಿ 1150 ಹಾಸಿಗೆ ವ್ಯವಸ್ಥೆ ಕಲ್ಪಿಸುವ 45 ಕೋಟಿ ರೂ. ಯೋಜನೆಗೂ ಸಂಪುಟ ಒಪ್ಪಿಗೆ ನೀಡಿದೆ. ಈ ಪೈಕಿ ರಾಜ್ಯ ಸರ್ಕಾರ 22.50 ಕೋಟಿ ರೂ. ನೀಡಲಿದ್ದು, ಉಳಿದ 22.50 ಕೋಟಿ ರೂ.ಗಳನ್ನು ಜಯದೇವ ಹೃದ್ರೋಗ ಸಂಸ್ಥೆ ಭರಿಸಲಿದೆ.

ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಬರುವ ನೀರು ಶುದ್ಧೀಕರಿಸಿ ಬಿಡಲು ಸಂಸ್ಕರಣ ಘಟಕ ಸ್ಥಾಪಿಸುವುದು ಹಾಗೂ ಎತ್ತಿನಹೊಳೆ ಯೋಜನೆಯಡಿ ಲಭ್ಯವಾಗುವ 2.5 ಟಿಎಂಸಿ ನೀರು ಸಂಗ್ರಹಿಸಿ ಕುಡಿಯಲು ಪೂರೈಕೆ ಮಾಡುವ ಮೊದಲ ಹಂತದ 284.95 ಕೋಟಿ ರೂ. ಯೋಜನೆಗೆ ಸಂಪುಟ ಒಪ್ಪಿಗೆ ನೀಡಿತು.

ನೆಲಮಹಡಿ ಜತೆ 14 ಅಂತಸ್ತು ನಿರ್ಮಾಣ: ಮುಖ್ಯಮಂತ್ರಿಗಳ ಒಂದು ಲಕ್ಷ ಮನೆಗಳ ಸಮುತ್ಛಯದಲ್ಲಿ ಈ ಹಿಂದೆ ನಿರ್ಧರಿಸಿದ್ದ ನೆಲಮಹಡಿ ಮತ್ತು 3 ಅಂತಸ್ತು ಬದಲಿಗೆ ನೆಲಮಹಡಿ ಮತ್ತು 14 ಅಂತಸ್ತು ನಿರ್ಮಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಬೆಂಗಳೂರಿನಲ್ಲಿ ವಸತಿ ಯೋಜನೆಗೆ ಹೆಚ್ಚು ಜಾಗ ಲಭ್ಯ ಇರದ ಕಾರಣ ಇರುವ ಜಾಗದಲ್ಲೇ ಹೆಚ್ಚುವರಿ ಅಂತಸ್ತು ನಿರ್ಮಿಸಿದರೆ ಹೆಚ್ಚು ಫ‌ಲಾನುಭವಿಗಳಿಗೆ ನೀಡಬಹುದು ಎಂಬ ಕಾರಣಕ್ಕೆ  ಈ ತೀರ್ಮಾನ ಕೈಗೊಳ್ಳಲಾಗಿದೆ.

ಜತೆಗೆ ರಾಜ್ಯ ಸರ್ಕಾರವು ಯೋಜನೆಯಡಿ ಫ‌ಲಾನುಭವಿಗಳಿಗೆ 3 ಲಕ್ಷ ರೂ.ವರೆಗೆ ನೆರವು ನೀಡಲಿದ್ದು  ಉಳಿದ ಹಣ ಫ‌ಲಾನುಭವಿಗಳು ಭರಿಸಬೇಕು ಎಂದು  ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಈಗಾಗಲೇ 50 ಸಾವಿರ ಅರ್ಜಿಗಳು ಬಂದಿವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next