Advertisement

ಭೂ ಖರೀದಿಯಲ್ಲಿ ಸರ್ಕಾರದಿಂದಲೇ ವಂಚನೆ?

12:10 PM May 06, 2017 | Harsha Rao |

ಚಿತ್ರದುರ್ಗ: ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌, ಆಶ್ರಯ ಮನೆಗಳ ನಿರ್ಮಾಣಕ್ಕೆ ಬೇಕಾದ ಜಮೀನು ಖರೀದಿ
ವಿಚಾರದಲ್ಲಿ ಸರ್ಕಾರವೇ ರೈತರಿಗೆ ವಂಚನೆ ಮಾಡಿರುವುದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಚಳ್ಳಕೆರೆ ತಾಲೂಕಿನ ನೆಲಗೇತನ ಹಟ್ಟಿಯಲ್ಲಿ ಈ ಪ್ರಕರಣ ನಡೆದಿದೆ.

Advertisement

ಗ್ರಾಮದ ರೈತರಾದ ಸಣ್ಣಬೋರಯ್ಯ ಅವರು 12-6-1998ರಂದು ಹಾಗೂ ದೊಡ್ಡಬೋರಯ್ಯ ಎಂಬುವರು 24-1-
2002ರಂದು ಮೃತಪಟ್ಟಿದ್ದಾರೆ. ಹಿಂದೂ ಅವಿಭಾಜ್ಯ ಕುಟುಂಬ ಕಾಯ್ದೆಯ ಪ್ರಕಾರ ಆಸ್ತಿ ಹಕ್ಕಿನ ಬದಲಾವಣೆ ಆಗಬೇಕು.
ಮೊದಲು ಪತ್ನಿ ಹೆಸರಿಗೆ, ಪತ್ನಿ ಇಲ್ಲದಿದ್ದರೆ ಕುಟುಂಬದ ಹಿರಿಯ ಮಗನಿಗೆ ಪೌತಿ ಖಾತೆ ಮಾಡಿಕೊಡಬೇಕು.

ಒಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಅವರ ಒಪ್ಪಿಗೆ ಮೇರೆಗೆ ಏಕವ್ಯಕ್ತಿಗೆ ಖಾತೆ ಮಾಡಿಕೊಡಬಹುದಾಗಿದೆ. ಇಲ್ಲವಾದರೆ ಜಂಟಿ ಖಾತೆಯಲ್ಲಿ ಎಲ್ಲರ ಹೆಸರಿಗೆ ಮಾಡಬೇಕಾಗುತ್ತದೆ. ಆದರೆ, ನೆಲಗೇತನಹಟ್ಟಿಯ ಪ್ರಕರಣದಲ್ಲಿ ಈ ಕಾಯ್ದೆಯ ಉಲ್ಲಂಘನೆಯಾಗಿದೆ ಎನ್ನಲಾಗಿದೆ.

ವಂಚನೆ ನಡೆದಿದ್ದು ಹೀಗೆ: ಸಣ್ಣಬೋರಯ್ಯ ಹಾಗೂ ದೊಡ್ಡಬೋರಯ್ಯ ಮೃತಪಟ್ಟಿದ್ದರೂ ಅಧಿಕಾರಿಗಳು ಅವರ ಮಕ್ಕಳಿಗೆ ಪೌತಿ ಖಾತೆಯನ್ನೇ ಮಾಡಿಕೊಟ್ಟಿಲ್ಲ. ತಂದೆಯ ಹೆಸರಿನಲ್ಲೇ ಚಳ್ಳಕೆರೆ ನೋಂದಣಾಧಿಕಾರಿಗಳ ಕಚೇರಿಯಲ್ಲಿ 24-4-2004ರಂದು ಕರ್ನಾಟಕ ಸರ್ಕಾರದ ರಾಜ್ಯಪಾಲರ ಹೆಸರಿನಲ್ಲಿ ಚಳ್ಳಕೆರೆ ತಾಲೂಕು ಸಮಾಜ ಕಲ್ಯಾಣ ಇಲಾಖೆ,
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಎಚ್‌.ಆರ್‌. ಬಾಲಕೃಷ್ಣ ಹೆಸರಿಗೆ 20 ಗುಂಟೆ ಜಮೀನನ್ನು ದಾನಪತ್ರ ಮಾಡಿಸಲಾಯಿತು. ಅಲ್ಲದೆ 11-1-2008ರಂದು 7.33 ಎಕರೆ ಜಾಗವನ್ನು ಚಳ್ಳಕೆರೆ ತಹಶೀಲ್ದಾರ್‌ ಹೆಸರಿನಲ್ಲಿ ಖಾತೆ ಬದಲಾವಣೆ ಮಾಡಲಾಗಿದೆ. ಪ್ರತಿ ಎಕರೆಗೆ ಅಂದಿನ ಮಾರುಕಟ್ಟೆ ದರವಾದ 19,200 ರೂ. ನೀಡಲಾಗಿದೆ. ಮೊದಲು ಖರೀದಿಸಿದ 20 ಗುಂಟೆ ಜಾಗದಲ್ಲಿ ಸಮಾಜಕಲ್ಯಾಣ ಇಲಾಖೆಯ ಹಾಸ್ಟೆಲ್‌, ತಹಶೀಲ್ದಾರ್‌ ಹೆಸರಿಗೆ ವರ್ಗಾವಣೆಗೊಂಡಿದ್ದ 7.33 ಎಕರೆ ಜಾಗದಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕೆ ಸರ್ಕಾರ ನಿವೇಶನ ಹಂಚಿಕೆ ಮಾಡಿದೆ.

ದುಪ್ಪಟ್ಟು ಪರಿಹಾರ ತಪ್ಪಿಸುವ ತಂತ್ರವೇ?:
ಆಶ್ರಯ ಮನೆಗಳ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲಾಗಿರುವ 7.33 ಎಕರೆ ಜಮೀನು ಖರೀದಿಸುವಾಗಲೂ ಸರ್ಕಾರ ಈ ಮೇಲಿನ ತಂತ್ರವನ್ನೇ ಅನುಸರಿಸಿದ್ದು ಕಂಡು ಬಂದಿದೆ. ಈ ಜಮೀನು ಕೂಡ ದೊಡ್ಡಬೋರಯ್ಯ ಹಾಗೂ ಸಣ್ಣ ಬೋರಯ್ಯ ಅವರಿಗೆ ಸೇರಿದ್ದಾಗಿದೆ. ದೊಡ್ಡ ಬೋರಯ್ಯ ಅವರಿಗೆ ಎಂ.ಬಿ.ಬೋರಯ್ಯ ಮತ್ತು ಓಬಯ್ಯ ಎಂಬ ಮಕ್ಕಳಿದ್ದಾರೆ.

Advertisement

ಮೀಸೆಬೋರಯ್ಯ, ಎಂ.ಬಿ. ಓಬಯ್ಯ, ಎಂ.ಬಿ. ಸಣ್ಣಬೋರಯ್ಯ ಅವರು ಸಣ್ಣ ಬೋರಯ್ಯ ಅವರ ಪುತ್ರರಾಗಿದ್ದಾರೆ.
ಸರ್ಕಾರ ನಯವಾಗಿ ಮಾಡಿದ ವಂಚನೆ ಇವರಿಗೆ ಗೊತ್ತಾಗುವಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ತಮಗೆ ಮೋಸವಾಗಿದ್ದನ್ನು ಅರಿತ ಅವರೆಲ್ಲರೂ ನ್ಯಾಯಪಡೆಯಲು ಸಾಕಷ್ಟು ಹೋರಾಟ ಮಾಡಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಅಂತಿಮವಾಗಿ ಮಾಧ್ಯಮದವರೆದುರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ರೈತರಿಂದ ಭೂಸ್ವಾಧೀನ ಮಾಡಿ ಕೊಂಡಲ್ಲಿ ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಪರಿಹಾರ ನೀಡಬೇಕಾಗುತ್ತದೆ.

ಆದರೆ ಸರ್ಕಾರ ಇಲ್ಲಿಯೂ ಬುದ್ಧಿವಂತಿಕೆ ಮಾಡಿ ರಿಯಲ್‌ ಎಸ್ಟೇಟ್‌ ಉದ್ದಿಮೆ ಮಾದರಿಯಲ್ಲಿ ಕೇವಲ 19,200 ರೂ.
ಗಳ ಮಾರುಕಟ್ಟೆ ದರದಲ್ಲಿ ಜಮೀನು ಖರೀದಿ ಮಾಡಿದೆ. ಇಡೀ ಪ್ರಕರಣದಲ್ಲಿ ಅವ್ಯವಹಾರ, ವಂಚನೆ ನಡೆದಿದೆ ಎಂದು
ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next