ದಾವಣಗೆರೆ: ಹಳೆ ದಾಖಲೆಗಳನ್ನು ತಿದ್ದಿ ಸಾರ್ವಜನಿಕ ಆಸ್ತಿ ಕಳ್ಳತನ ತಪ್ಪಿಸಲು ವಿಶೇಷ ಕ್ರಮ ವಹಿಸಿರುವ ದಾವಣಗೆರೆ ಮಹಾನಗರ ಪಾಲಿಕೆ, ಅರ್ಧ ಶತಮಾನದ ಹಳೆಯ ದಾಖಲೆಯ ಪ್ರತಿಯೊಂದು ಪ್ರತಿಯನ್ನೂ ಲ್ಯಾಮಿನೇಶನ್ ಮಾಡಿದೆ.
ಸಾರ್ವಜನಿಕ ಆಸ್ತಿಗಳಾದ ಉದ್ಯಾನವನ, ನಾಗರಿಕ ನಿವೇಶನ ಒತ್ತುವರಿ ಸೇರಿದಂತೆ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಜಾಗೆಯನ್ನು ಹಳೆಯ ದಾಖಲೆ ತಿದ್ದಿ ಕಬಳಿಸುತ್ತಿರುವ ಕೆಲವು ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪಾಲಿಕೆ ಈ ಹೊಸ ಕ್ರಮ ಕೈಗೊಂಡಿದೆ.
ಹಳೆಯ ದಾಖಲೆಯ ಪ್ರತಿಯೊಂದು ಪುಟವನ್ನೂ ಲ್ಯಾಮಿನೇಶನ್ ಮಾಡಿಸಲಾಗಿದೆ. ಲ್ಯಾಮಿನೇಶನ್ ಮಾಡಿದ ಲಕ್ಷಾಂತರ ಪುಟಗಳನ್ನು ವ್ಯವಸ್ಥಿತವಾಗಿ ಬಂಡಿಂಗ್ ಸಹ ಮಾಡಿಸಿದ್ದು ಅದಕ್ಕಾಗಿ ವಿಶೇಷ ರೀತಿಯ ರ್‍ಯಾಕ್ ಸಹ ಮಾಡಿಸಲಾಗಿದೆ. ಜತೆಗೆ ದಾಖಲೆಗಳ ಕೊಠಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಭೂಗಳ್ಳರ ಮೇಲೆ ಹದ್ದಿನ ಕಣ್ಣಿಡುವ ವ್ಯವಸ್ಥೆ ಮಾಡಿದೆ. ಇದರಿಂದಾಗಿ ಇನ್ನು ಮುಂದೆ ಯಾರೂ ಹಳೆಯ ದಾಖಲೆ ತಿದ್ದಿ ಬೇರೆಯವರ ಹೆಸರಿಗೆ ಆಸ್ತಿ ಲಪಟಾಯಿಸಲು ಅವಕಾಶವೇ ಇಲ್ಲದಂತೆ ಮಾಡಿದೆ.
40 ಕೋಟಿ ಆಸ್ತಿ ಜಪ್ತಿ…
ಹಳೆಯ ದಾಖಲೆಗಳಿಗೆ ಲ್ಯಾಮಿನೇಶನ್ ಮಾಡಿರುವ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಾಲಿಕೆ ಮಹಾಪೌರ ಕೆ. ಚಮನ್‌ಸಾಬ್, 1948ರಿಂದ 2000ನೇ ಇಸವಿವರೆಗೆ ಪಾಲಿಕೆಯ ಜಾಗೆ ಕಬಳಿಸಿದ ಅಂದಾಜು 40 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪಾಲಿಕೆ ಜಪ್ತಿ ಮಾಡಿದೆ ಎಂದು ತಿಳಿಸಿದರು