ಹೊಸದಿಲ್ಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಆರ್‌ಜೆಡಿ ನಾಯಕ ಲಾಲು ಕುಟುಂಬದ ಮೇಲೆ ಸಿಬಿಐ ದಾಳಿ ನಡೆಸಿದ ಬೆನ್ನಲ್ಲೇ ಶನಿವಾರ ಲಾಲು ಪುತ್ರಿ ಮಿಸಾ ಭಾರ್ತಿ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿ ಮಿಸಾ ಭಾರ್ತಿ ಹಾಗೂ ಪತಿ ಶೈಲೇಶ್ ಕುಮಾರ್ ಅವರಿಗೆ ಸೇರಿದ ಮೂರು ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಅಷ್ಟೇ ಅಲ್ಲ, ಶೈಲೇಶ್ ಅವರನ್ನು ಇ.ಡಿ. ಅಧಿಕಾರಿಗಳು ವಿಚಾರಣೆಗೆಂದು ಕರೆದೊಯ್ದಿದ್ದಾರೆ ಎಂದೂ ಹೇಳಲಾಗಿದೆ.
ದಿಲ್ಲಿಯಲ್ಲಿರುವ ಟೋರ್ನಿ, ಬಿಜ್ವಾಸನ್ ಮತ್ತು ಸೈನಿಕ್ ಫಾರ್ಮ್ಹೌಸ್‌ಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಕೆಲವು ದಾಖಲೆ ಪತ್ರಗಳು, ಫೋನ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಕ್ಕೆ ಪಡೆದುಕೊಂಡಿದ್ದು, ದಾಖಲೆಗಳ ಕುರಿತು ಕೆಲವು ಪ್ರಶ್ನೆಗಳನ್ನೂ ಕೇಳಿದ್ದಾರೆ. ಅಧಿಕೃತ ಸಮನ್ಸ್ ಜಾರಿ ಮಾಡಿದ ಬಳಿಕ ಇಬ್ಬರನ್ನೂ ವಿಸ್ತೃತ ವಿಚಾರಣೆಗೆ ಒಳಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯ ಸಹೋದರರಿಬ್ಬರ 8 ಸಾವಿರ ಕೋಟಿ ಅವ್ಯವಹಾರ ಸಂಬಂಧ ಈ ದಾಳಿ ನಡೆದಿದೆೆ. ಈ ಸಹೋದರರಿಗೂ ಲಾಲು ಕುಟುಂಬದ ಸಂಸ್ಥೆಗೂ ನಂಟಿರುವುದು ಪತ್ತೆಯಾಗಿದೆ.
ಲಾಲುಗೆ ಕಾಂಗ್ರೆಸ್ ಬೆಂಬಲ: ಏತನ್ಮಧ್ಯೆ, ಶನಿವಾರ ಕಾಂಗ್ರೆಸ್‌ನ ಕೆಲವು ನಾಯಕರು ಲಾಲು ಮನೆಗೆ ಭೇಟಿ ನೀಡಿ, ಬೆಂಬಲ ಸೂಚಿಸಿದ್ದಾರೆ. ಮಿತ್ರಪಕ್ಷ ಜೆಡಿಯು ಮಾತ್ರ ಈ ವಿಚಾರದಲ್ಲಿ ಮೌನ ವಹಿಸಿದೆ. ಇದೇ ವೇಳೆ, ಸಿಬಿಐ ದಾಳಿ ವಿಚಾರವನ್ನು ಸರಕಾರಕ್ಕೆ ಮೊದಲೇ ತಿಳಿಸಲಾಗಿತ್ತು ಎಂಬ ವರದಿಯನ್ನು ಸರಕಾರ ಅಲ್ಲಗಳೆದಿದೆ.