Advertisement

ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪ್ರಕಟ

12:03 PM Jan 04, 2017 | Team Udayavani |

ಬೆಂಗಳೂರು: ರಾಜ್ಯ ಲಲಿತಕಲಾ ಅಕಾಡೆಮಿಯ 2016ನೇ ಸಾಲಿನ ಸುವರ್ಣ ಗೌರವ ಫೆಲೋಶಿಪ್‌ಗೆ ಹಿರಿಯ ಕಲಾವಿದ ಎಸ್‌.ಜಿ.ವಾಸುದೇವ್‌ ಹಾಗೂ ಜೀವಮಾನ ಸಾಧನೆಯ ವಾರ್ಷಿಕ ಗೌರವ ಪ್ರಶಸ್ತಿಗೆ ಮಾರ್ಥ ಝಕಿಮೋವಿಜ್‌ ಸೇರಿದಂತೆ ಮೂವರನ್ನು ಆಯ್ಕೆ ಮಾಡಲಾಗಿದೆ. 

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಕಾಡೆಮಿ ಅಧ್ಯಕ್ಷ ಎಂ.ಎಸ್‌.ಮೂರ್ತಿ, ಜ.23ರಂದು ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಭವನದಲ್ಲಿ ನಡೆಯಲಿರುವ 45ನೇ ವಾರ್ಷಿಕ ಕಲಾ ಪ್ರದರ್ಶನ ಮತ್ತು 2016ನೇ ಸಾಲಿನ “ಗೌರವ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಗೌರವ ಫೆಲೋಶಿಪ್‌ ನೀಡಲಾಗುವುದು ಎಂದು ಹೇಳಿದರು.

ವಾರ್ಷಿಕ ಗೌರವ ಪ್ರಶಸ್ತಿಗೆ ಹಿರಿಯ ಕಲಾವಿದರಾದ ಮಾರ್ಥ ಝಕಿಮೋವಿಜ್‌ (ಬೆಂಗಳೂರು), ಬಾಬುರಾವ್‌ ವಿ.ನಡೋಣಿ (ಬೆಳಗಾವಿ), ಕೆ.ಕೆ.ಮಕಾಳಿ (ಬಳ್ಳಾರಿ) ಅವರನ್ನು ಆಯ್ಕೆ ಮಾಡಲಾಗಿದೆ.  ಈ ಪ್ರಶಸ್ತಿ ಪುರಸ್ಕೃತ ಕಲಾವಿದರಿಗೆ 50 ಸಾವಿರ ನಗದು, ಪ್ರಶಸ್ತಿ ಫ‌ಲಕ ನೀಡಿ ಗೌರವಿಸಲಾಗುವುದು.

ಗೌರವ ಫೆಲೋಶಿಪ್‌ಗೆ ಆಯ್ಕೆಯಾದ ಹಿರಿಯ ಕಲಾವಿದರಿಗೆ 2 ಲಕ್ಷ ನಗದು, ಪ್ರಶಸ್ತಿ ಫ‌ಲಕ ನೀಡಲಾಗುವುದು. ಆ ಕಲಾವಿದರು 2 ಕಲಾಕೃತಿಗಳನ್ನು ಅಕಾಡೆಮಿಗೆ ಕೊಡುವಂತೆ ಮನವಿ ಮಾಡಿದ್ದು, ಆ ಕಲಾಕೃತಿಗಳನ್ನು ಅಕಾಡೆಮಿಯಲ್ಲಿ ಸಂಗ್ರಹಿಸಿಡಲಾಗುವುದು. ಅಂತೆಯೇ ಫೆಲೋಶಿಪ್‌ ಪಡೆದ ವಿದ್ಯಾರ್ಥಿಗಳು ಕೂಡ ತಲಾ ಒಂದೊಂದು ಕಲಾಕೃತಿಗಳನ್ನು ಅಕಾಡೆಮಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು. 

ಕಳೆದ ವರ್ಷ ಕೇವಲ 12 ಕಲಾವಿದರಿಗೆ ಫೆಲೋಶಿಪ್‌ ನೀಡಲಾಗಿತ್ತು. 2016-17ನೇ ಸಾಲಿನ ಫೆಲೋಶಿಪ್‌ಗಾಗಿ ಈ ಬಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗದವರು ಸೇರಿದಂತೆ 22 ಮಂದಿ ಸಂಶೋಧನಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ ಸಂಶೋಧನಾ ಅಭ್ಯರ್ಥಿಗಳಿಗೆ ಒಂದೇ ಬಾರಿಗೆ ಹಣ ಕೊಡುತ್ತಿದ್ದುದರಿಂದ ದುರ್ಬಳಕೆಯಾ ಗುತ್ತಿತ್ತು. ಈ ಹಿನ್ನೆಲೆಯಲ್ಲಿ ಒಂದು ಲಕ್ಷ ರೂ.ಗಳನ್ನು ಮೂರು ಹಂತಗಳಲ್ಲಿ ಅಭ್ಯರ್ಥಿಗಳಿಗೆ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

Advertisement

ಸುವರ್ಣ ಕಲಾ ಸಂಚಾರ್‌: ರಾಜ್ಯ, ದೇಶದ ಚಾರಿತ್ರಿಕ ಕಲೆಯ ಅಧ್ಯಯನದ ಆಸಕ್ತಿ ಬೆಳೆಸುವ ಸಲುವಾಗಿ ಅಕಾಡೆಮಿಯು ಹೊಸ ಯೋಜನೆ ರೂಪಿಸಿದೆ. “ಸುವರ್ಣ ಕಲಾ ಸಂಚಾರ್‌’ ಎಂಬ ಈ ವಿಶಿಷ್ಟ ಕಲ್ಪನೆಯಲ್ಲಿ 32 ಯುವ ಕಲಾವಿದರಿಗೆ ತಲಾ 25 ಸಾವಿರ ರೂ. ಧನ ಸಹಾಯ ನೀಡಿ, ಅಜಂತಾ, ಎಲ್ಲೋರಾ, ಖಜುರಾಹೋ, ದಕ್ಷಿಣ ಭಾರತದ ಕಲಾ ದೇಗುಲಗಳು ಮತ್ತು ರಾಜ್ಯದ ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಹಂಪಿ, ಬಾದಾಮಿ, ಪಟ್ಟದಕಲ್ಲು, ಸನ್ನತಿ (ಚಿತ್ತಾಪುರ), ಸೋಮನಾಥಪುರ ಇತ್ಯಾದಿ ಪ್ರಮುಖ ಕಲಾಕ್ಷೇತ್ರಗಳಿಗೆ ಪ್ರವಾಸ ಮಾಡಿ ಕಲಾಕೃತಿಗಳ ರಚನೆ ಮಾಡುವಂತೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಜತೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಗ್ರಾಫಿಕ್‌ ಕಲಾಕೇಂದ್ರವನ್ನು ಸದ್ಯದಲ್ಲೇ ಪ್ರಾರಂಭಿಸುವ ಮೂಲಕ ರಾಜ್ಯದ ಅನೇಕ ಗ್ರಾಫಿಕ್‌ ಕಲಾವಿದರು ಗ್ರಾಫಿಕ್‌ ಕೃತಿ ರಚನೆಗೆ ತೊಡಗಲು ಅಕಾಡೆಮಿ ಸಹಕಾರ ನೀಡಲಿದೆ ಎಂದು ಹೇಳಿದರು.

ರಾಷ್ಟ್ರೀಯ ಕಲಾ ಪ್ರದರ್ಶನ
ಅಕಾಡೆಮಿಯು ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕಲಾಪ್ರದರ್ಶನ ಮತ್ತು ಸಂಕ್ರಾಂತಿ ಕಲಾ ಪುರಸ್ಕಾರ-2016 ಕಾರ್ಯ ಕ್ರಮವನ್ನು ಫೆಬ್ರವರಿಯಲ್ಲಿ ಆಯೋಜಿ ಸಲಿದೆ ಎಂದು ಲಲಿತಕಲಾ ಅಕಾಡೆಮಿ ಅಧ್ಯಕ್ಷ ಎಂ.ಎಸ್‌.ಮೂರ್ತಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕಲಾಕೃತಿಗಳನ್ನು ಆಹ್ವಾನಿಸಲಾಗಿದ್ದು, ಜ.25 ಕಲಾಕೃತಿ ಸಲ್ಲಿಕೆಗೆ ಕೊನೆಯ ದಿನ. ಆಯ್ಕೆಯಾದ 16 ಕಲಾಕೃತಿಗಳಿಗೆ ಸುವರ್ಣ ಕಲಾ ಸಂಕ್ರಾಂತಿ ಪುರಸ್ಕಾರ ನೀಡಲಾಗುವುದು.

ರಾಷ್ಟ್ರ ಮಟ್ಟದ ಕಲಾ ಸಾಹಿತ್ಯಕ್ಕೆ ಒಂದು ಲಕ್ಷ ರೂ.ನಗದು ಬಹುಮಾನ ಮತ್ತು ಕನ್ನಡ ಕಲಾ ಸಾಹಿತ್ಯ ಪ್ರೋತ್ಸಾಹಿಸಲು ಅದಕ್ಕೂ ಒಂದು ಲಕ್ಷ ನಗದು ಬಹುಮಾನ ನೀಡಲಾಗುವುದು. ಪ್ರಶಸ್ತಿ ಪಡೆದ ಈ ಸಾಹಿತ್ಯಗಳನ್ನು ಅಕಾಡೆಮಿ ಪ್ರಕಟಿಸಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next