Advertisement

ಪುಷ್ಪ ನಮನಕ್ಕೆ ಸಜ್ಜಾದ ಸಸ್ಯಕಾಶಿ

11:52 AM Aug 03, 2018 | |

ಬೆಂಗಳೂರು: ದೇಶದ ನೆಲ, ಜಲ, ಜನರ ರಕ್ಷಣೆ ಹೊಣೆ ಹೊತ್ತಿರುವ ಭೂಸೇನೆ, ವಾಯುಸೇನೆ, ನೌಕಾಸೇನೆ ಹಾಗೂ ಇತರೆ ಗಡಿ ರಕ್ಷಣಾ ಪಡೆಗಳ ಪ್ರತಿಕೃತಿಗಳು ಪುಷ್ಪಗಳಲ್ಲಿ ಅನಾವರಣಗೊಳ್ಳುತ್ತಿವೆ. ಆ. 4ರಿಂದ ಆರಂಭವಾಗಲಿರುವ ಸ್ವಾತಂತ್ರೊತ್ಸವ ಫ‌ಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಸೇನಾಬಲ ಪ್ರತಿಕೃತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ತೋಟಗಾರಿಕೆ ಇಲಾಖೆಯು ಭಾರತೀಯ ಸೇನೆಗೆ ಪುಷ್ಪ ನಮನ ಸಲ್ಲಿಸಲು ಸಜ್ಜಾಗಿದೆ.

Advertisement

ಲಾಲ್‌ಬಾಗ್‌ನ ಮಾಹಿತಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಫ‌ಲಪುಷ್ಪ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆಯ ನಿರ್ದೇಶಕ ವೈ.ಎಸ್‌.ಪಾಟೀಲ, 1922ರಿಂದ ಈವರೆಗೆ ಒಟ್ಟು 207 ಫ‌ಲಪುಷ್ಟ ಪ್ರದರ್ಶನಗಳು ಯಶಸ್ವಿಯಾಗಿ ನಡೆದಿವೆ. ಪ್ರತಿ ಬಾರಿ ಪ್ರಮುಖ ವಿಷಯ ಕೇಂದ್ರಿತವಾಗಿ ಪ್ರದರ್ಶನ ಆಯೋಜನೆಯಾಗುತ್ತಿದೆ.

ಈ ಬಾರಿಯ 208ನೇ ಪ್ರದರ್ಶನದಲ್ಲಿ ಭಾರತೀಯ ಸೇನೆಗೆ ಗೌರವ ಸೂಚಿಸುವ ಪ್ರಯತ್ನ ಮಾಡಲಾಗಿದೆ. ಆ.4ರಂದು ಬೆಳಗ್ಗೆ 10ಗಂಟೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವ ಎಂ.ಸಿ.ಮನಗೂಳಿ, ಶಾಸಕ ಉದಯ್‌ ಬಿ.ಗರುಡಾಚಾರ್‌, ಮೇಯರ್‌ ಸಂಪತ್‌ರಾಜ್‌ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಸೇನಾ ಪಡೆಗಳಿಗೆ ಸಂಬಂಧಿಸಿದ ಸಮರ ನೌಕೆ, ಹೆಲಿಕಾಪ್ಟರ್‌ಗಳು, ಸೇನಾ ಟ್ಯಾಂಕರ್‌ಗಳು, ಹಿಮ ಪರ್ವತ, ಸಿಯಾಚಿನ್‌ ವಾಯುನೆಲೆಯನ್ನು ಪ್ರತಿಬಿಂಬಿಸುವ ಹಲವು ಮಾದರಿಗಳನ್ನು ಸಿದ್ಧಪಡಿಸಲಾಗಿದೆ. ಇವುಗಳ ಜತೆಗೆ ಅಮರ್‌ ಜವಾನ್‌ ಜ್ಯೋತಿ, ಇಸ್ರೊ ಉಪಗ್ರಹ ಉಡಾವಣಾ ವಾಹನ, ಎಚ್‌ಎಎಲ್‌ ವಿಮಾನ ಮಾದರಿಗಳು, ಹೂವಿನ ಪಿರಾಮಿಡ್‌ಗಳು ಇವೆ.

ಕನ್ನಡ ಚಿತ್ರರಂಗದ 85ರ ಸವಿ ನೆನಪಿಗಾಗಿ ಹಳೇ ಕಾಲದ ಕ್ಯಾಮರಾ, ಫಿಲ್ಮ ರೀಲ್‌ಗ‌ಳು, ಕ್ಲಾಪ್‌ಬೋರ್ಡ್‌ ಸೇರಿದಂತೆ ಪ್ರಮುಖ ಮೈಲಿಗಲ್ಲು ಆಧಾರಿತ ರೂಪಕಗಳು ಸಿದ್ಧವಾಗಿವೆ. ಇನ್ನು ಗಾಜಿನ ಮನೆ ಹೊರಭಾಗದಲ್ಲಿ ಫ‌ಲಭರಿತ ತರಕಾರಿ, ಹಣ್ಣು, ವಿಶೇಷ ಗಿಡಗಳ ಪ್ರದರ್ಶನವಿದೆ. ವಾದ್ಯರಂಗದಲ್ಲಿ ನಿರಂತರವಾಗಿ ದೇಶಭಕ್ತಿ ಗೀತೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. 

Advertisement

ಇಲಾಖೆಯ ಹೆಚ್ಚುವರಿ ನಿರ್ದೇಶಕ ಜಗದೀಶ್‌ ಮಾತನಾಡಿ, ಜಿಎಸ್‌ಟಿ ಜಾರಿಯಿಂದಾಗಿ ಕಳೆದ ಬಾರಿಗಿಂತ ಈ ಬಾರಿ 10 ರೂ. ಪ್ರವೇಶ ದರ ಹೆಚ್ಚಳವಾಗಿದೆ. ಜಿಎಸ್‌ಟಿ ವಿನಾಯ್ತಿಗೆ ಸಾಕಷ್ಟು ಪ್ರಯತ್ನ ಮಾಡಿದರೂ ವಾಣಿಜ್ಯ ತೆರಿಗೆ ಇಲಾಖೆ ಒಪ್ಪಿಗೆ ಸೂಚಿಸಿಲ್ಲ. ಕಡ್ಡಾಯ ಮನೋರಂಜನಾ ಶುಲ್ಕ ವಿಧಿಸಲು ಸೂಚಿಸಿದೆ. ಈ ಬಾರಿ ವಾಹನ ಪಾರ್ಕಿಂಗ್‌, ಸ್ವತ್ಛತೆ ಹಾಗೂ ಭದ್ರತೆಗೆ ಒತ್ತು ನೀಡಲಾಗಿದ್ದು, ಗಾಜಿನ ಮನೆಯಲ್ಲಿ ಫೋಟೊ ತೆಗೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು 

ಶಾಲಾ ಮಕ್ಕಳಿಗೆ ಉಚಿತ ಪ್ರವೇಶ: 12 ವರ್ಷದೊಳಗಿನ ಮಕ್ಕಳಿಗೆ 20 ರೂ. ಹಾಗೂ ವಯಸ್ಕರಿಗೆ 70 ರೂ. ಪ್ರವೇಶ ಶುಲ್ಕವಿದೆ. ಶಾಲಾ ಮಕ್ಕಳಿಗೆ ವಿಶೇಷ ರಿಯಾಯಿತಿ ನೀಡಿದ್ದು, ರಜಾದಿನ ಹೊರತುಪಡಿಸಿ ವಾರದ ದಿನಗಳಲ್ಲಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದೆ. ಸಮವಸ್ತ್ರ ಅಥವಾ ಶಾಲಾ ಗುರುತಿನ ಚೀಟಿಯೊಂದಿಗೆ ಬರುವ ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳು ಈ ರಿಯಾಯಿತಿ ಪಡೆಯಬಹುದು.

ಎರಡು ಕೋಟಿ ರೂ. ವೆಚ್ಚ: ಆ.4ರಿಂದ 15ರವೆರೆಗೆ 12 ದಿನಗಳ ಕಾಲ ಪ್ರದರ್ಶನ ನಡೆಯಲಿದ್ದು, ತಾಜಾತನ ಹಾಗೂ ಆಕರ್ಷಣೆ ಕಾಯ್ದುಕೊಳ್ಳಲು ಮೂರು ಬಾರಿ ಹೂಗಳನ್ನು ಬದಲಿಸಬೇಕಾಗುತ್ತದೆ. ಒಂದು ಬಾರಿ ಹೂ ಬದಲಿಸಬೇಕಾದರೆ 40 ಸಾವಿರ ಹೂವು ಬೇಕಾಗಲಿದೆ. ಒಟ್ಟಾರೆ 2 ಕೋಟಿ ರೂ. ವೆಚ್ಚದಲ್ಲಿ ಸ್ವಾತಂತ್ರೊತ್ಸವ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ಮೈಸೂರು ಉದ್ಯಾನ ಕಲಾ ಸಂಘದ ಬಿ.ಆರ್‌.ವಾಸುದೇವ್‌ ತಿಳಿಸಿದರು.

ವಾಹನ ಪ್ರವೇಶ ಹಾಗೂ ನಿಲುಗಡೆ: ಫಲಪುಷ್ಪ ಪ್ರದರ್ಶನಕ್ಕೆ ಬರುವ ಜನರ ವಾಹನಗಳ ನಿಲುಗಡೆಗಾಗಿ ಜೆ.ಸಿ.ರಸ್ತೆಯ ಬಿಬಿಎಂಪಿ ವಾಹನ ನಿಲುಗಡೆ ತಾಣ, ಶಾಂತಿನಗರದ ಟಿಟಿಎಂಸಿ ಹಾಗೂ ಹೊಸೂರು ರಸ್ತೆಯ ಅಲ್‌ ಅಮೀನ್‌ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ವಿಕಲಚೇತನರು ಹಾಗೂ ಶಾಲಾ ಕಾಲೇಜು ಮಕ್ಕಳನ್ನು ಕರೆ ತರುವ ವಾಹನಗಳಿಗೆ ಮಾತ್ರ ಲಾಲ್‌ಬಾಗ್‌ ಉದ್ಯಾನವನದ ಬಂಡೆ ಪಕ್ಕ ನಿಲುಗಡೆ ತಾಣದಲ್ಲಿ ಅವಕಾಶ ನೀಡಲಾಗಿದೆ.

ಸೂಕ್ತ ಭದ್ರತೆ: ಭದ್ರತೆಗಾಗಿ ಎಸಿಪಿ, 3 ಇನ್‌ಸ್ಪೆಕ್ಟರ್‌, 6 ಸಬ್‌ ಇನ್‌ಸ್ಪೆಕ್ಟರ್‌, 350 ಕಾನ್‌ಸ್ಟೆàಬಲ್‌, 100 ಹೋಮ್‌ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಕಾಣೆಯಾದ ಮಕ್ಕಳು, ವೃದ್ಧರ ಬಗ್ಗೆ ಮಾಹಿತಿ ಪ್ರಸಾರಕ್ಕೆ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಧ್ವನಿವರ್ಧಕ ವ್ಯವಸ್ಥೆ ಮಾಡಲಾಗಿದೆ. ಲಾಲ್‌ಬಾಗ್‌ ಆವರಣದಲ್ಲಿ 1 ಪೊಲೀಸ್‌ ಉಪಠಾಣೆ ತೆರೆಯಲಾಗಿದೆ. 5 ಆಂಬ್ಯುಲೆನ್ಸ್‌ ನಿಯೋಜನೆ ಜತೆಗೆ 37 ಪ್ರಥಮ ಚಿಕಿತ್ಸಾ ಪೆಟ್ಟಿಗೆ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next