Advertisement

ಸರಳ, ಸಜ್ಜನ; ಭಾರತದ “ಸರ್ಜಿಕಲ್ ಸ್ಟ್ರೈಕ್” ನ ನಿಜವಾದ ಹೀರೋ ಶಾಸ್ತ್ರಿ

06:25 PM Oct 02, 2018 | Sharanya Alva |

ನವದೆಹಲಿ:ದೇಶ-ವಿದೇಶಗಳಲ್ಲಿ ಮೋಹನದಾಸ ಕರಮಚಂದ ಗಾಂಧಿಯ 150ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸುತ್ತಿದ್ದರೆ, ಮತ್ತೊಂದೆಡೆ ಪ್ರತಿವರ್ಷ ಭಾರತದಾದ್ಯಂತ ಗಾಂಧಿ ಜೊತೆಗೆ ಅಕ್ಟೋಬರ್ 2ರಂದು ದೇಶದ ಮತ್ತೊಬ್ಬ ಸರಳ, ಸಜ್ಜನ ಪ್ರಧಾನಿ ಎಂದೇ ಹೆಗ್ಗಳಿಕೆಗೆ ಪಾತ್ರರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 114ನೇ ಜನ್ಮ ಜಯಂತಿ ಆಚರಿಸಿದೆ. ಈ ಸಂದರ್ಭದಲ್ಲಿ ದೇಶದ 2ನೇ ಪ್ರಧಾನಿಯಾಗಿ, ಕೋಟ್ಯಂತರ ಭಾರತೀಯರು ಪ್ರೀತಿಸುವ, ಜನಾನುರಾಗಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕುರಿತ ಕೆಲವು ಅಪರೂಪದ ಸಂಗತಿಗಳು ಇಲ್ಲಿವೆ…

Advertisement

1)1904ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಉತ್ತರಪ್ರದೇಶದ ಮುಘಲ್ ಸರಾಯ್ ನಲ್ಲಿ ಜನನ. ಶಾಸ್ತ್ರಿ ಅವರು 18 ತಿಂಗಳ ಕಾಲ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಅವರ ಆಡಳಿತಾವಧಿಯಲ್ಲಿ ದೇಶದ ಒಬ್ಬ ರಾಜಕಾರಣಿಯಾಗಿ, ಆಡಳಿತಗಾರನಾಗಿ ಮತ್ತು ದೇಶಭಕ್ತನಾಗಿ ಕೈಗೊಂಡ ಕಾರ್ಯಗಳು ಇಂದಿಗೂ ಸ್ಮರಣೀಯ. ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆ ಮೂಲಕ ದೇಶದಲ್ಲಿ ರೈತರ ಹಾಗೂ ಯೋಧರ ಶ್ರೇಯೋಭಿವೃದ್ಧಿಯನ್ನು ಬಯಸಿ ಯಶಸ್ಸು ಸಾಧಿಸಿದ್ದರು.

2)ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವಂತೆ ಮಹಾತ್ಮಗಾಂಧಿ ಕೊಟ್ಟ ಕರೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಕೂಡಾ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡಿದ್ದರು. ಆಗ ಅವರ ವಯಸ್ಸು ಕೇವಲ 16! ಹೀಗೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಒಟ್ಟು 9 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. ಸ್ವಾತಂತ್ರ್ಯ ನಂತರ ಸರ್ಕಾರದಲ್ಲಿ ಶಾಸ್ತ್ರಿ ಅವರು ರೈಲ್ವೆ, ಸಾರಿಗೆ ಮತ್ತು ವಾಣಿಜ್ಯ, ಕೇಂದ್ರ ಗೃಹಸಚಿವರಾಗಿ ಕಾರ್ಯನಿರ್ವಹಿಸಿದ್ದರು.

3)ರೈಲ್ವೆ ಸಚಿವರಾದ ಬಳಿಕ 1956ರಲ್ಲಿ ತಮಿಳುನಾಡಿನ ಅರಿಲೂರಿನಲ್ಲಿ ನಡೆದ ರೈಲು ದುರಂತದಲ್ಲಿ 142 ಮಂದಿ ಸಾವನ್ನಪ್ಪಿದ್ದರು. ಈ ಘಟನೆಯ ನೈತಿಕ ಹೊಣೆ ಹೊತ್ತ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಸಂಸತ್ತಿನಲ್ಲಿ ಭಾಷಣ ಮಾಡಿದ್ದ ಅಂದಿನ ಪ್ರಧಾನಿ ಜವಾಹರಲಾಲ ನೆಹರು ಅವರು, ಘಟನೆಗೆ ಸಂಬಂಧಿಸಿದಂತೆ ಶಾಸ್ತ್ರಿ ಅವರು ನೀಡಿದ ರಾಜೀನಾಮೆ ಅಂಗೀಕರಿಸಿದ್ದೇನೆ. ಆದರೆ ಶಾಸ್ತ್ರಿ ಅವರು ಇದಕ್ಕೆ ಕಾರಣ ಎಂದು ಅಲ್ಲ, ಇದು ಮುಂದಿನ ಪೀಳಿಗೆಯ ಜನಪ್ರತಿನಿಧಿಗಳಿಗೆ ಮಾದರಿಯಾಗಲು ಎಂದು ಹೇಳಿದ್ದರು.

4)ಶಾಸ್ತ್ರಿ ಅವರು ದೇಶದ ಪ್ರಧಾನಿಯಾಗಿ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಭಾರತದ ಕೃಷಿ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. 1960 ಮತ್ತು 1963ರಲ್ಲಿ ಭಾರತ ವಿದೇಶದ ಗೋಧಿಗಾಗಿ ಕಾಯಬೇಕಾಗಿತ್ತು. ಆ ಸಂದರ್ಭದಲ್ಲಿ ಭಾರತ ಅಮೆರಿಕದಿಂದ 14 ಮಿಲಿಯನ್ ಟನ್ ಗಳಷ್ಟು ಗೋಧಿಯನ್ನು ಆಮದು ಮಾಡಿಕೊಂಡಿತ್ತು. ಇಂತಹ ವೇಳೆಯಲ್ಲಿಯೇ ಕೇಂದ್ರದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಹಸಿರು ಕ್ರಾಂತಿಗೆ ನಾಂದಿ ಹಾಡಿದ್ದರು.

Advertisement

5)1965ರಲ್ಲಿ ಪಾಕಿಸ್ತಾನ ವಿರುದ್ಧ ಯುದ್ಧ ನಡೆದ ವೇಳೆ ಶಾಸ್ತ್ರಿ ಅವರು ಅದನ್ನು ಧೈರ್ಯವಾಗಿ ಎದುರಿಸಿದ್ದರು. ಪಾಕ್ ಜೊತೆಗಿನ ವಿವಾದವನ್ನು ಶಾಂತಿಯುತವಾಗಿಯೇ ಬಗೆಹರಿಸಿಕೊಳ್ಳಬೇಕೆಂಬುದು ಶಾಸ್ತ್ರಿ ಅವರ ಇಚ್ಛೆಯಾಗಿತ್ತು. ಅಷ್ಟೇ ಅಲ್ಲ 1965ರ ಆಗಸ್ಟ್ 5ರಂದು ಹಝರತ್ ಬಾಲ್ ಮಸೀದಿಯಲ್ಲಿ ಕಳ್ಳತನದ ಪ್ರಕರಣ ನಡೆದ ನಂತರ  ಪಾಕಿಸ್ತಾನಿ ಪಡೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆಪರೇಶನ್ ಗಿಬ್ರಾಲ್ಟಾರ್ ಹೆಸರಿನಲ್ಲಿ ಅತಿಕ್ರಮಣ ಮಾಡುವ ದುಸ್ಸಾಹಸಕ್ಕೆ ಕೈಹಾಕಿತ್ತು. ಆದರೆ ಅಷ್ಟರಲ್ಲಿ ಭಾರತೀಯ ಸೇನಾಪಡೆಗೆ ಸ್ಥಳೀಯ ಕಾಶ್ಮೀರಿಗಳು ನೆರವು ನೀಡುವ ಮೂಲಕ ಅತಿಕ್ರಮಣಕಾರರನ್ನು ಸೆರೆಹಿಡಿಯುವಲ್ಲಿ ನೆರವಾಗಿದ್ದರು. ಇದರಿಂದಾಗಿ ಪಾಕ್ ಸಂಚು ವಿಫಲವಾಗಿತ್ತು.

6)1965ರ ಆಗಸ್ಟ್ 30ರಂದು ಭಾರತೀಯ ಸೇನಾಪಡೆ ಸಮರ್ಥವಾಗಿ ಹೋರಾಡುವ ಮೂಲಕ ಹಾಜಿ ಪಿರ್ ಪಾಸ್ ಅನ್ನು ವಶಪಡಿಸಿಕೊಂಡು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿಬಿಟ್ಟಿತ್ತು. ಹಾಜಿ ಪಿರ್ ಪಾಸ್ ಪೂಂಚ್ ನಿಂದ ಉರಿ ಸೆಕ್ಟರ್ ಅನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳಲ್ಲಿ ಒಂದಾಗಿತ್ತು. ಆದರೆ ಏನೇ ಆಗಿರಲಿ ಇದು ನಿಜವಾದ ಸರ್ಜಿಕಲ್ ಸ್ಟ್ರೈಕ್! ಬಳಿಕ ಅಂತಾರಾಷ್ಟ್ರೀಯ ಒತ್ತಡದಲ್ಲಿ ಹಾಜಿ ಪಿರ್ ಪಾಸ್ ಅನ್ನು ಭಾರತ ಪಾಕ್ ಗೆ ಬಿಟ್ಟುಕೊಟ್ಟಿತ್ತು. ಇಷ್ಟೆಲ್ಲಾ ಜಟಾಪಟಿ ನಡುವೆ ಉಜ್ಬೇಕಿಸ್ತಾನ್ ನಲ್ಲಿ ತಾಷ್ಕೆಂಟ್ ಒಪ್ಪಂದಕ್ಕೆ ಪ್ರಧಾನಿ ಶಾಸ್ತ್ರಿ ಅವರು ಸಹಿ ಹಾಕಿದ ಕೆಲವೇ ಹೊತ್ತಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು.

(ಕೃಪೆ:ದ ವೈರ್ ಇಂಗ್ಲಿಷ್ ಜಾಲತಾಣ)

Advertisement

Udayavani is now on Telegram. Click here to join our channel and stay updated with the latest news.

Next