Advertisement

ಬಾಳಜ್ಜನ ಅಭಿನಯಕ್ಕೆ ‘ಕಲಾ ವೈಭವ’ತಂದ ಲಕ್ಷ್ಮೀ

02:19 PM May 05, 2022 | Team Udayavani |

ಧಾರವಾಡ: ಅವರ ಅಭಿನಯ ನೋಡಿ ಗುಬ್ಬಿ ವೀರಣ್ಣನವರೇ ಬೆರಗಾಗಿದ್ದರು. ಅವರ ಸ್ಪಷ್ಟ ಕನ್ನಡ ಮಾತುಗಾರಿಕೆಗೆ ವರನಟ ಡಾ|ರಾಜ್‌ಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರು ಪಾತ್ರಗಳಿಗೆ ಜೀವ ತುಂಬಿದಾಗ ಜನರೇ ಕಣ್ಣೀರು ಹಾಕುತ್ತಿದ್ದರು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಾಡೋಜ ಏಣಗಿ ಬಾಳಪ್ಪ ಅವರ ಕಲಾ ವೈಭವ ಕಳೆ ಕಟ್ಟಿದ್ದೇ ಈ ಲಕ್ಷ್ಮೀ ಕಟಾಕ್ಷದಿಂದ.

Advertisement

ಹೌದು. ನಾಡೋಜ ಏಣಗಿ ಬಾಳಪ್ಪ ಅವರೊಡನೆ ಪಾತ್ರಗಳಲ್ಲಿ ತಲ್ಲೀನತೆಯ ಅಭಿನಯ ನೀಡಿ ಅಂದಿನ ನಾಟಕದ ಸ್ಪುರದ್ರೂಪಿ ಜೋಡಿಯಾಗಿ ಮಿಂಚಿದ ಲಕ್ಷ್ಮೀಬಾಯಿ ಏಣಗಿ ಬರೀ ನಟಿಯಾಗಿ ಮಾತ್ರವಲ್ಲ, ಬಣ್ಣದ ಬದುಕಿನ ಸುಂದರ ದಿನಗಳಿಗೆ ಜೀವ ತುಂಬಿದ ಸಿರಿವಂತ ಕಲಾವಿದೆ.

ಎಷ್ಟೋ ನಾಟಕಗಳು ಅವರ ಪಾತ್ರಗಳನ್ನು ಆಧರಿಸಿಯೇ ಹಿಟ್‌ ಆಗಿದ್ದವು. ಏಣಗಿ ಕಂಪನಿಯ ಬಾಕ್ಸ್‌ ಆಫಿಸ್‌ ಮಾತ್ರವಲ್ಲ, ಬಾಳಪ್ಪನವರ ಚೈತನ್ಯವೇ ಇವರಾಗಿ ಕೆಲಸ ಮಾಡಿದ್ದರು. ನಾಟಕದ ತೆರೆ ಸರೆದಾಗ ಇಡೀ ಸಭಾಗೃಹವೇ ಕಳೆ ಕಟ್ಟುವಂತೆ ನಟಿಸುತ್ತಿದ್ದ ಅವರಿಗೆ ಅಭಿನಯದ ಜತೆಗೆ ಕಂಪನಿ ಅಷ್ಟೇಯಲ್ಲ ಎರಡು ಮಕ್ಕಳನ್ನು ಸಾಕಿ ಸಲಹುವ ಹೊಣೆ. ಎಲ್ಲವನ್ನು ಅಚ್ಚುಕಟ್ಟಾಗಿ ಮಾಡಿ ಬಿಡುತ್ತಿದ್ದರು.

ಗುಬ್ಬಿ ಕಂಪನಿಯ ವ್ಯವಸ್ಥಾಪಕರಾಗಿದ್ದ ವಿರೂಪಾಕ್ಷಯ್ಯ ಅವರ ಮಗಳಾಗಿ 1932ರಲ್ಲಿ ಜನಿಸಿದ ಲಕ್ಷ್ಮಿಬಾಯಿ ಅವರು, ಹಸುಗೂಸು ಇದ್ದಾಗಲೇ ಗುಬ್ಬಿ ಕಂಪನಿಯ ನಾಟಕದ ಬೆಳಕಿನಲ್ಲಿ ಪಾತ್ರ ನಿರ್ವಹಿಸಿದ ಅನುಭವ. ನಾಟಕವೊಂದರಲ್ಲಿ ಹಸುಗೂಸು ಬರಬೇಕಾದಾಗ ಚೀರುತ್ತಿದ್ದ ಹಸುಗೂಸು ಲಕ್ಷ್ಮೀಯೇ ಪಾತ್ರ ನಿರ್ವಹಿಸಿತ್ತು. ಇನ್ನು 3ನೇ ತರಗತಿಯಲ್ಲಿದ್ದಾಗ ಅಥಣಿಯ ಭಾಗ್ಯೋದಯ ಕಂಪನಿಯಲ್ಲಿ ಬಾಲ ಸಿದ್ಧರಾಮನ ಪಾತ್ರ ವಹಿಸಿ ಸೈ ಎನಿಸಿಕೊಂಡರು.

Advertisement

ಅವರು 17ನೇ ವಯಸ್ಸಿನಲ್ಲಿ ಉತ್ತರ ಭೂಪ ನಾಟಕದಲ್ಲಿ ನಟಿಸಿದ ಅಭಿನಯ ಅವರನ್ನು ಕಲಾವೈಭವದಂತಹ ದೊಡ್ಡ ಕಂಪನಿಯ ನಾಟಕದಲ್ಲಿ ನಟಿಸಲು ಅವಕಾಶ ಮಾಡಿ ಕೊಟ್ಟಿತು. ನಾಡೋಜ ಏಣಗಿ ಬಾಳಪ್ಪ ಅವರು ನಾಯಕನಾಗಿ ನಟಿಸುತ್ತಿದ್ದ ಎಲ್ಲಾ ನಾಟಕಗಳಿಗೂ ಅವರಿಗೆ ಹೊಂದಾಣಿಕೆಯಾಗಿ ಅಭಿನಯ ನೀಡುವ ನಟಿಯಾಗಿ ಇವರು ರೂಪುಗೊಂಡರು. ಕಿತ್ತೂರು ಚೆನ್ನಮ್ಮ ನಾಟಕದ ಚೆನ್ನಮ್ಮಳಾಗಿ ಮಿಂಚಿದ ಮೇಲಂತೂ ಉತ್ತರ ಕರ್ನಾಟಕದಲ್ಲಿ ಲಕ್ಷ್ಮೀಬಾಯಿ ಅವರ ಸ್ಟಾರ್‌ಡಂ ಬೆಳೆಯುತ್ತ ಹೋಯಿತು. ಕುರುಕ್ಷೇತ್ರದ ದ್ರೌಪದಿ, ರಾಮಾಯಾಣದ ಸೀತೆ, ಹರಿಶ್ಚಂದ್ರ ನಾಟಕದ ತಾರಾಮತಿ, ಗೋರಾ ಕುಂಬಾರ ನಾಟಕದ ಸಕ್ಕೂಬಾಯಿ, ಜಗಜ್ಯೋತಿ ಬಸವೇಶ್ವರ ನಾಟಕದ ನೀಲಾಂಬಿಕೆ, ಕುಂಕುಮ ನಾಟಕದ ಅನುರಾಧಾ ಚಲೇಜಾವ್‌ ನಾಟಕದ ಆಶಾ ಪಾತ್ರಗಳು ಅವರನ್ನು ಕನ್ನಡ ನಾಟಕ ಪ್ರಿಯರ ಮನ ತಲುಪುವಂತೆ ಮಾಡಿದವು.

ಕಲಾ ವೈಭವದ ಕಳೆ: ನಾಡೋಜ ಏಣಗಿ ಬಾಳಪ್ಪ ಅವರ ನಾಟಕಗಳು ಅಂದಿನ ಗ್ರಾಮೀಣ ಕರ್ನಾಟಕದಲ್ಲಿ ಕೆಜಿಎಫ್‌-2 ನಂತೆ ಹವಾ ಎಬ್ಬಿಸಿದ್ದವು. ಅವರು ಹಾಕುವ ಕ್ಯಾಂಪ್‌ ಗಳು ನೂರಾರು ಕಲಾವಿದರಿಗೆ ಅನ್ನ ನೀಡುವುದಷ್ಟೇ ಅಲ್ಲ. ಕನ್ನಡ ನಾಡು ನುಡಿ ಕುರಿತು ಜಾಗೃತಿ ಮೂಡಿಸುತ್ತಿದ್ದವು.

1940ರ ದಶಕದಲ್ಲಂತೂ ಜಗಜ್ಯೋತಿ ಬಸವೇಶ್ವರ ನಾಟಕ ಕಲಾವೈಭವ ನಾಟ್ಯ ಸಂಘದ ವೈಭವಕ್ಕೆ ಕಾರಣವಾಗಿದ್ದವು. ಪೈಸೆ ಮತ್ತು ಆಣೆ ಲೆಕ್ಕದ ಟಿಕೇಟ್‌ ದರವಿದ್ದಾಗ ನಾಟಕಗಳು ಲಕ್ಷ ಲಕ್ಷ ರೂ.ಗಳನ್ನು ಕೊಳ್ಳೆ ಹೊಡೆಯುತ್ತಿದ್ದವು. ಇಂತಹ ನಾಟಕಕ್ಕೆ ಮೆರಗು ಬಂದಿದ್ದು ಲಕ್ಷ್ಮೀಬಾಯಿ ಏಣಗಿ ಅವರ ಅಭಿನಯ ಮತ್ತು ಪಾತ್ರಗಳಿಗೆ ಒಪ್ಪುವಂತಿದ್ದ ನಟನೆ.

ಸತತ 40 ವರ್ಷಗಳ ಕಾಲ ಏಣಗಿ ಬಾಳಪ್ಪ ಅವರೊಂದಿಗೆ ನಾಟಕಗಳಲ್ಲಿ ನಟಿಸಿದ ಲಕ್ಷ್ಮೀಬಾಯಿ ಅವರು ಅವರ ಧರ್ಮಪತ್ನಿಯಾಗಿದ್ದು ಕೊಂಡು ಕಂಪನಿಯನ್ನು ಮುನ್ನಡೆಸುತ್ತಿದ್ದರು. ಏಣಗಿ ಬಾಳಪ್ಪ ಅವರ ಕಲಾ ವೈಭವಕ್ಕೆ ಕಾರಣವಾದ ಪ್ರಖರ ಕಳೆಯೇ ಲಕ್ಷ್ಮೀಬಾಯಿ ಆಗಿದ್ದರು.

ಧಾರವಾಡವೇ ಕೊನೆಸ್ಟಾಪ್‌: ನಿವೃತ್ತರ ಸ್ವರ್ಗದಂತಿರುವ ಧಾರವಾಡದಲ್ಲಿಯೇ ಲಕ್ಷ್ಮಿಬಾಯಿ ಅವರು ತಮ್ಮ ಬದುಕಿನ ಕೊನೆಯ ದಿನಗಳನ್ನು ಕಳೆದರು. ಇಲ್ಲಿಯೂ ಅವರು ಸುಮ್ಮನೆ ಕುಳಿತಿರಲಿಲ್ಲ. ಬದಲಿಗೆ ಯುವ ರಂಗಭೂಮಿ ಕಲಾವಿದರಿಗೆ ನಿರ್ದೇಶಕರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಇಲ್ಲಿನ ರಜತಗಿರಿಯಲ್ಲಿನ ಮನೆಯೊಂದರಲ್ಲಿ ನೆಲೆಸಿದ್ದ ಅವರು ತಮ್ಮ ರಂಗ ಸಂಗಾತಿಗಳನ್ನು ಮೇಲಿಂದ ಮೇಲೆ ಭೇಟಿಯಾಗಿ ಅವರಿಗೆ ಆಧುನಿಕ ಮತ್ತು ಕಂಪನಿ ರಂಗಭೂಮಿ ಕುರಿತು ತಮ್ಮ ವಿಚಾರಗಳನ್ನು ಹೇಳುತ್ತಿದ್ದರು. ಬಂಧುಗಳು ಕೇಳಿದಾಗ ನಾನು ಎಲ್ಲೋ ಹುಟ್ಟಿದೆ, ಎಲ್ಲೋ ಬೆಳೆದೇ, ಅನೇಕ ಜಿಲ್ಲೆ, ತಾಲೂಕುಗಳನ್ನು ಓಡಾಡಿಕೊಂಡು ನಾಟಕ ಮಾಡುತ್ತ ಬಂದಿದ್ದೇನೆ. ಆದರೆ ನನ್ನ ಕೊನೆಯ ಬಸ್‌ ಸ್ಟಾಪ್‌ ಧಾರವಾಡವೇ ಆಗಿದೆ. ಹೀಗಾಗಿ ನಾನು ಇಲ್ಲಿಯೇ ಕೊನೆಯುಸಿರೆಳೆಯಬೇಕು ಎನ್ನುತ್ತಿದ್ದರು.

ದಕ್ಷಿಣ ದ್ರುವದಿಂ ಉತ್ತರ ದೃವಕೂ..

ಕಲಾವೈಭವ ಕಂಪನಿ ಮತ್ತು ಗುಬ್ಬಿ ಕಂಪನಿ ಉತ್ತರ ಮತ್ತು ದಕ್ಷಿಣ ದೃವಗಳಾಗಿದ್ದವು. ಆದರೆ ಈ ಎರಡೂ ಕಂಪನಿಗಳನ್ನು ಕೊಂಡಿಯಾಗಿ ಬೆಸೆದಿದ್ದು ಲಕ್ಷ್ಮೀಬಾಯಿ ಅವರು. ಸ್ಟಾರ್‌ ಡಮ್‌ ಅದು ಸಿನಿಮಾದ್ದಿರಲಿ, ನಾಟಕದ್ದಿರಲಿ ಅಥವಾ ಅನ್ಯ ಪ್ರಸಿದ್ಧಿಗಳೇ ಇರಲಿ ವ್ಯಕ್ತಿಗಳ ನಡೆನುಡಿಯಲ್ಲಿ ಬದಲಾವಣೆ ತರುವ ಸಾಧ್ಯತೆ ಹೆಚ್ಚು. ಆದರೆ ನಾಡೋಜ ಏಣಗಿ ಬಾಳಪ್ಪ ಅವರ ಕುಟುಂಬ ಸದಸ್ಯರೆಲ್ಲರೂ ಇದಕ್ಕೆ ವ್ಯತಿರಿಕ್ತರಾಗಿದ್ದರು. ವೃತ್ತಿ ಗೌರವ ಮತ್ತು ಬದುಕಿನ ಮೌಲ್ಯಗಳನ್ನು ಏಣಗಿ ಕುಟುಂಬ ಕಾಪಾಡಿಕೊಂಡು ಬಂದಿದೆ. ಮಗ ದಿ|ಏಣಗಿ ನಟರಾಜ್‌ ಆದಿಯಾಗಿ ಎಲ್ಲರೂ ಅತ್ಯಂತ ಸರಳ ಜೀವನ ಮತ್ತು ಕಾಯಕ ಧರ್ಮ ಪಾಲನೆ ಮಾಡಿಕೊಂಡು ಬಂದಿದ್ದು ವಿಶೇಷ. ಲಕ್ಷ್ಮೀಬಾಯಿ ಅವರು ಅಷ್ಟೇ. ತಮ್ಮ ಕೊನೆಯ ಉಸಿರು ಇರುವವರೆಗೂ ಅವರು ಬಸವಧರ್ಮ ಪಾಲಕರಾಗಿ ಬದುಕಿದರು. ಲಿಂಗಪೂಜೆ, ಅನುಷ್ಠಾನ, ಪ್ರಸಾದ, ಸಾತ್ವಿಕ ಬದುಕಿನಲ್ಲಿಯೇ ಖುಷಿ ಕಂಡರು.

ಉತ್ತರ ಕರ್ನಾಟಕ ಭಾಗದಲ್ಲಿ ಏಣಗಿ ಬಾಳಪ್ಪ ಅವರ ನಾಟಕಗಳಲ್ಲಿನ ಪ್ರಧಾನ ಸ್ತ್ರೀ ಪಾತ್ರಗಳಿಗೆ ಜೀವ ತುಂಬಿದ ಕೀರ್ತಿ ಲಕ್ಷ್ಮಿಬಾಯಿ ಅವರಿಗೆ ಸಲ್ಲುತ್ತದೆ. ಅವರಿಂದ ನೂರಾರು ಜನ ಯುವ ರಂಗನಟಿಯರು ಪ್ರೇರಿತರಾಗಿದ್ದು ಅವರ ರಂಗಾಭಿನಯಕ್ಕೆ ಸಾಕ್ಷಿ. –ಕೊಟ್ರೇಶ ಅಂಗಡಿ, ರಂಗನಟರು, ಗೋಕಾಕ ಕಂಪನಿ ಮಾಲೀಕರು.           

-ಡಾ|ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next