Advertisement
ಬಜ್ಪೆಯ ವಿಜಯ ವಿಠಲ ಭಜನಾ ಮಂದಿರದಲ್ಲಿ ವರಮಹಾಲಕ್ಷ್ಮೀ ಹಬ್ಬದಂದು ಹಬ್ಬಕ್ಕೆ ಸರಿಹೊಂದುವ “ಲಕ್ಷ್ಮೀ ಸ್ವಯಂವರ’ ಎಂಬ ಪ್ರಸಂಗದ ಪ್ರದರ್ಶನ ನಡೆಯಿತು. ಪುರಾಣದಲ್ಲಿ ದೇವತೆಗಳು ಮತ್ತು ಅಸುರರು ಸೇರಿ ಅಮೃತದ ಉದ್ಭವಕ್ಕಾಗಿ ನಡೆಸಿದ ಸಮುದ್ರ ಮಥನ ಪ್ರಸಂಗದ ಒಂದು ಭಾಗವೇ ಲಕ್ಷ್ಮೀ ಸ್ವಯಂವರ. ಈ ಕಥಾನಕವು ದೂರ್ವಾಸ ಮುನಿಯ ಅಬ್ಬರದ ಪ್ರವೇಶದೊಂದಿಗೆ ಆರಂಭಗೊಂಡಿತು. ತ್ರಿಮೂರ್ತಿಗಳ ಪಾಲನಾ ಕಾರ್ಯವನ್ನು ಮಾಡುತ್ತಿರುವ ವಿಷ್ಣು ಮೂರು ಲೋಕವನ್ನು ಸಮತೂಕದಲ್ಲಿ ಮುನ್ನಡೆಸುವ ತಂತ್ರವೂ ಇದೆನ್ನಬಹುದು. ಹಾಗಾಗಿ ಈ ಕಥಾನಕದಲ್ಲಿ ವಿಷ್ಣುದೇವ ಸೂತ್ರಧಾರಿ.
ಪರಾಕ್ರಮಿಯಾದ ವಾಲಿ ಸಮುದ್ರ ಮಥನ ಮಾಡಿ ತಾರೆಯನ್ನು ಪಡೆಯುತ್ತಾನೆ. ಆದರೆ ವಿಷ್ಣುವಿನ ನಾಟಕದಲ್ಲಿ ವಾಲಿಯಿಂದ ಸಮುದ್ರ ಮಥನವಾಗುವುದು ಬೇಕಿರಲಿಲ್ಲ. ಹಾಗಾಗಿ ವಿಷ್ಣು -ವಾಲಿಗೆ ಯುದ್ಧವಾಗಿ ವಿಷ್ಣುವಿಗೆ ಸೋಲಾಗುತ್ತದೆ. ವಿಷ್ಣು ಮಾತಿನ ಮೋಡಿಯಿಂದ ವಾಲಿಯನ್ನು ಸೋಲಿಸಿ ತಾರೆಯೊಂದಿಗೆ ಆತನ ಮದುವೆ ಮಾಡಿಸಿ ಕಳುಹಿಸುತ್ತಾನೆ. ದೇವತೆಗಳು ಮತ್ತು ರಾಕ್ಷಸರು ಮತ್ತೆ ಸಮುದ್ರ ಮಥನ ಆರಂಭಿಸುತ್ತಾರೆ. ಐರಾವತ, ಕಾಮಧೇನು ಸೇರಿದಂತೆ ಒಂದರ ಮೇಲೊಂದರಂತೆ ಸುವಸ್ತುಗಳು ಉದ್ಭವಿಸುತ್ತವೆ. ಎಲ್ಲವೂ ದೇವತೆಗಳ ಪಾಲಾಗುತ್ತದೆ. ಬಳಿಕ ಉದ್ಭವಿಸುವಾಕೆಯೇ ಲಕ್ಷ್ಮೀ ದೇವಿ. ದೇವತೆಗಳು ಮತ್ತು ರಾಕ್ಷಸರ ಮಧ್ಯೆ ಲಕ್ಷ್ಮೀಗಾಗಿ ವಾಗ್ವಾದ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಈಶ್ವನ ಸಲಹೆಯಂತೆ ಲಕ್ಷ್ಮೀ ಇಷ್ಟ ಬಂದವರೊಂದಿಗೆ ತೆರಳುವ ಅವಕಾಶವನ್ನು ನೀಡಲಾಯಿತು. ಅದುವೇ ಲಕ್ಷ್ಮೀ ಸ್ವಯಂವರ. ಲಕ್ಷ್ಮೀದೇವಿ ವಿಷ್ಣುವಿನ ಕೊರಳಿಗೆ ಹಾರ ಹಾಕುತ್ತಾಳೆ. ಪ್ರತಿಯೊಂದು ಪಾತ್ರವನ್ನೂ ಅರ್ಥ ಗರ್ಭಿತವಾಗಿ ನಿರ್ವಹಿಸಿ, ಈ ಕಥಾನಕವನ್ನು ಅರ್ಥಪೂರ್ಣಗೊಳಿಸಿದ ಗೌರವ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರಿಗೆ ಸಲ್ಲುತ್ತದೆ.ಪೂರ್ವಾರ್ಧದಲ್ಲಿ ದಯಾನಂದ ಕೋಡಿಕಲ್ ಮತ್ತು ಉತ್ತರಾರ್ಧದಲ್ಲಿ ಸುಧಾಕರ್ ಸಾಲಿಯಾನ್ ಇವರ ಸುಮಧುರ ಕಂಠದ ಭಾಗವತಿಕೆಗೆ ಚೆಂಡೆಯಲ್ಲಿ ಕೃಷ್ಣರಾಜ್ ಭಟ್ ನಂದಳಿಕೆ ಮತ್ತು ಮದ್ದಳೆಯಲ್ಲಿ ರಾಜೇಶ್ ಭಟ್ ಸಾಥ್ ನೀಡಿದ್ದರು. ದೂರ್ವಾಸ ಮುನಿಯಾಗಿ ಸಂದೇಶ್ ಬಡಗಬೆಳ್ಳೂರು ಮೂಕವಿಸ್ಮಿತರನ್ನಾಗಿಸಿದರೆ, ಬಳಿಕ ಮೂಕಾಸುರನಾಗಿ ನಗಿಸಿದರು. ಬಲಿ ಚಕ್ರವರ್ತಿಯಾಗಿ ಚರಣ್‌ರಾಜ್ ಕುಕ್ಕಾಜೆ ವೇದಿಕೆಯನ್ನು ನಡುಗಿಸಿದರು. ವಿಷ್ಣುವಾಗಿ ಅಮಿತಾ ಪೊಳಲಿ ಪಾತ್ರ ನಿರ್ವಹಣೆ ಉತ್ತಮವಾಗಿತ್ತು. ದೇವೇಂದ್ರನ ಪಾತ್ರವನ್ನು ಪುಷ್ಪಾ ಕುಕ್ಕಾಜೆ ಸಮರ್ಥವಾಗಿ ನಿಭಾಯಿಸಿದರು. ವಾಲಿಯಾಗಿ ಸಂಜೀವ ಕೋಟ್ಯಾನ್, ಲಕ್ಷ್ಮೀಯಾಗಿ ಆಜ್ಞಾ ಸೋಹಮ್ ಪಾತ್ರಕ್ಕೆ ತಕ್ಕ ಅಭಿನಯ ನೀಡಿದರು. ಈಶ್ವರನಾಗಿ ದಯಾನಂದ ಪೂಜಾರಿ , ಪಾರ್ವತಿಯಾಗಿ ಲೋಲಾಕ್ಷಿ ,ಅಗ್ನಿಯಾಗಿ ಚಮನ್, ವಾಯುವಾಗಿ ತನ್ಮಯಿ, ವರುಣನಾಗಿ ಅಮೃತವರ್ಣ, ಕುಬೇರನಾಗಿ ಅಮೃತವರ್ಷ, ನಿರುತಿಯಾಗಿ ದೀûಾ ಪೆರಾರ ರಂಗು ತುಂಬಿಸಿದರು. ಬಲಿಚಕ್ರವರ್ತಿ ಬಲಗಳಾಗಿ ಮಂದಾರ ಮೂಡಬಿದ್ರೆ, ಕೌಶಿಕ್ ಪೆರಾರ, ಇಂದು, ಸೃಷ್ಟಿಕೃಷ್ಣ, ಸುರೇಶ್ ಅಬ್ಬರದ ಪ್ರವೇಶದೊಂದಿಗೆ ರಂಗಸ್ಥಳಕ್ಕೆ ಹೊಸ ಕಳೆ ತುಂಬಿಸಿದರು. ತಾರನಾಥ ವರ್ಕಾಡಿಯವರ ದಕ್ಷ ನಿರ್ದೇಶನವಿತ್ತು.
Related Articles
Advertisement