Advertisement
ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಹಾಗೂ ಡಿ.ಕೆ.ಶಿವಕುಮಾರ ಮೊದಲಿಂದಲೂ ಸ್ನೇಹಿತರು. ಈ ಪರಿವಾರದಲ್ಲಿ ಬಿರುಕು ಕಾಣಿಸಿಕೊಂಡಿದೆ. ಅದಕ್ಕೆ ನಾನು ಕಾರಣನಲ್ಲ. ನಾನು ಈ ಪರಿವಾರವನ್ನು ಒಡೆಯುವ ಪ್ರಯತ್ನ ಮಾಡಿಲ್ಲ. ಅವರ ಪರಿವಾರಕ್ಕೆ ನಾನು ಹೊಸಬ. ಅವರ ಹಳೇ ವ್ಯವಹಾರ ಏನು ಎಂಬುದು ನನಗೆ ಗೊತ್ತಿಲ್ಲ. ಮಾಧ್ಯಮದವರೇ ಬೇಕಿದ್ದರೆ ಅವರ ವ್ಯವಹಾರ ತಿಳಿದುಕೊಂಡು ಸಮಸ್ಯೆ ಇದ್ದರೆ ಬಗೆಹರಿಸಿ. ಬೆಳಗಾವಿ ತಾಲೂಕಿನ ಪಿಎಲ್‌ಡಿ ಬ್ಯಾಂಕ್ ಚುನಾವಣೆಯನ್ನು ನಾನೊಬ್ಬನೇ ಮಾಡುತ್ತಿದ್ದೆ. ಆಗ ನನಗೆ ರಮೇಶ ಜಾರಕಿಹೊಳಿ ಬೆಂಬಲ ವ್ಯಕ್ತಪಡಿಸಿದರು. ಇದಾದ ನಂತರ ಈ ಮೂವರ ಪರಿವಾರದೊಂದಿಗೆ ನಾನು ಗುರುತಿಸಿಕೊಂಡಿಲ್ಲ. ಅವರ ರಾಜಕೀಯ ವಿಷಯಗಳಲ್ಲಿ ಸಹ ತಲೆ ಹಾಕಿಲ್ಲಎಂದು ಹೇಳಿದರು.
ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಭೇಟಿ ನೀಡಿ ಅವರ ಸಮಸ್ಯೆ ಬಗೆಹರಿಸುವ ಮೂಲಕ ಸಚಿವ ಡಿ.ಕೆ.ಶಿವಕುಮಾರ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಸಚಿವರ ಜವಾಬ್ದಾರಿ. ಸಚಿವ ಶಿವಕುಮಾರ ಅದರಂತೆ ನಡೆದುಕೊಂಡಿದ್ದಾರೆ. ಇದರಿಂದ ಜಿಲ್ಲೆಯ ರಾಜಕಾರಣದ ಮೇಲೆ ಹಿಡಿತ ಸಾಧಿಸಬಹುದು ಎಂದು ಅವರು ತಿಳಿದುಕೊಂಡಿದ್ದರೆ ಅದು ತಪ್ಪು. ಪ್ರತಿಭಟನಾಕಾರರಿಗೆ ಶರಬತ್ತು ಕುಡಿಸಿ ಧರಣಿ ಹಿಂದಕ್ಕೆ ಪಡೆಯುವಂತೆ ಮಾಡಿದರೆ ನಾಯಕರಾಗುವುದಿಲ್ಲ. ಶರಬತ್ತಿನಿಂದ ನಾಯಕತ್ವ ಬರುವುದಿಲ್ಲ. ಶಿವಕುಮಾರ ಒಬ್ಬ ಸರ್ಕಾರದ ಪ್ರತಿನಿಧಿಯಾಗಿ ಬಂದಿದ್ದರು ಅಷ್ಟೆ. ನಾನೂ ಸಹ ಸಚಿವನಾಗಿದ್ದಾಗ ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಿದ್ದೇನೆಎಂದರು. ಮಧ್ಯಪ್ರವೇಶ ಅಗತ್ಯವಿತ್ತು:
ವಿಶ್ವವಿದ್ಯಾಲಯದಲ್ಲಿ ಕೆಲ ಹಿತಾಸಕ್ತಿ ಸಂಘಟನೆಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದವು. ಇದೇ ರೀತಿ ನಾವು ಸಡಿಲು ಬಿಟ್ಟಿದ್ದರೆ ನನ್ನ ಕ್ಷೇತ್ರದಲ್ಲೇ ನನಗೆ ಸಂಕಷ್ಟ ತಂದಿಡುತ್ತಿದ್ದರು. ಹೀಗಾಗಿ, ನಾನು ಮಧ್ಯಪ್ರವೇಶ ಮಾಡಬೇಕಾಯಿತು. ವಿಶ್ವವಿದ್ಯಾಲಯದಲ್ಲಿ ರಾಜಕಾರಣ ತರದೇ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಸಿಗಬೇಕು ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.
Related Articles
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಕೇವಲ ಸರ್ಕಾರದ ಪ್ರವಾಸಿ ಮಂದಿರಕ್ಕೆ ಸೀಮಿತವಾದ ಮಂತ್ರಿಯಾಗಿದ್ದಾರೆ. ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಅದರ ಬಗ್ಗೆ ಚರ್ಚೆ ಆಗುತ್ತಿಲ್ಲ. ಪರಿಹಾರ ಸಿಗುತ್ತಿಲ್ಲ ಎಂದು ಸಹೋದರನ ವಿರುದ್ಧವೇ ವಾಗ್ಧಾಳಿ ನಡೆಸಿದರು.
Advertisement
ಜಿಲ್ಲಾ ಉಸ್ತುವಾರಿ ಸಚಿವರು ಯಾರ ಕೈಗೂ ಸಿಗುತ್ತಿಲ್ಲ. ಮಾಧ್ಯಮದವರೇ ಅವರನ್ನು ಹುಡುಕಿ ಕೊಡಲಿ. ನಮಗೂ ಸಹ ಕೆಲ ಇತಿಮಿತಿಗಳಿವೆ. ಸಚಿವರಿಗೆ ಹೇಳುವಷ್ಟು ಸಾಮರ್ಥ್ಯ ನನಗಿಲ್ಲ. ಜಿಲ್ಲೆಯಲ್ಲಿ ಬರಗಾಲ ಬಿದ್ದಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ಮಾಡುವುದು ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ. ಈ ಬಗ್ಗೆ ಅವರನ್ನೇ ಕೇಳಬೇಕು ಎಂದರು.
ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ಹಾಗೂ ಯಮಕನಮರಡಿ ಕ್ಷೇತ್ರದ ಬಗ್ಗೆ ಗಮನ ಹರಿಸುತ್ತಿದ್ದು, ಅಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ನಾನು ಒತ್ತು ಕೊಡುತ್ತಿದ್ದೇನೆ. ಜಿಲ್ಲಾ ಉಸ್ತುವಾರಿಯಾದವರು ಇಡೀ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಸಮ್ಮಿಶ್ರ ಸರ್ಕಾರ ಸಂಪೂರ್ಣವಾಗಿ ಟೇಕಾಫ್ ಆಗಲು ಇನ್ನೂ ಕಾಲಾವಕಾಶ ಬೇಕು. ಎಲ್ಲ ಕ್ಷೇತ್ರಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬರುತ್ತಿಲ್ಲ ಎಂಬ ಅಸಮಾಧಾನ ಶಾಸಕರಿಗೆ ಇದೆ. ಅಭಿವೃದ್ಧಿ ವಿಷಯದ ಬಗ್ಗೆ ಸದನದಲ್ಲಿ ಮಾತ್ರ ಚರ್ಚೆ ಮಾಡಿದರೆ ಅನುದಾನ ಬಿಡುಗಡೆ ಆಗುವುದಿಲ್ಲ. ಬೇರೆ ಅವಧಿಯಲ್ಲೂ ಅನುದಾನ ಬರಬಹುದು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ ನಡೆದಿದೆ ಎಂಬ ಆರೋಪಗಳಿದ್ದು, ಈ ಸಂಬಂಧ ಈಗಾಗಲೇ ಮಾಹಿತಿ ಸಂಗ್ರಹಿಸಲಾಗುತ್ತಿದೆ. ವಿಶ್ವವಿದ್ಯಾಲಯದಿಂದ ಸಾಕಷ್ಟು ಮಾಹಿತಿ ಪಡೆದುಕೊಳ್ಳಲಾಗಿದೆ. ಎಲ್ಲ ಮಾಹಿತಿ ಬಂದ ನಂತರ ಮುಂದಿನ ಕ್ರಮದ ಬಗ್ಗೆ ಆಲೋಚಿಸಲಾಗುವುದು ಎಂದರು.
ಜಿಲ್ಲೆಗೆ ಎರಡು ಸಚಿವ ಸ್ಥಾನ ಬೇಕಿಲ್ಲ. ಈಗ ಕಾಂಗ್ರೆಸ್ ಪಕ್ಷದ ಪಾಲಿಗೆ ಆರು ಸ್ಥಾನಗಳು ಮಾತ್ರ ಉಳಿದಿವೆ. ಹೀಗಿರುವಾಗ ಜಿಲ್ಲೆಗೆ ಮತ್ತೂಂದು ಸಚಿವ ಸ್ಥಾನ ನೀಡುವ ನಿರೀಕ್ಷೆ ಇಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಈಗಾಗಲೇ ಇದನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ. ಈ ಸರ್ಕಾರದ ಎರಡು ವರ್ಷದ ಅವಧಿಯ ನಂತರ ಸೂಕ್ತ ಸ್ಥಾನ ನೀಡುವುದಾಗಿ ಪಕ್ಷದ ವರಿಷ್ಠರು ಭರವಸೆ ನೀಡಿದ್ದಾರೆ. ನಾನು ಶಾಸಕನಾಗಿ ಪಕ್ಷ ಸಂಘಟನೆ ಮಾಡುತ್ತೇನೆ.– ಸತೀಶ ಜಾರಕಿಹೊಳಿ, ಶಾಸಕ.