Advertisement

ಸದ್ಗುಣಗಳಲ್ಲಿ ಲಕ್ಷ್ಮೀ ವಾಸ

10:37 AM Aug 14, 2018 | Team Udayavani |

ಕಲಬುರಗಿ: ಸತ್ಯ, ತಪಸ್ಸು, ದಾನ- ಧರ್ಮ, ವ್ರತ, ಪರಾಕ್ರಮ, ಧೈರ್ಯ, ಸದ್ಗುಣಗಳಿದ್ದಲ್ಲಿ ಲಕ್ಷ್ಮೀ ವಾಸವಿರುತ್ತದೆ. ಭಗವಂತನ ಅರ್ಧಾಂಗಿನಿ, ಸಂಪತ್ತಿನ ಅಧಿದೇವತೆ ಲಕ್ಷ್ಮೀ ಕಟಾಕ್ಷಕ್ಕಾಗಿ ಬಾಹ್ಯ ಹಾಗೂ ಆಂತರಿಕ ಶುದ್ಧಿಯೊಂದಿಗೆ ಭಗವಂತನನ್ನು, ಮಹಾಲಕ್ಷ್ಮೀಯನ್ನು ಪೂಜಿಸಬೇಕು ಎಂದು ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದರು ಹೇಳಿದರು.

Advertisement

ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಎನ್‌.ವಿ. ಸಂಸ್ಥೆಯ ಸತ್ಯಪ್ರಮೋದತೀರ್ಥ ಸಭಾಮಂಟಪದ ಪ್ರಧಾನ ವೇದಿಕೆಯಲ್ಲಿನ ಭಾಗವತ ಪ್ರವಚನ, ಅನುಗ್ರಹ ಸಂದೇಶದಲ್ಲಿ ಅವರು ಮಾತನಾಡಿದರು. ಇಂದ್ರದೇವರು ಮತ್ತು ಲಕ್ಷ್ಮೀದೇವಿ ನಡುವಿನ ಸಂವಾದ ನಮ್ಮೆಲ್ಲರ ಕಣ್ತೆರೆಸುತ್ತದೆ. ಬಲಿ ಚಕ್ರವರ್ತಿಯ ದರ್ಬಾರಲ್ಲಿನ ಇಂದ್ರದೇವರ ಉಪಸ್ಥಿತಿಯಲ್ಲಿ ನಡೆದಂತಹ ಪುರಾಣ ಪ್ರಸಂಗ ವಿವರಿಸುತ್ತ ಬಲಿ ಚಕ್ರವರ್ತಿಯ ಶರೀರದಿಂದ ಹೊರಬಂದ ಸಲಕ್ಷಣ ಮುತ್ತೈದೆ ಆಚೆ ಬಂದು ಇಂದ್ರನತ್ತ ಹೊರಟು ಬಂದಳು. 

ಕುತೂಹಲದಿಂದ ನೀವ್ಯಾರೆಂದು ಕೇಳಿದ ಇಂದ್ರದೇವರಿಗೆ ಆಕೆ ತಾನು ಲಕ್ಷ್ಮೀ ಎಂದು ಪರಿಚಯ ಹೇಳಿಕೊಳ್ಳುತ್ತಾಳೆಂದು ಪುರಾಣ ಪ್ರಸಂಗ ವಿವರಿಸಿದರು.

ಲಕ್ಷ್ಮೀ ಹಾಗೂ ಇಂದ್ರನ ನಡುವಿನ ಈ ಸಂವಾದದ ಪ್ರಸಂಗ ನಮಗೆಲ್ಲರಿಗೂ ಪಾಠ. ಇದರಿಂದ ನಾವು ತಿಳಿದುಕೊಳ್ಳಬೇಕಾದ ಆದರ್ಶವೆಂದರೆ ಸತ್ಯ ವ್ರತ, ದಾನ, ಧರ್ಮ, ಧೈರ್ಯ, ತಂದೆ-ತಾಯಿಗಳ ಸೇವೆ, ಗುರುಗಳ
ಸೇವೆ, ವೇದಗಳ ಅಧ್ಯಯನ ತಪ್ಪದೇ ಮಾಡಬೇಕು. ಅದುವೇ ನಿಜವಾದ ಸಂಪತ್ತು. ಅಲ್ಲೇ ಲಕ್ಷ್ಮೀ ವಾಸವಿರುತ್ತದೆ ಎಂದರು.

ನಾಲ್ಕು ಕೃತಿಗಳ ಬಿಡುಗಡೆ: ಇದೇ ಸಂದರ್ಭದಲ್ಲಿ ಸತ್ಯಾತ್ಮತೀರ್ಥರು ಸ್ಥಳೀಯವಾಗಿ ರಘುನಾಥತೀರ್ಥ ಅಧ್ಯಯನಾಶ್ರಮದಲ್ಲಿ ಕುಲಪತಿ ಪಂ. ರಾಮಾಚಾರ್ಯ ಅವಧಾನಿ ಅವರ ಬಳಿ ಪಾಠ ಹೇಳಿಸಿಕೊಳ್ಳುತ್ತಿರುವ ಪ್ರೊ| ನಿತಿನ್‌ ಮಾಹುರಕರ್‌ ಬರೆದಿರುವ ಗೀತಾ ಸಂದೇಶ (ಆಂಗ್ಲ), ಪುಣೆಯ ಲೇಖಕರು ಬರೆದಿರುವ ದಾಸರ ಕುರಿತಾದ ಜೀವನ ವೃಂತಾಂತದ ಮರಾಠಿ ಆವೃತ್ತಿ ಸೇರಿದಂತೆ ನಾಲ್ಕು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ತದನಂತರ ಪಂ. ಪ್ರಮೋದಾಚಾರ್ಯ ಪೂಜಾರ ಅವರಿಂದ ಖಾಂಡವ ದಹನ ಉಪನ್ಯಾಸ ನಡೆಯಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next