Advertisement

Udupi: ಕೆಲಸ ಕಾರ್ಯಗಳಿಗೆ ಕಚೇರಿಗೆ ಸಾರ್ವಜನಿಕರು ಬಂದಾಗ ಸ್ಪಂದಿಸಿ: ಸಚಿವೆ ಹೆಬ್ಬಾಳಕರ್

04:43 PM Nov 30, 2024 | Team Udayavani |

ಉಡುಪಿ : ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ತಮ್ಮ ಕೆಲಸ ಕಾರ್ಯಗಳನ್ನು ಅರಿಸಿ ಬಂದಾಗ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಿ, ಚುರುಕುಗಾಗಿ ಕೆಲಸಗಳನ್ನು ಮಾಡಿಕೊಟ್ಟಲ್ಲಿ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Advertisement

ಉಡುಪಿ ಜಿಲ್ಲಾ ಪಂಚಾಯತ್ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶನಿವಾರ(ನ.30) ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಸಾಲಿನಲ್ಲಿ ವಾಡಿಕೆಗಿಂಡ ಶೇಕಡ 17 ರಷ್ಟು ಹೆಚ್ಚು ಮಳೆಯಾಗಿದೆ. ಹೆಚ್ಚಿನ ಮಳೆಯಿಂದಾಗಿ ಬೆಳೆಹಾನಿ, ಮೂಲಭೂತ ಸೌಕರ್ಯಗಳಾದ ರಸ್ತೆ, ಸರ್ಕಾರಿ ಕಟ್ಟಡಗಳು, ಸೇತುವೆ ಸೇರಿದಂತೆ ಮತ್ತಿತ್ತರ ಆಸ್ತಿ ಪಾಸ್ತಿಗಳಿಗೆ ಹಾನಿವುಂಟಾಗಿದೆ. ಈ ಸಂಬಂಧ ಈಗಾಗಲೇ ಬೆಳೆಹಾನಿ, ಮಾನವನಹಾನಿಗೆ ಸೇರಿದಂತೆ ಮತ್ತಿತ್ತರ ಹಾನಿಗಳಿಗೆ ಪರಿಹಾರವನ್ನು ನೀಡಲಾಗಿದೆ ಎಂದರು.

ಮೂಲಭೂತ ಸೌಕರ್ಯಗಳ ಹಾನಿಗಳ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಕೃತಿ ವಿಕೋಪ ಅನುದಾನದ ಅಡಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದಕ್ಕೆ ಅನುದಾನದ ಕೊರತೆ ಇದೆ. ಈ ಬಗ್ಗೆ ಮುಂದಿನ ಻ಅಧಿವೇಶನದ ವೇಳೆ ಮುಖ್ಯಮಂತ್ರಿಗಳ ಜಿಲ್ಲೆಯ ಶಾಸಕರೊಂದಿಗೆ ನಿಯೋಗ ಕೊಂಡೊಯ್ಯಲಾಗುವುದು. ಈ ಸಂಬಂಧ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಉಳಿದಂತೆ, ಪಶ್ಚಿಮ ವಾಹಿನಿ ಯೋಜನೆಯಡಿ ಕರಾವಳಿ ಭಾಗದಲ್ಲಿ ಪಶ್ಚಿಮಾಭಿಮುಖವಾಗಿ ನದಿಗಳ ಸಿಹಿ ನೀರು ಹರಿದು ಸಮುದ್ರ ಸೇರುತ್ತಿದ್ದು, ನೀರು ವ್ಯರ್ಥ ಆಗುತ್ತಿದೆ. ಇದನ್ನು ತಡೆಯಲು ಕಿಂಡಿ‌ ಅಣೆಕಟ್ಟುಗಳನ್ನು ಕಳೆದ ನಾಲ್ಕೈದು ವರ್ಷಗಳಿಂದ ನಿರ್ಮಾಣ ಮಾಡಲು ಮುಂದಾಗಿದ್ದು, ಈವರೆಗೂ ಜಿಲ್ಲೆಯಲ್ಲಿ 666 ಕಿಂಡಿ‌ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸುವ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಈಗಾಗಲೇ ಶೇಡಕ 50ಕ್ಕೂ ಹೆಚ್ಚು ಕಿಂಡಿ‌ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಲಾಗಿದೆ. ಬಾಕಿ ಉಳಿದಿರುವುದಕ್ಕೆ ಡಿಸೆಂಬರ್ 20 ರೊಳಗೆ ಅಳವಡಿಸಲು ಸೂಚನೆ ನೀಡಲಾಯಿತು. ಹಾಳಾಗಿ ರುವ ಹಲಗೆಗಳನ್ನು ಬದಲಿಸಲು ದುರಸ್ತಿಗಾಗಿ ಅನುದಾನ ಸಹ ಬಿಡುಗಡೆ ಮಾಡಲಾಗಿದೆ. ಇವುಗಳನ್ನು ಸೂಕ್ತವಾಗಿ ಬಳಕೆ ಮಾಡಿಕೊಳ್ಳಲು ಸಚಿವರು ಸೂಚನೆ ನೀಡಿದರು.

Advertisement

ಕಿಂಡಿ‌ ಅಣೆಕಟ್ಟು ನಿರ್ಮಾಣದಿಂದ ಅಂತರ್ಜಲ ವೃದ್ಧಿಯಾಗಿದೆ ಎಂಬುದರ ವೈಜ್ಞಾನಿಕ ವರದಿಯನ್ನು ನೀಡಲು ಸೂಚನೆ ನೀಡಿದ ಸಚಿವರು, ನಗರಾಭಿವೃದ್ಧಿ ಅನುದಾನ ದಲ್ಲಿ 15 ದಿನಗಳಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ತಿಳಿಸಿದರು.

ಮೀನುಗಾರಿಕೆಗೆ ಅನುಕೂಲವಾಗುವ ಉದ್ದೇಶದಿಂದ ಹೆಜಮಾಡಿ ಮೀನುಗಾರಿಕೆ ಬಂದರಿನ ಅಭಿವೃದ್ಧಿ ಕಾಮಗಾರಿ ಶೇಕಡ 80 ರಷ್ಟು ಮುಕ್ತಾಯಗೊಂಡಿದ್ದು, ಬಾಕಿ ಉಳಿದಿರುವ ಕಾಮಗಾರಿ ಮುಕ್ತಾಯಗೊಳಿಸಲು ಸೂಚನೆ ನೀಡಿದರು.

ಉಡುಪಿ ಜಿಲ್ಲೆಯ ಹಂಗಾರಕಟ್ಟೆಯಲ್ಲಿ ಕೋಸ್ಟಲ್ ಬರ್ತ್ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಲಾಗಿದ್ದು, ಈ ಕುರಿತು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ ಅನುಮೋದನೆ ನೀಡಲಾಗಿದೆ. ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲು ಆದೇಶಿಸಿದರು. ಜೊತೆಗೆ ಗಂಗೊಳ್ಳಿಯ‌ ಕೋಸ್ಟಲ್ ಬರ್ತ್ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಿಆರ್ ಝೆಡ್ ನಿರಾಕ್ಷೇಪಣೆ ಪಡೆದು ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಿದರು.

ಕರಾವಳಿ ಭಾಗದ ಮೀನುಗಾರಿಕೆ ಚಟುವಟಿಕೆಗಳನ್ನು ಅನುಕೂಲವಾಗುವಂತೆ ಮಳೆಯಿಂದ ಹಾನಿಯಾಗಿರುವ ರಸ್ತೆ, ದುರಸ್ತಿ ಕಾಮಗಾರಿಗೆ ಅನುದಾನ ಕೋರಿ ಅಧಿವೇಶನದ ವೇಳೆ ಸಿಎಂ ಭೇಟಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕಾಡುಗಳ ತಪ್ಪಲಲ್ಲಿ ವಾಸಿಸುವ ಮಲೆಕುಡಿಯ ಕೊರಗ ಸಮುದಾಯದವರಿಗೆ ಸರ್ಕಾರದ ಯೋಜನೆಗಳು ಹಾಗೂ ಕಾಮಗಾರಿಯನ್ನು ತಲುಪಿಸಬೇಕು, ಆದರೆ, ಕೆಲವರು ರೇಷನ್ ಕಾರ್ಡ್ ಹೊಂದಿಲ್ಲವೆಂಬ ಕಾರಣದಿಂದ ಪಡಿತರ ಹಾಗೂ ಗ್ಯಾರಂಟಿ ಯೋಜನೆಗಳನ್ನು ತಲುಪಿಲ್ಲ. ಅರ್ಹರಿರುವ ಪ್ರತಿಯೊಬ್ಬರಿಗೂ ಇವುಗಳನ್ನು ತಲುಪಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಖಡಕ್ ಸೂಚನೆ ನೀಡಿದರು.

ಹೊಸ ಹಾಸ್ಟೆಲ್ ಗಳಿಗೆ ಬೇಡಿಕೆ

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸ್ತುತ ಸಾಲಿನಲ್ಲಿ ಉಡುಪಿ ಜಿಲ್ಲೆಗೆ ಈಗಾಗಲೇ ಹೊಸದಾಗಿ ಎರಡು ಹಾಸ್ಟೆಲ್ ಗಳು ಮಂಜೂರಾಗಿದ್ದು,‌ಹೆಚ್ಚುವರಿ ಹಾಸ್ಟೆಲ್ ಗಳನ್ನು ತೆರೆಯಲು ಸಭೆಯಲ್ಲಿ ಶಾಸಕರು ಸಚಿವರಿಗೆ ಮನವಿ ಮಾಡಿದರು.

ಘನತಾಜ್ಯ‌ ವಿಲೇವಾರಿ

ಗ್ರಾಮೀಣ ಭಾಗಗಳಲ್ಲಿ ಕಳೆದ ಹಲವು ದಿನಗಳಿಂದ ತಾಂತ್ರಿಕ ಕಾರಣಗಳಿಂದ ಸರಿಯಾಗಿ ಘನತಾಜ್ಯ ವಿಲೇವಾರಿ ಆಗುತ್ತಿಲ್ಲ. ಇದನ್ನೂ ಕೂಡಲೇ ಬಗೆಹರಿಸಿ, ಜಿಲ್ಲೆಯನ್ನು ತ್ಯಾಜ್ಯ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಜಿಲ್ಲೆಯಲ್ಲಿ ಜನ ಸಾಮಾನ್ಯರು ಮನೆಕಟ್ಟಲು ಅನುಮತಿ ಪಡೆಯಲು ತುಂಬಾ ತೊಂದರೆ ಅನುಭವಿಸುತ್ತಿದ್ದು, ವಿಶೇಷವಾಗಿ ಜಿಲ್ಲೆಯಲ್ಲಿ 9 ಅಂಡ್ 11 ಸಮಸ್ಯೆ ಇದ್ದು, ಆರ್‌ಡಿಪಿಆರ್, ಕಂದಾಯ, ನಗರಾಭಿವೃದ್ಧಿ ಇಲಾಖೆಗಳು ಸಮಸ್ಯೆಗಳನ್ನು ಬಗೆಹರಿಸಲು ಸೂಚನೆ ನೀಡಿದರು.

ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಸೀಫುಡ್ ಪಾರ್ಕ್ ನಿರ್ಮಾಣ ಮಾಡಲು ಈಗಾಗಲೇ ಜಮೀನು ಮಂಜೂರಾಗಿದ್ದು, 69 ಏಕರೆ ವ್ಯಾಪ್ತಿಯಲ್ಲಿರುವ ಮರಗಳನ್ನು ತೆರವುಗೊಳಿಸುವ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಮರ ತೆರವುಗೊಳಿಸುವ ಸಂದರ್ಭದಲ್ಲಿ ಆದಷ್ಟು ಮರಗಳನ್ನು ಉಳಿಸಿಕೊಳ್ಳಲು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯ ಜನ ಸಾಮಾನ್ಯರಿಗೆ ಮನೆಕಟ್ಟಲು ಸರಳವಾಗಿ ಮರಳು ಲಭ್ಯವಾಗುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದ ಸಚಿವರು, ಮನೆಕಟ್ಟಲು ಅಗತ್ಯವಿರುವ ಕೆಂಪು ಕಲ್ಲುಗಳ ಗಣಿಗಾರಿಕೆಗೆ ಅಧಿಕಾರಿಗಳು ಜಿಲ್ಲೆಯಲ್ಲಿ ತಡೆಹಿಡಿದಿರುವ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳು ನಿಯಮನುಸಾರ ಕೆಂಪು ಕಲ್ಲುಗಳ ಅನುಮತಿ ನೀಡಬೇಕೆಂದು ಸೂಚಿಸಿದರು.

ಸಭೆಯಲ್ಲಿ ಶಾಸಕರಾದ ಸುನೀಲ್ ಕುಮಾರ್.ವಿ, ಗುರ್ಮೆ ಸುರೇಶ್ ಶೆಟ್ಟಿ, ಯಶ್ ಪಾಲ್ ಎ ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಕೆಡಿಪಿ ಸದಸ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: Scissor: ಮಹಿಳೆಯ ಹೊಟ್ಟೆಯಲ್ಲೇ ಕತ್ತರಿ ಬಿಟ್ಟ ವೈದ್ಯ, ವಿಚಾರ ಗೊತ್ತಾಗಿದ್ದು 2 ವರ್ಷದ ಬಳಿಕ

Advertisement

Udayavani is now on Telegram. Click here to join our channel and stay updated with the latest news.

Next