ಬೆಳಗಾವಿ: ನಾನು ಮೊದಲೇ ಕಪ್ಪು ಬಣ್ಣದ ಮನುಷ್ಯ. 10 ವರ್ಷಗಳ ಕಾಲ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಪ್ಪು ಮುಖದ ಶಾಸಕನನ್ನು ನೋಡಿ ಬೇಸರಗೊಂಡಿದ್ದ ಜನ ಹ್ಯಾಂಡ್ ಸಮ್, ಸುಂದರ ಮುಖದವರನ್ನು ಶಾಸಕರನ್ನಾಗಿ ಮಾಡಿ ನನ್ನನ್ನು ಬದಲಾಯಿಸಿದ್ದಾರೆ ಎಂದು ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ್ ಅವರು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ವ್ಯಂಗ್ಯವಾಡಿದರು.
ತಾಲೂಕಿನ ಸುಳೇಭಾವಿ ಗ್ರಾಮದ ಹೊರವಲಯದ ತೋಟದಲ್ಲಿ ಶುಕ್ರವಾರ ನಡೆದ ಸುಳೇಭಾವಿ ಹಾಗೂ ಸಾಂಬ್ರಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಹ್ಯಾಂಡ್ ಸಮ್ ಇಲ್ಲದ, ಸೌಂದರ್ಯವಂತೂ ಇರದ ನನ್ನ ಈ ಕಪ್ಪು ಮುಖ ನೋಡಿ ಜನರು ಬದಲಾವಣೆ ಬಯಸಿದರು. ಹೀಗಾಗಿ ನನ್ನ ಬಿಟ್ಟು ಬೇರೆಯವರನ್ನು ಶಾಸಕರನ್ನಾಗಿ ಮಾಡಿದ್ದಾರೆ. ಚುನಾವಣೆ ವೇಳೆ ಬೇಳೆ ಬೇಯಿಸುವ ಕುಕ್ಕರ್, ಇಸ್ತ್ರಿ ಪೆಟ್ಟಿಗೆ, ಸೀರೆ ಹಂಚಿದವರು ಬೆಳಗಾವಿ ಗ್ರಾಮೀಣದಲ್ಲಿ ಗೆದ್ದು ಶಾಸಕರಾದರು. ಮತ್ತೆ ಏನೇನು ಹಂಚುತ್ತಾರೆ ಎಂಬುದನ್ನು ನೋಡಬೇಕಾಗಿದೆ ಎಂದು ಹೆಬ್ಬಾಳಕರ್ ಗೆ ಟಾಂಗ್ ನೀಡಿದರು.
ಇದನ್ನೂ ಓದಿ:ರಾಜ್ಯದಲ್ಲಿ ಕೋಳಿ, ಮೊಟ್ಟೆ ಮಾರಾಟಕ್ಕೆ ನಿರ್ಬಂಧವಿಲ್ಲ, ಎಚ್ಚರ ಅಗತ್ಯ : ಪ್ರಭು ಚೌವ್ಹಾಣ್
ಕಾಂಗ್ರೆಸ್‌ಗೆ ಸಹಾಯ ಮಾಡಿದರೆ ಪಾಕಿಸ್ತಾನಕ್ಕೆ ಸಹಾಯ ಮಾಡಿದಂತೆ. ಹೀಗಾಗಿ ಭಾರತೀಯರು ಕಾಂಗ್ರೆಸ್ ಒಪ್ಪಿಕೊಳ್ಳುತ್ತಿಲ್ಲ. ಶಿವಾಜಿ ಮಹಾರಾಜರು, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಮಹಾತ್ಮಾ ಗಾಂಧೀಜಿ, ಸ್ವಾಮಿ ವಿವೇಕಾನಂದ ಅವರನ್ನು ಬಿಜೆಪಿಯಲ್ಲಿ ಗೌರವಿಸುತ್ತೇವೆ. ಭಾರತ ಮಾತಾ ಕೀ ಜೈ ಎನ್ನುತ್ತೇವೆ. ಆದರೆ ಕಾಂಗ್ರೆಸ್‌ನವರಿಗೆ ದೇಶದ್ರೋಹಿ ಟಿಪ್ಪು ಸುಲ್ತಾನ್ ಮಾತ್ರ ಬೇಕು. ಹಿಂದವಿ ಸ್ವರಾಜ್ಯ ನಿರ್ಮಾಣ ಬಗ್ಗೆ ಕಾಂಗ್ರೆಸ್ ಹೇಳುವುದಿಲ್ಲ ಎಂದು ಕಿಡಿಕಾರಿದರು.
ಬಿಜೆಪಿಯಲ್ಲಿ ಹುಟ್ಟಿ ಬಿಜೆಪಿಯಲ್ಲಿಯೇ ಸಾಯುತ್ತೇವೆ. ಬಿಜೆಪಿ ನಮ್ಮ ರಕ್ತದಲ್ಲಿದೆ. ಉಸಿರು ಇರೋವರೆಗೂ ನಾನು ಬಿಜೆಪಿಯಲ್ಲಿಯೇ ಇರುತ್ತೇನೆ. ಕಾಂಗ್ರೆಸ್ ಮುಳುಗುವ ಹಡಗು. ಆ ಪಕ್ಷದ ನಾಯಕ ರಾಹುಲ್ ಗಾಂಧಿ ಆರು ತಿಂಗಳಿಗೊಮ್ಮೆ ನಾಪತ್ತೆ ಆಗಿರುತ್ತಾರೆ. ರಾಹುಲ್‌ನಿಂದಲೇ ಬಿಜೆಪಿಗೆ ಅನುಕೂಲವಾಗುತ್ತಿದೆ ಎಂಬ ಮಾತನ್ನು ಸ್ವತಃ ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ರಾಹುಲ್ ಇಂಡಿಯನ್ ಇದಾರಾ ಅಥವಾ ಇಟಲಿಯನ್ ಇದಾರಾ ಎಂಬ ಗೊಂದಲವಿದೆ ಎಂದು ವ್ಯಂಗ್ಯವಾಡಿದರು.