Advertisement

ವಿಜೃಂಭಣೆಯ ಲಕ್ಷ್ಮೀದೇವಿ ಬಂಡಿ ಉತ್ಸವ

05:15 PM Mar 28, 2019 | Team Udayavani |
ಪಾಂಡವಪುರ: ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮದೇವತೆ ಶ್ರೀಲಕ್ಷ್ಮೀದೇವಿ ಬಂಡಿ ಉತ್ಸವ ಸಂಭ್ರಮದಿಂದ ನೆರವೇರಿತು.
ಜಾತ್ರೆಯಲ್ಲಿ ಹಾರೋಹಳ್ಳಿ- ಶಂಭೂವಿನಹಳ್ಳಿ, ಕೆ.ಬೆಟ್ಟಹಳ್ಳಿ, ಡಾಮಡಹಳ್ಳಿ, ಹುಲ್ಕೆರೆ ಗ್ರಾಮದ ಎತ್ತಿನ ಬಂಡಿಗಳ ವಿಶೇಷ
ಉತ್ಸವ ಮೆರಗು ನೀಡಿತು. ಜಾತ್ರೆಯಲ್ಲಿ ಭಕ್ತರು ಶಿಳ್ಳೆ ಹೊಡೆದು, ಕುಣಿದು ಕುಪ್ಪಳಿಸಿದರು.
ಪ್ರತಿವರ್ಷದಂತೆ ಜಾತ್ರೆಯ ಹಿಂದಿನ ದಿನ ಮಂಗಳವಾರ ರಾತ್ರಿಯೆ ಹಣ್ಣಿನ ಹೆಡಿಗೆಗಳನ್ನು ಎತ್ತಿನ ಬಂಡಿಯ ಮೂಲಕ
ಗ್ರಾಮದ ಶ್ರೀಲಕ್ಷ್ಮೀದೇವಿಯ ದೇವಸ್ಥಾನಕ್ಕೆ ತಂದು ಪದ್ಧತಿಯಂತೆ ಪೂಜಾ ಕಾರ್ಯದಲ್ಲಿ ಭಾಗಿಯಾದರು.
ಭಕ್ತರಿಂದ ಬಾಯಿಬೀಗ: ಜಾತ್ರಾ ಮಹೋತ್ಸವದಲ್ಲಿ ನೂರಾರು ಭಕ್ತರು ಬಾಯಿಬೀಗ ಹಾಕಿಕೊಂಡು ದೇವಸ್ಥಾನದು ಸುತ್ತ ಮೂರು ಪ್ರದಕ್ಷಿಣೆ ಸುತ್ತಿ ದೇವರ ಹರಕೆ ತೀರಿಸಿದರು. ಸುತ್ತಮುತ್ತಲಿನ ಗ್ರಾಮಗಳಿಂದ ಎತ್ತಿನ ಬಂಡಿ ಹೊಡೆದುಕೊಂಡು ಬಂದಿರುವಂತಹ ಭಕ್ತರು ಶ್ರೀಲಕ್ಷ್ಮೀದೇವಿ ದೇವಸ್ಥಾನವನ್ನು ಮೂರು ಸುತ್ತು ಪ್ರದಕ್ಷಿಣೆ ಮಾಡಿ, ಬಳಿಕ ಎತ್ತಿನ ಬಂಡಿಯಲ್ಲಿ ತಂದಿದ್ದ ಹೂವು, ಹಣ್ಣು ದೇವಸ್ಥಾನಕ್ಕೆ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಹಣ್ಣು ದವನ ಸಮರ್ಪಣೆ: ಜಾತ್ರೆಯ ಅಂಗವಾಗಿ ಬುಧವಾರ ಕೆ.ಬೆಟ್ಟಹಳ್ಳಿ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದ
ಮುಂದೆ ಅಪಾರ ಜನಸೋಮ ಬಂದು ಸೇರಿದ್ದರು. ಮೊದಲು ನಾಲ್ಕು ಗ್ರಾಮದ ದೇವರ ಪೂಜೆ ಹೊತ್ತು
ಲಕ್ಷ್ಮೀದೇವಿಯ ದೇವಸ್ಥಾನದ ಸುತ್ತ ಮೆರವಣಿಗೆ ನಡೆಸಲಾಗುತ್ತದೆ. ಈ ವೇಳೆ ಭಕ್ತರು ಹಣ್ಣು ದವನ ದೇವರಿಗೆ
ಸಮರ್ಪಿಸಿ ಪೂಜೆ ಸಲ್ಲಿಸಿದರು.  ಪೂಜಾ ಕುಣಿತ, ಪೂಜಾ ವಿಧಾನಗಳು ಮುಗಿಯುತ್ತಿದ್ದಂತೆಯೇ ಜಾತ್ರೆಯ ಮುಖ್ಯಭಾಗವಾದ
ಎತ್ತಿನ ಬಂಡಿ ಉತ್ಸವ ದೇವರಗುಡ್ಡರು ಮುಂದೆ ನಡೆಸುತ್ತಿದ್ದಾಗ ಯುವಕರು ಪಟಾಕಿ ಸಿಡಿಸಿ ಊಘೇ ಊಘೇ ಎಂದು ಕೂಗಿದರು. ಎತ್ತುಗಳು ಬಂಡಿಗಳನ್ನು ಹೊತ್ತು ಲಕ್ಷ್ಮೀದೇವಿ ದೇವಸ್ಥಾನದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿದವು.
ಬಂಡಿ ಉತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮನ್ನೆಚ್ಚರಿಕೆ ಕ್ರಮ  ವಹಿಸಿದರು. ಬಳಿಕ ಬಂಡಿ ಉತ್ಸವ ಭಕ್ತರು ತಮ್ಮ ತಮ್ಮ ಊರಿಗೆ ತೆರಳಿದರು ಬಳಿಕ ಲಕ್ಷ್ಮೀದೇವಿ ಜಾತ್ರೆಗೆ ತೆರೆಬಿದ್ದಿತು.
ಜಾತ್ರಾ ಮಹೋತ್ಸವಕ್ಕೆ ಕೆ.ಬೆಟ್ಟಹಳ್ಳಿ ಗ್ರಾಮದ ಅಕ್ಕಪಕ್ಕದ ಗ್ರಾಮಗಳಾದ ಹಾರೋಹಳ್ಳಿ, ಎಂ.ಬೆಟ್ಟಹಳ್ಳಿ, ಜಾಗಶೆಟ್ಟಹಳ್ಳಿ,
ವಡ್ಡರಹಳ್ಳಿ, ಹರವು, ಅರಳಕುಪ್ಪೆ, ಡಾಮಡಹಳ್ಳಿ, ಶಂಭೂನಹಳ್ಳಿ ಮತ್ತು ಹುಲ್ಕೆರೆ, ಹುಲ್ಕರೆಕೊಪ್ಪಲು, ಶ್ಯಾದನಹಳ್ಳಿ, ಗ್ರಾಮಗಳು ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಗ್ರಾಮಗಳಿಂದ ಸಾವರಾರು ಭಕ್ತರು ಆಗಮಿಸಿ ಜಾತ್ರೆಯನ್ನು
ಯಶಸ್ವಿಗೊಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next