ಲಕ್ಷ್ಮೇಶ್ವರ: ತಾಲೂಕಿನ ಗೊಜನೂರ ಗ್ರಾಮದಲ್ಲಿರುವ ಕರ್ನಾಟಕ ಕಸ್ತೂರ ಬಾ ಗಾಂಧಿ ಬಾಲಕೀಯರ ವಸತಿ ನಿಲಯಕ್ಕೆ ಸ್ವಂತ ಕಟ್ಟಡವಿಲ್ಲದೇ ಗ್ರಾಮದ ಪ್ರಾಥಮಿಕ ಶಾಲೆಯ ಕೇವಲ ಎರಡು ಕೊಠಡಿಗಳಲ್ಲಿಯೇ 80 ವಿದ್ಯಾರ್ಥಿನಿಯರು ದಿನ ಕಳೆಯುತ್ತಿದ್ದಾರೆ.
6ರಿಂದ 10ನೇ ತರಗತಿಯವರೆಗಿನ ಬಡತನ ರೇಖೆಗಿಂತ ಕೆಳಗಿರುವ ಮತ್ತು ಶಾಲೆಯಿಂದ ಹೊರಗುಳಿದ ಎಸ್‌ಸಿ-ಎಸ್‌ಟಿ ಮತ್ತು ಇತರೇ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿನಿಯರ ಶಿಕ್ಷಣಕ್ಕಾಗಿ ತೆರೆದಿರುವ ವಸತಿ ನಿಲಯ ಇದಾಗಿದೆ. 2012-13ರಲ್ಲಿ ರಾಜ್ಯ ಸರ್ಕಾರ ಪೂರಕ ಸಿದ್ಧತೆಗಳಿಲ್ಲದೇ ಈ ವಸತಿ ನಿಲಯ ಆರಂಭ ಮಾಡಿತು. ವಸತಿ ನಿಲಯಕ್ಕಾಗಿ ಗ್ರಾಮದ ಪ್ರಾಥಮಿಕ ಶಾಲೆಯ ಎರಡು ಕೊಠಡಿ ಎರವಲು ಪಡೆಯುವ ಮೂಲಕ ಮಂಜೂರಾದ ವಸತಿ ನಿಲಯ ಉಳಿಸಿಕೊಳ್ಳುವಲ್ಲಿ ಇಲಾಖೆ ಗ್ರಾಮಸ್ಥರ ಸಹಕಾರದಿಂದ ಯಶಸ್ವಿಯಾಯಿತು.
ಶಿಕ್ಷಣ ಇಲಾಖೆಯು ಈ ವಸತಿ ನಿಲಯ ನಿರ್ವಹಿಸಲು ಸರ್ಕಾರೇತರ ಸಂಸ್ಥೆಗಳಿಗೆ ಗುತ್ತಿಗೆ ನೀಡಿ ಕೈ ತೊಳೆದುಕೊಂಡಿದೆ. ಒಂದು ಕೊಠಡಿಯಲ್ಲಿ ತಲಾ 40 ಬಾಲಕಿಯರಂತೆ ತುಂಬಲಾಗಿದ್ದು, ಕಾಲು ಚಾಚಿ ಮಲಗಲೂ ಕೂಡ ಆಗದಂತಹ ಸ್ಥಿತಿಯಿದೆ. ವಿದ್ಯಾರ್ಥಿನಿಯರು ತಮ್ಮ ಟ್ರಂಕ್, ಪುಸ್ತಕ, ಹಾಸಿಗೆ, ಬಟ್ಟೆ-ಬರೆ ಇತರೇ ಅವಶ್ಯಕ ವಸ್ತುಗಳನ್ನು ಮುಂದಿಟ್ಟುಕೊಂಡು ಅಭ್ಯಸಿಸುತ್ತಿದ್ದು, ಮೂಕವೇದನೆ ಅನುಭವಿಸುತ್ತಿದ್ದಾರೆ.
ಇದು ಕೇವಲ ವಸತಿ ಶಾಲೆಯಾಗಿದ್ದು, ಮಕ್ಕಳು ಶಿಕ್ಷಣಕ್ಕಾಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಅಭ್ಯಸಿಸುತ್ತಿದ್ದಾರೆ. 6ನೇ ವರ್ಗದಲ್ಲಿ 12, 7ನೇ ವರ್ಗದಲ್ಲಿ 15, 8ನೇ ವರ್ಗದಲ್ಲಿ 13, 9ನೇ ವರ್ಗದಲ್ಲಿ 23 ಹಾಗೂ 10ನೇ ವರ್ಗದಲ್ಲಿ 17 ಸೇರಿ ಒಟ್ಟು 80 ವಿದ್ಯಾರ್ಥಿನಿಯರು ವಾಸವಾಗಿದ್ದಾರೆ. ಇವರಿಗೆ ಮಧ್ಯಾಹ್ನ ಶಾಲೆಯ ಬಿಸಿಯೂಟವಾದರೆ ಬೆಳಗ್ಗೆ, ರಾತ್ರಿ ಮತ್ತು ರಜಾ ದಿನಗಳು ಇವರ ಊಟೋಪಚಾರವನ್ನು ಕೊಪ್ಪಳ ಮೂಲದ ಮಂಜುಶ್ರೀ ಎಂಬ ಸಂಸ್ಥೆ ನಿಭಾಯಿಸುತ್ತಿದೆ.
ಧಾರವಾಡದ ಕೆ.ಆರ್.ಪಿ ಅಸೋಸಿಯೆಟ್ಸ್‌ನವರು ವಸತಿ ನಿಲಯದ ವಾರ್ಡನ್, ದೈಹಿಕ ಶಿಕ್ಷಕರು, ಕಾವಲುಗಾರ ಮತ್ತು ಇಬ್ಬರು ಅಡುಗೆ ಸಿಬ್ಬಂದಿ ವ್ಯವಸ್ಥೆ ನಿರ್ವಹಿಸುತ್ತದೆ. ಇಲ್ಲಿನ ಶಿಕ್ಷಣ ಇಲಾಖೆಯದ್ದು ಕೇವಲ ಉಸ್ತುವಾರಿ ಮಾತ್ರ.