Advertisement

ವರುಣಾರ್ಭಟಕ್ಕೆ ಹಿಂಗಾರು ಬೆಳೆ –ತೋಟಗಾರಿಕಾ ಬೆಳೆಗಳು ಸಂಪೂರ್ಣ ನಾಶ

12:50 PM Jan 10, 2021 | Team Udayavani |

ಲಕ್ಷ್ಮೇಶ್ವರ: ತಾಲೂಕಿನಾದ್ಯಂತ ಶುಕ್ರವಾರ ಸುರಿದ ಅಕಾಲಿಕ ಮಳೆಯಿಂದ ರೈತರ ಜೀವನಾಧಾರದ ಹಿಂಗಾರಿನ ಬೆಳೆಗಳು
ಮತ್ತು ತೋಟಗಾರಿಕಾ ಬೆಳೆಗಳು ಸಂಪೂರ್ಣ ಹಾನಿಗೀಡಾಗಿದ್ದು, ರೈತರ ಜಂಘಾಬಲವೇ ಉಡುಗಿದಂತಾಗಿದೆ.

Advertisement

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾಗಿ ರೈತರು ಸಂಕಷ್ಟದ ಸುಳಿಗೆ ಸಿಲುಕಿದ್ದರು.
ಆದಾಗ್ಯೂ ಎದೆಗುಂದದ ರೈತರು ಬಡ್ಡಿ ಸಾಲ ಮಾಡಿ, ಉದ್ರಿ ಬೀಜ, ಗೊಬ್ಬರ ತಂದು ಹಿಂಗಾರಿನಲ್ಲಿ ಬಿತ್ತನೆ ಮಾಡಿದ್ದರು.
ಬಿತ್ತನೆ ಮಾಡಿದ 3 ತಿಂಗಳವರೆಗೂ ಹನಿ ಮಳೆಯೂ ಆಗಿರಲಿಲ್ಲ. ಆದರೂ ಹಿಂಗಾರಿನ ಜೋಳ, ಗೋಧಿ, ಕಡಲೆ, ಕುಸುಬಿ ಇತರೆಲ್ಲ
ಬೆಳೆಗಳು ಹಸಿರಿಂದ ಕಂಗೊಳಿಸಿದ್ದವು. ಈ ವೇಳೆ ಬೆಳೆಗೆ ತಗುಲಿದ್ದ ಕೀಟಬಾಧೆ ರಕ್ಷಣೆಗಾಗಿ ಕ್ರಿಮಿನಾಶಕ, ಔಷಧೋಪಚಾರ
ಸಿಂಪಡಿಸಿ ಬೆಳೆ ಉಳಿಸಿಕೊಂಡಿದ್ದರು.  ಫಲವತ್ತಾಗಿ ಬೆಳೆದು ಜನವರಿ ಕೊನೆ ಅವಧಿಯಲ್ಲಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ
ರೈತರಿಗೆ ಅಕಾಲಿಕ ಮಳೆ ಬರಸಿಡಿಲಿನಂತೆ ಎರಗಿದೆ.

ಇದನ್ನೂ ಓದಿ:ನೃತ್ಯದಲ್ಲಿ ಟಾಪ್‌ 50ರಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡ ಸುಳೇಭಾವಿ ಬಾಲಕಿಯ ಮೆಗಾ ಝಲಕ್‌

ಕಾಳು ಕಟ್ಟಿದ ಜೋಳದ ಬೆಳೆ ಸಂಪೂರ್ಣ ನೆಲಕಚ್ಚಿದೆ. ಹೂ ಭರಿತ ಕಡಲೆ, ಗೋಧಿ, ಸೂರ್ಯಕಾಂತಿ, ಕುಸುಬಿ ಇತರೇ ಬೆಳೆಗಳು
ಈ ಮಳೆಯಿಂದ ಫಲ ಕೊಡದಂತಾಗಿ ಬರಡಾಗುತ್ತವೆ. ರೋಗಬಾಧೆ ಹೆಚ್ಚುತ್ತದೆ. ಜಾನುವಾರುಗಳ ಮೇವಿನ ಆಧಾರದ ಹಿಂಗಾರಿನ ಬೆಳೆ ಹಾಳಾದರೆ ವರ್ಷಪೂರ್ತಿ ಜಾನುವಾರುಗಳ ಸಂರಕ್ಷಣೆ ಕಷ್ಟವಾಗುತ್ತದೆ. ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಲಕ್ಷ್ಮೇಶ್ವರ ತಾಲೂಕಿನಲ್ಲಿ ಒಟ್ಟು 29195 ಹೆಕ್ಟೇರ್‌ ಪ್ರದೇಶದಲ್ಲಿ ಹಿಂಗಾರಿ ಬಿತ್ತನೆ ಮಾಡಲಾಗಿದೆ. ಅದರಲ್ಲಿ 13950 ಹೆಕ್ಟೇರ್‌ ಪ್ರದೇಶದಲ್ಲಿ ಜೋಳ, 10000 ಹೆಕ್ಟೇರ್‌ ಜಮೀನಿನಲ್ಲಿ ಕಡಲೆ, 1230 ಹೆಕ್ಟೇರ್‌ ಜಮೀನನಲ್ಲಿ ಸೂರ್ಯಕಾಂತಿ, 2600 ಚಳಿ ಬೀಟಿ ಹತ್ತಿ ಮತ್ತು 705 ಹೆಕ್ಟೇರ್‌ ಜಮೀನಿನಲ್ಲಿ ಗೋಧಿ ಬಿತ್ತನೆಯಾಗಿದೆ.

Advertisement

ಅಕ್ಟೋಬರ್‌ನಲ್ಲಿ ಬಿತ್ತನೆಯಾಗಿರುವ ಬೆಳೆಗಳು ಜನವರಿ ಅಂತ್ಯಕ್ಕೆ ಕೊಯ್ಲಿಗೆ ಬರುತ್ತಿದ್ದವು. ಈ ಹಂತದಲ್ಲಿ ರೈತರ ಪಾಲಿಗೆ
ಯಮಸ್ವರೂಪಿಯಾಗಿ ಬಂದ ಅಕಾಲಿಕ ಮಳೆ ರೈತರನ್ನು ಕೃಷಿಯಿಂದ ವಿಮುಖರಾಗುವಂತೆ ಮಾಡುತ್ತಿದೆ.

ಲಕ್ಷ್ಮೇಶ್ವರ ಸೇರಿ ತಾಲೂಕಿನ ಗೊಜನೂರ, ಮಾಗಡಿ, ಯಳವತ್ತಿ, ಮಾಡಳ್ಳಿ, ಯಳವತ್ತಿ, ಯತ್ತಿನಹಳ್ಳಿ, ರಾಮಗೇರಿ, ಬೂದಿಹಾಳ,
ಕೊಕ್ಕರಗೊಂದಿ, ಸೂರಣಗಿ, ಬಡ್ನಿ, ಗೊಜನೂರ, ಅಡರಕಟ್ಟಿ, ದೊಡ್ಕೂರ, ಶಿಗ್ಲಿ, ಅಡರಕಟ್ಟಿ ಗ್ರಾಮ ವ್ಯಾಪ್ತಿಯ ಕಪ್ಪು ಮಣ್ಣಿನ
ಜಮೀನುಗಳಲ್ಲಿ ಹಿಂಗಾರಿ ಬೆಳೆಯಲಾಗಿದೆ. ಆದರೆ, ಅಕಾಲಿಕ ಹಿಂಗಾರಿನ ಮಳೆಯಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ
ಬರದಂತಾಗಿದೆ.

ಅನ್ನದಾತರ ಅಳಲು
ಮುಂಗಾರಿನಲ್ಲಿ ಅತಿವೃಷ್ಟಿಯಿಂದ ಬೆಳೆಹಾನಿ ಅನುಭವಿಸಿದ್ದೇವೆ. ತಿನ್ನಲು ಕಾಳು, ಜಾನುವಾರುಗಳ ಮೇವಿಗಾಗಿ ಪ್ರತಿ ಎಕರೆಗೆ
ಬೀಜ, ಗೊಬ್ಬರ, ಕ್ರಿಮಿನಾಶ ಸೇರಿ 10 ಸಾವಿರ ರೂ. ಖರ್ಚು ಮಾಡಿ ಹಿಂಗಾರಿ ಬೆಳೆ ಬೆಳೆದಿದ್ದೇವೆ. ರೋಗಬಾಧೆ ತಡೆದು ಪ್ರತಿ
ಎಕರೆಗೆ 10 ಚೀಲ ಜೋಳದ ನಿರೀಕ್ಷೆಯಲ್ಲಿದ್ದೆವು. ಇನ್ನೆರಡು ದಿನಗಳಲ್ಲಿ ಎಳ್ಳ ಅಮವಾಸ್ಯೆಯನ್ನು ಬಂಧು-ಬಳಗದವರೊಂದಿಗೆ ಸಂಭ್ರಮದಿಂದ ಆಚರಿಸುವ ಹುಮ್ಮಸ್ಸಿನಲ್ಲಿದ್ದೆವು. ಆದರೆ, ಈ ಮಳೆ ನಮ್ಮೆಲ್ಲ ಆಸೆ, ಕನಸು, ನಿರೀಕ್ಷೆಗಳನ್ನು ನುಚ್ಚುನೂರು ಮಾಡಿದೆ. ಇನ್ನೂ ಮುಂಗಾರಿನ ಬೆಳೆಹಾನಿಯೇ ಬಂದಿಲ್ಲ. ಮುಂದೇನು ಎಂಬ ಚಿಂತೆ ನಮ್ಮನ್ನು ಕಾಡುತ್ತಿದೆ ಎಂಬುದು ಲಕ್ಷ್ಮೇಶ್ವರದ ರೈತರಾದ ರುದ್ರಪ್ಪ ಆದಿ, ಬಸವರಾಜ ಮೆಣಸಿನಕಾಯಿ, ಅಡರಕಟ್ಟಿಯ ರವಿ ಹವಳದ, ಪ್ರಕಾಶ ಶಿರಹಟ್ಟಿ, ಬಡ್ನಿಯ ಭರಮಪ್ಪ ಕಂಬಳಿ, ಯಳವತ್ತಿಯ ಬಾಪುಗೌಡ ಪಾಟೀಲ ಮುಂತಾದವರ ಅಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next