ಲಕ್ಷ್ಮೇಶ್ವರ: ಪುಲಿಗೆರೆ ಉತ್ಸವದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದಿಂದ ನಡೆದ ಲಕ್ಷ್ಮೇಶ್ವರ ದೃಶ್ಯ ವಲ್ಲರಿ ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭ ಶನಿವಾರ ಜರುಗಿತು.
ಚಿತ್ರಕಲಾ ಶಿಬಿರದಲ್ಲಿ ಪಾಲ್ಗೊಂಡ ವಿವಿಧ ಜಿಲ್ಲೆಗಳ ಕಲಾವಿದರು ನಾಲ್ಕು ದಿನಗಳ ಕಾಲ ಲಕ್ಷ್ಮೇಶ್ವರದಲ್ಲಿರುವ ಪ್ರಾಚೀನ ದೇವಸ್ಥಾನ, ಸ್ಮಾರಕಗಳ ಚಿತ್ರ ಬಿಡಿಸಿದರು. ಈ ಎಲ್ಲ ಚಿತ್ರಗಳು ಶನಿವಾರ ಸೋಮೇಶ್ವರ ದೇವಸ್ಥಾನದಲ್ಲಿ ಪ್ರದರ್ಶನಗೊಂಡು ಕಲಾರಸಿಕರ ಮನಸೂರೆಗೊಂಡವು. ಕಲಾವಿದರು ಲಕ್ಷ್ಮೇಶ್ವರದ ಸೋಮೇಶ್ವರ, ಗೊಲ್ಲಾಳೇಶ್ವರ, ಲಕ್ಷ್ಮೀಲಿಂಗನ ದೇವಸ್ಥಾನ, ಬಸದಿ, ಮಸೀದಿ, ಮಹಂತೀನಮಠದ ಶಿಲ್ಪಕಲೆಯನ್ನು ತಮ್ಮ ಕೈ ಚಳಕದಿಂದ ಚಿತ್ರಿಸುವ ಮೂಲಕ ನಮ್ಮ ಸಂಸ್ಕೃತಿ ಪರಂಪರೆಯನ್ನು ಜೀವಂತಗೊಳಿಸುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನ ಅದ್ಬುತವಾಗಿ ಚಿತ್ರಿತಗೊಡಿತು.
ಶಿಬಿರದಲ್ಲಿ ಕಲಾವಿದರಾದ ಗದಗಿನ ಮಹೇಶ ಶರಣಯ್ಯ ಹೊಸಹಳ್ಳಿಮಠ, ಕೋಲಾರದ ಬಂಗಾರಪೇಟೆಯ ಮುನಿಯಪ್ಪ, ಹುಬ್ಬಳ್ಳಿಯ ರಮೇಶ ಚಂಡೆಪ್ಪನವರ, ಬೀದರನ ರಾಜಕುಮಾರ ಬಿ. ಭರಸಿಂಗಿ, ಕಲಬುರಗಿಯ ಶ್ರೀಶೈಲ ಗುಡೇದ, ಕಾರವಾರದ ಯೋಗೇಶ ನಾಯಕ, ಉಡುಪಿಯ ಹರ್ಷ ದಾಮೋದರ, ತುಮಕೂರಿನ ನವೀನ ಕುಮಾರ ಬಿ., ಧಾರವಾಡದ ವಿನಾಯಕ ಎಸ್. ಕಾಟೇನಹಳ್ಳಿ, ಧಾರವಾಡದ ಜಿ.ಆರ್. ಮಲ್ಲಾಪುರ, ಪ್ರವೀಣ ಗಾಯಕರ ಇವರು ಚಿತ್ರ ಬಿಡಿಸಿ ತಮ್ಮ ಕಲಾ ಪ್ರತಿಭೆ ಮೆರೆದರು. ಇವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ವಿದ್ಯಾಭವನದ ವಿಶೇಷಾಧಿಕಾರಿ ಸಿ.ಎನ್. ಅಶೋಕಕುಮಾರ, ನಾಡಿನ ಸಂಸ್ಕೃತಿಯ ಪ್ರತೀಕವಾದ ದೇವಸ್ಥಾನ, ಶಿಲ್ಪಕಲೆ, ಜನಪದ ಸೊಗಡನ್ನು ಪ್ರತಿಬಿಂಬಿಸುವ ಶಕ್ತಿ ಚಿತ್ರಕಲೆಗಿದೆ. ಸಾಂಸ್ಕೃತಿಕ ಲೋಕದ ಗತವೈಭವವನ್ನು ಭವಿಷ್ಯದ ದಿನಗಳಿಗೆ ಪರಿಚಯಿಸುವ ಮಹತ್ತರ ಕಾರ್ಯ ಕಲಾವಿದರದ್ದಾಗಿದೆ ಎಂದರು.
ಸೋಮೇಶ್ವರ ಭಕ್ತರ ಸೇವಾ ಕಮಿಟಿಯ ಶಿವಣ್ಣ ನೆಲವಗಿ, ಪೂರ್ಣಾಜಿ ಖರಾಟೆ, ಚಂಬಣ್ಣ ಬಾಳಿಕಾಯಿ, ಸೋಮಣ್ಣ ಮುಳಗುಂದ, ವಿ.ಜಿ. ಪಡಗೇರಿ, ನಾರಾಯಣಸಾ ಪವಾರ, ಎಸ್.ಪಿ. ಪಾಟೀಲ, ವೀರಣ್ಣ ಪವಾಡದ, ಗಂಗಾಧರ ಮೆಣಸಿನಕಾಯಿ, ಬಸವರಾಜ ಶಿಗ್ಲಿ, ಚೇತನ ಪಾಟೀಲ, ಸಮೀರ್ ಪೂಜಾರ, ರಾಜಶೇಖರ ಇದ್ದರು.