Advertisement
ಇದಕ್ಕೆ ಕಾರಣ ಗುರಪ್ಪ ದಾಸ್ಯಾಳ ಅವರು ಸಚಿವ ಸವದಿಯವರ ಕಟ್ಟಾ ಶಿಷ್ಯ. ಕೊನೇ ಕ್ಷಣದಲ್ಲಿ ಜೆಡಿಎಸ್ ಟಿಕೆಟ್ ಪಡೆದು ನಾಮಪತ್ರ ಸಲ್ಲಿಸಿರುವ ಗುರಪ್ಪ ದಾಸ್ಯಾಳ, ಈಗ ಅಥಣಿ ಕ್ಷೇತ್ರದ ರಾಜಕಾರಣಕ್ಕೆ ಮಹತ್ವದ ತಿರುವು ನೀಡಿದ್ದಾರೆ. ಅನುಮಾನಕ್ಕೆ ಎಡೆಮಾಡಿಕೊಟ್ಟಿರುವುದು ಸವದಿ ಅವರ ನಡೆ. ತಮಗೆ ಬಿಜೆಪಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಅವರು, ಈಗ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಅವರನ್ನು ಸೋಲಿಸಲು ಗುಪ್ತವಾಗಿ ರಣತಂತ್ರ ಹಣೆದಿದ್ದು, ಅದರ ಭಾಗವಾಗಿಯೇ ದಾಸ್ಯಾಳ ಸ್ಪರ್ಧೆ ಎಂಬ ಮಾತು ಕೇಳಿ ಬರುತ್ತಿವೆ.
Related Articles
Advertisement
60 ಸಾವಿರ ಲಿಂಗಾಯತ ಮತ!: ತೆಲಸಂಗ ಹೋಬಳಿಯ 9 ಹಳ್ಳಿಗಳಲ್ಲಿ ಸುಮಾರು 60 ಸಾವಿರ ಲಿಂಗಾಯತ ಪಂಚಮಸಾಲಿ ಮತದಾರರಿದ್ದಾರೆ. ಇದರ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಳ್ಳುವುದು ಗುರಪ್ಪ ದಾಸ್ಯಾಳ ಗುರಿ. ಅದಕ್ಕೆ ಈಗ ಸವದಿ ಬೆಂಬಲವಾಗಿ ನಿಂತಿದ್ದಾರೆ. ಕುಮಾರಸ್ವಾಮಿ ತಂತ್ರಗಾರಿಕೆಗೆ ಸವದಿ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ದಟ್ಟವಾಗಿ ಕೇಳಿಬರುತ್ತಿವೆ.
ಬಿಜೆಪಿಯಲ್ಲಿ ಹೆಚ್ಚಾದ ತಳಮಳ: ಗುರಪ್ಪ ದಾಸ್ಯಾಳ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಬಿಜೆಪಿಯಲ್ಲಿ ತಳಮಳ ಆರಂಭವಾಗಿದೆ. ತಾಲೂಕಿನ ಐದು ಜಿಪಂ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳು ಜೆಡಿಎಸ್ ಪರವಾಗಿ ನಿಲ್ಲಲಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ನಿಜವೇ ಆದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಗೆಲುವಿಗೆ ಹರಸಾಹಸವನ್ನೇ ಮಾಡಬೇಕು.
ಎಲ್ಲಕ್ಕಿಂತ ಮುಖ್ಯವಾಗಿ ಸವದಿ ನಡೆಯ ಮೇಲೆ ಬಿಜೆಪಿ ಅಭ್ಯರ್ಥಿ ಗೆಲುವು ಅವಲಂಬಿತವಾಗಿದೆ. ಈ ಮಧ್ಯೆ, ಲಕ್ಷ್ಮಣ ಸವದಿ ಹಾಗೂ ಜೆಡಿಎಸ್ ನಾಯಕ ಕುಮಾರಸ್ವಾಮಿ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಇದು ಜೆಡಿಎಸ್ ವಲಯದಲ್ಲಿ ಹೊಸ ಶಕ್ತಿ ಮೂಡಿಸಿದ್ದರೆ, ಈಗಾಗಲೇ ಬಿಜೆಪಿ ಕಾರ್ಯಕರ್ತರ ಆಕ್ರೋಶ ಎದುರಿಸಿರುವ ಮಹೇಶ ಕುಮಟಳ್ಳಿ ವಲಯದಲ್ಲಿ ಮತ್ತಷ್ಟು ಆತಂಕ ಉಂಟು ಮಾಡಿದೆ.
* ಕೇಶವ ಆದಿ