ಬೆಳಗಾವಿ : ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಬಿಜೆಪಿಗೆ ಹೋಗುತ್ತಾರೆ ಎಂಬ ಬಿಸಿಬಿಸಿ ಚರ್ಚೆಗಳು ನಡೆದಿರುವ ಬೆನ್ನಲ್ಲೇ ಸೋಮವಾರ ಸವದಿ ಅವರು ನಗರದಲ್ಲಿ ಬಿಜೆಪಿ ನಾಯಕರ ಜೊತೆಗೆ ಕಾಣಿಸಿಕೊಂಡು ಹೊಸ ಚರ್ಚೆಗೆ ಗ್ರಾಸವಾದರು.
ತಮ್ಮ ವಾಹನದಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಿಜೆಪಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಜತೆಗೆ ಸೋಮವಾರ ಡಿಸಿಸಿ ಬ್ಯಾಂಕ್ ಸಾಮಾನ್ಯ ಸಭೆಗೆ ಬಂದಿದ್ದ ಸವದಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ”ಡಿ ಸಿ ಸಿ ಬ್ಯಾಂಕ್ ಬೋರ್ಡ್ ಮೀಟಿಂಗ್ ಸಲುವಾಗಿ ಬಂದಿದ್ದೇವೆ. ವಿಶೇಷತೆ ಏನೂ ಇಲ್ಲ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನು ಚುನಾವಣೆಗೆ ಮುನ್ನ ಬದಲಾಯಿಸಲಾಗುತ್ತದೆ ಎಂಬ ಪ್ರಶ್ನೆಗೆ, ಅದೆಲ್ಲವೂ ಊಹಾಪೋಹ. ಇಲ್ಲಿ ನಾವೆಲ್ಲ ಪಕ್ಷಾತೀತವಾಗಿಯೇ ನಡೆದುಕೊಂಡು ಬಂದಿದ್ದೇವೆ. ಒಂದೂವರೆ ವರ್ಷದಲ್ಲಿ ಚುನಾವಣೆ ಬರುತ್ತೆ” ಎಂದರು.
ಸವದಿಯವರನ್ನು ಬಿಜೆಪಿಗೆ ಕರೆತರಲು ಒಂದು ತಂಡ ಪ್ರಯತ್ನ ನಡೆಸಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ”ಅವರು ನನಗೆ ಏನೂ ಗೊತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದ ಚಿಹ್ನೆಯ ಮೇಲೆ ಆಯ್ಕೆಯಾಗಿದ್ದೇನೆ. ಕಾಂಗ್ರೆಸ್ ಪಕ್ಷದ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ” ಎಂದರು.
”ಲೋಕಸಭೆ ಚುನಾವಣೆಗೆ ನಾನಾಗಲಿ ಅಥವಾ ನನ್ನ ಮಗನಾಗಲಿ ಸ್ಪರ್ಧೆ ಮಾಡುವದಿಲ್ಲ. ಅದಕ್ಕಾಗಿ ಅರ್ಜಿಯನ್ನೂ ಸಹ ಹಾಕಿಲ್ಲ” ಎಂದು ಸ್ಪಷ್ಟವಾಗಿ ಹೇಳಿದರು.
”ಲಕ್ಷ್ಮಣ ಸವದಿ ಮನಸ್ಸಿನಲ್ಲಿ ಏನಿದೆ? ಎಂದು ತಿಳಿದುಕೊಂಡು ನಂತರ ಮಾತಾಡ್ತಿನಿ” ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ”ನನ್ನ ಮನಸ್ಸಿನಲ್ಲಿ ಏನಿದೆ ಎಂದು ಯಾರಿಗೂ ತಿಳಿದುಕೊಳ್ಳಲು ಆಗಲ್ಲ. ಅದು ನನಗೆ ಮತ್ತು ಭಗವಂತನಿಗೆ ಮಾತ್ರ ಗೊತ್ತು” ಎಂದು ಮಾರ್ಮಿಕವಾಗಿ ಹೇಳಿದರು.
ಬಿ.ಎಲ್. ಸಂತೋಷ್ ಅವರು ನಿಮ್ಮನ್ನು ಸಂಪರ್ಕ ಮಾಡೋಕೆ ಪ್ರಯತ್ನ ಮಾಡಿದ್ದಾರಾ ಎಂಬ ಪ್ರಶ್ನೆಗೆ ”ಯಾರೂ ನನ್ನ ಸಂಪರ್ಕ ಮಾಡಿಲ್ಲ. ಈಗ ಆ ಪ್ರಶ್ನೆ ಉದ್ಭವಿಸಲ್ಲ. ಅವರಿಗೆ ಅವಶ್ಯಕತೆ, ಅನಿವಾರ್ಯ ಇದ್ದಾಗ ಸ್ವಾಭಾವಿಕವಾಗಿ ಕೇಳುತ್ತಾರೆ. ಆದರೆ ತೀರ್ಮಾನ ಮಾಡೋದು ನಾನು” ಎಂದರು.