Advertisement

ಕೊಚ್ಚಿಹೋಗಿದ್ದ 9 ಕಿ.ಮೀ ರಸ್ತೆ ಮರುನಿರ್ಮಿಸಿದ ಲಕ್ಷ್ಮಣ

06:00 AM Nov 06, 2018 | |

ಗಜಪತಿ: ಅದು ಅಕ್ಟೋಬರ್‌ 11. ತಿತ್ಲಿ ಚಂಡಮಾರುತವು ಒಡಿಶಾಗೆ ಅಪ್ಪಳಿಸಿದ ದಿನ. ಅಂದು ಬೆಳಗ್ಗೆ ಶುರುವಾದ ಮಳೆ ರಾತ್ರಿಯಾದರೂ ನಿಂತಿರಲಿಲ್ಲ. ಭಯಭೀತರಾಗಿದ್ದ ಜನ ಕಿಟಕಿ, ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಂಡು ಮನೆಯೊಳಗೆ ಸೇರಿದ್ದರು. ರಾತ್ರಿಪೂರ್ತಿ ತಿತ್ಲಿಯ ಅಬ್ಬರ. ಮರುದಿನ ಬೆಳಗ್ಗೆ ಎಲ್ಲವೂ ಶಾಂತವಾಗಿತ್ತು. ಆದರೆ, ಬಾಗಿಲು ತೆರೆದು ನೋಡಿದ ಜನರಿಗೆ ಆಘಾತ ಕಾದಿತ್ತು. ಅವರ ಓಡಾಟದ ಆಸರೆಯಾಗಿದ್ದ ಕೊಯಿನ್‌ಪುರ – ಕಿಂಚಿಲಿಂಗಿ ರಸ್ತೆಯೇ ಮಾಯವಾಗಿತ್ತು!

Advertisement

ಚಂಡಮಾರುತ ಮತ್ತು ಧಾರಾಕಾರ ಮಳೆಯಿಂದ ಕೊಚ್ಚಿಕೊಂಡು ಹೋಗಿದ್ದ ರಸ್ತೆಯನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದರು. ಆ ಗ್ರಾಮವನ್ನು ಕಿಂಚಿÉಂಗಿಗೆ ಸಂಪರ್ಕಿಸಲು ಇದ್ದ ಒಂದು ಮಾರ್ಗವೂ ಸಂಪೂರ್ಣ ಹಾನಿಗೀಡಾಗಿದೆ. ಈ ರಸ್ತೆ ಹಿಂದಿನ ಸ್ಥಿತಿಗೆ ತಲುಪಲು ಇನ್ನೆಷ್ಟು ತಿಂಗಳುಗಳು ಬೇಕೋ ಎಂಬ ಆತಂಕದಲ್ಲಿದ್ದ ಗ್ರಾಮಸ್ಥರಿಗೆ ಅಂದು ಬೆಳಕಾದವರೇ ಲಕ್ಷ್ಮಣ್‌ ಸಾಬಾರ್‌.

ಮನಸ್ಸಿದ್ದರೆ ಮಾರ್ಗ ಎಂಬ ಮಾತಿನಂತೆ ಗ್ರಾಮಸ್ಥರಲ್ಲಿ ಧೈರ್ಯ ತುಂಬಿ, ಬರೋಬ್ಬರಿ 9 ಕಿ.ಮೀ. ರಸ್ತೆಯನ್ನು ಮರುನಿರ್ಮಿಸಿದ್ದಾರೆ ಲಕ್ಷ್ಮಣ್‌. ಮರಗಳು ಧರೆಗುರುಳಿ, ಗುಡ್ಡಗಳು ಕುಸಿದು ಬಿದ್ದ ಕಾರಣ, ಅಲ್ಲೊಂದು ರಸ್ತೆಯಿತ್ತು ಎಂಬುದೇ ಗೊತ್ತಾಗದಂತೆ ಹಾನಿಗೀಡಾಗಿದ್ದ ರಸ್ತೆಯನ್ನು ಕೇವಲ ಎರಡೂವರೆ ದಿನದಲ್ಲಿ ಮೊದಲಿನಂತೆ ಮಾಡುವಲ್ಲಿ ಲಕ್ಷ್ಮಣ್‌ ಯಶಸ್ವಿಯಾಗಿದ್ದಾರೆ.

ಎರಡೂವರೆ ದಿನ, 70 ಜನರ ಪರಿಶ್ರಮ:ತಮ್ಮ ಕೆಲಸದ ಕುರಿತು ಮಾತನಾಡಿರುವ ಲಕ್ಷ್ಮಣ್‌, “ಹಾನಿಗೀಡಾದ ರಸ್ತೆ ನೋಡಿ ಎಲ್ಲರಂತೆ ನಾನೂ ಬೆಚ್ಚಿಬಿದ್ದಿದ್ದೆ. ಸಂಪರ್ಕವನ್ನು ಮರುಸ್ಥಾಪಿಸದ ಹೊರತು, ಹೊರಗಿನ ಯಾವುದೇ ಸಹಾಯವನ್ನೂ ನಾವು ಪಡೆಯಲು ಸಾಧ್ಯವಿಲ್ಲ ಎಂಬುದು ನನ್ನ ಅರಿವಿಗೆ ಬಂತು. ರಕ್ಷಣಾ ತಂಡವಾಗಲೀ, ವೈದ್ಯಕೀಯ ಸಹಾಯವಾಗಲೀ ನಮ್ಮನ್ನು ತಲುಪುವಂತಿರಲಿಲ್ಲ. ಇದರಿಂದ ಜನರ ಸಂಕಷ್ಟ ಇನ್ನಷ್ಟು ಹೆಚ್ಚುತ್ತದೆ ಎಂದು ಗೊತ್ತಾಯಿತು. ಒಂದು ಕ್ಷಣವನ್ನೂ ವ್ಯರ್ಥ ಮಾಡದೇ, ಗ್ರಾಮಸ್ಥರ ಮನವೊಲಿಸಲು ಯತ್ನಿಸಿದೆ. ಆರಂಭದಲ್ಲಿ, ಈ ಕೆಲಸ ನಮ್ಮಿಂದ ಸಾಧ್ಯವಾ ಎಂದು ಪ್ರಶ್ನಿಸಿದರೂ, ಕೊನೆಗೆ ನನ್ನ ಮಾತು ಕೇಳಿ 70 ಮಂದಿ ಮುಂದೆ ಬಂದರು. ಅಂದೇ ನಾವು ರಸ್ತೆಯಲ್ಲಿ ಬಿದ್ದಿದ್ದ ಅವಶೇಷಗಳನ್ನು ತೆರವು ಮಾಡುವ ಕೆಲಸಕ್ಕೆ ಇಳಿದೆವು.
 
ರಾಜಕೀಯ ಭೇದ ಮರೆತು ಟಂಬೋ, ಕೊಯಿನ್‌ಪುರ ಮತ್ತು ಆಶಿಲಿಂಗಿ ಗ್ರಾಮದ ಹಲವರು ಕೈಜೋಡಿಸಿ ಸತತ ಪರಿಶ್ರಮ ವಹಿಸಿದ ಕಾರಣ, 9 ಕಿ.ಮೀ. ರಸ್ತೆಯನ್ನು ಎರಡೂವರೆ ದಿನದಲ್ಲಿ ದುರಸ್ತಿಗೊಳಿಸಲು ಸಾಧ್ಯವಾಯಿತು. ಜತೆಗೆ ಗ್ರಾಮದಲ್ಲಿ ಒಬ್ಬರ ಬಳಿ ಜೆಸಿಬಿ ಯಂತ್ರ ಇದ್ದ ಕಾರಣ, ಅವರ ಸಹಾಯ ಪಡೆದು ಮೂರು ಅಡಿಗಾಲುವೆಗಳನ್ನೂ ರಿಪೇರಿ ಮಾಡಿದೆವು’ ಎಂದಿದ್ದಾರೆ. 

ತಿತ್ಲಿಯ ಹೀರೋಗೆ ಸಿಎಂ ಅಭಿನಂದನೆ
ಕೆಲಸ ಮುಗಿಯುವ ಹೊತ್ತಿಗೆ ಲಕ್ಷ್ಮಣ್‌ ನೇತೃತ್ವದ 70 ಜನರ ತಂಡವು ಧರೆಗುರುಳಿದ್ದ 500 ಮರಗಳನ್ನು ತೆರವುಗೊಳಿಸಿ, ಅವಶೇಷಗಳನ್ನು ವಿಲೇವಾರಿ ಮಾಡಿ, ಸಂಪರ್ಕವನ್ನು ಮರುಸ್ಥಾಪಿಸಿತು. ಎರಡೂವರೆ ದಿನದ ಸತತ ಕಾಮಗಾರಿ ಯಶಸ್ವಿಯಾಗಿ ಪೂರ್ಣ ಗೊಂಡೊಡನೆ ಗ್ರಾಮಸ್ಥರು ಲಕ್ಷ್ಮಣ್‌ರ ನಾಯಕತ್ವವನ್ನು ಹಾಡಿ ಹೊಗಳಿದರು. ಇವರ ಸಾಧನೆಗೆ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರೂ ನಿಬ್ಬೆರಗಾಗಿದ್ದು, ಲಕ್ಷ್ಮಣ್‌ರನ್ನು “ತಿತ್ಲಿಯ ಹೀರೋ’ ಎಂದು ಕರೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next