ಕೊರಟಗೆರೆ: ತಾಲೂಕಿನ ಇತಿಹಾಸ ಪ್ರಸಿದ್ಧ ಹಂಚಿಹಳ್ಳಿ ಗ್ರಾಮದ ಶ್ರೀಆಂಜನೇಯಸ್ವಾಮಿ ಸನ್ನಿಧಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಸಾವಿರಾರು ಮಂದಿ ಭಕ್ತರು ಶ್ರೀ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದು ದೀಪ ಬೆಳಗುವ ಮೂಲಕ ದೀಪೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ದೇವಸ್ಥಾನದ ಅರ್ಚಕ ಲೋಕೇಶ್ ಮಾತನಾಡಿ, ಇತಿಹಾಸ ಪ್ರಸಿದ್ಧವಾಗಿರುವ ಈ ಆಂಜನೇಯ ಸ್ವಾಮಿಯ ಸನ್ನಿಧಾನದಲ್ಲಿ ಪ್ರತಿ ವರ್ಷವೂ ಕಾರ್ತಿಕ ಮಾಸದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ದೀಪೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆಲ್ಲಾ ಕಾರಣ ಶ್ರೀ ಆಂಜನೇಯ ಸ್ವಾಮಿಯ ನಂಬಿ ಬಂದ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾ, ಎಂದೂ ಕೈಬಿಡದಿರುವುದು ಎಂಬುದಾಗಿದೆ.
ಸನ್ನಿಧಾನದ ಭಕ್ತ ಕುಮಾರ್ ಮಾತನಾಡಿ, ನಮ್ಮ ಹಿರಿಯರ ಕಾಲದಿಂದಲೂ ಶ್ರೀ ಆಂಜನೇಯ ಸ್ವಾಮಿಯ ದರ್ಶನಕ್ಕೆ ಬರುತ್ತಿದ್ದರು. ಅವರ ಜೊತೆ ನಾವೂ ಬರುತ್ತಿದ್ದೆವು. ಶ್ರೀ ಆಂಜನೇಯ ಸ್ವಾಮಿಯ ಕೃಪೆಯಿಂದ ಸುತ್ತಮುತ್ತಲ ಹಳ್ಳಿಗಳ ಜನರು ಸಂತೋಷದಿಂದ ಇದ್ದಾರೆ. ಶ್ರೀ ಆಂಜನೇಯ ಸ್ವಾಮಿಯ ಆಶೀರ್ವಾದವೂ ಎಲ್ಲ ಜನರ ಮೇಲೆ ಇರಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.
ಪ್ರತಿ ಶನಿವಾರ ಸೇರಿದಂತೆ ಹಬ್ಬದ ದಿನ ಶ್ರಾವಣ ಕಾರ್ತಿಕ ಮಾಸದಲ್ಲಿ ಅತಿ ಹೆಚ್ಚು ಭಕ್ತಾದಿಗಳು ಸೇರುವ ಇಂತಹ ಧಾರ್ಮಿಕ ಕ್ಷೇತ್ರಗಳಲ್ಲಿ ಮುಜರಾಯಿ ಇಲಾಖೆಗೆ ಸೇರಿದ್ದರೂ ಕೂಡ ಇಂತಹ ಪುಣ್ಯ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಜರಾಯಿ ಇಲಾಖೆ ವಿಫಲವಾಗಿದೆ ಎನ್ನುವುದು ಭಕ್ತಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಶ್ರೀ ಆಂಜನೇಯ ಸ್ವಾಮಿಯ ಸನ್ನಿಧಾನದಲ್ಲಿ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.