ಬಸವಕಲ್ಯಾಣ: ನಾರಾಯಣಪೂರ ಗ್ರಾಮದ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಸತಿ ನಿಲಯ ನಡೆಸಲು ಸ್ವಂತ ಕಟ್ಟಡ ಇಲ್ಲದ ಕಾರಣ ಬಾಡಿಗೆಗಾಗಿ ವರ್ಷಕ್ಕೆ ಲಕ್ಷಾಂತರ ರೂ. ಹಣ ವ್ಯಯಿಸಲಾಗುತ್ತಿತ್ತು. ಇದನ್ನು ತಪ್ಪಿಸಲು ಗ್ರಾಮದ ಜವಾಹರ ನವೋದಯ ವಿದ್ಯಾಲಯದ ಪಕ್ಕದಲ್ಲಿ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ಕಟ್ಟಡ ನಿರ್ಮಿಸಿ ವರ್ಷ ಕಳೆಯುತ್ತ ಬಂದರೂ ವಸತಿ ನಿಲಯ ಸ್ಥಳಾಂತರಿಸದೇ ಬಾಡಿಗೆ ಕಟ್ಟಡದಲ್ಲಿ ಮುಂದುವರಿಸಲಾಗಿದೆ.
ಜವಾಹಾರ ನವೋದಯ ವಿದ್ಯಾಲಯ ಪಕ್ಕದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮತ್ತು ಬಿಸಿಎಂ ಇಲಾಖೆಯ ವಿದ್ಯಾರ್ಥಿಗಳಿಗಾಗಿ ಅಕ್ಕಪಕ್ಕದಲ್ಲಿಯೇ ಎರಡು ನೂತನ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಕಳೆದ ವರ್ಷ ಉದ್ಘಾಟನೆಯನ್ನೂ ಮಾಡಲಾಗಿದೆ. ಆದರೆ ಹಿಂದುಳಿದ ವರ್ಗಗಳ ವ್ಯಾಪ್ತಿಯ ವಸತಿ ನಿಲಯ ಪ್ರಾರಂಭಿಸಲಾಗಿದ್ದು, ಬಿಸಿಎಂ ವಸತಿ ನಿಲಯ ಮಾತ್ರ ತಿಂಗಳಿಗೆ ಅಂದಾಜು 20ರಿಂದ 25 ಸಾವಿರ ರೂ. ಬಾಡಿಗೆ ಇರುವ ಕಟ್ಟಡದಲ್ಲಿ ಮುಂದುವರಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.ಮಳೆಗಾಲ ಬಂದರೆ ಒಳಗಡೆ ನೀರು ಬರುತ್ತಿವೆ. ಆದ್ದರಿಂದ ಮಕ್ಕಳನ್ನು ಸ್ಥಳಾಂತರ ಮಾಡುತ್ತಿಲ್ಲ ಎಂದು ಸುತ್ತಮುತ್ತಲಿನ ರೈತರು ಮಾಹಿತಿ ನೀಡಿದರು. ಒಂದು ವರ್ಷದಲ್ಲಿಯೇ ನೂತನ ಕಟ್ಟಡದ ಬಣ್ಣ ಕಳಚಿಹೋಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೋಟ್ಯಂತರ ರೂ. ಖರ್ಚು ಮಾಡಿ ಕಟ್ಟಡ ನಿರ್ಮಾಣ ಮಾಡಿದ್ದರೂ ಗುತ್ತಿಗೆದಾರರು, ಅಧಿ ಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಖಜಾನೆಯಿಂದ ಪ್ರತಿ ತಿಂಗಳು ಅಂದಾಜು 20-25ಸಾವಿರ ರೂ. ಬಾಡಿಗಾಗಿ ನೀಡುವುದು ತಪ್ಪಿಲ್ಲ. ಅಧಿಕಾರಿಗಳು ಇತ್ತ ಗಮನ ಹರಿಸಿ ನೂತನ ಕಟ್ಟಡಕ್ಕೆ ವಸತಿ ನಿಲಯ ಸ್ಥಳಾಂತರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಬಸವಕಲ್ಯಾಣ ತಾಪಂ ಸಭಾಂಗಣದಲ್ಲಿ ಈಚೆಗೆ ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ನೂತನ ವಸತಿ ನಿಲಯ ಕಟ್ಟಡ ಪೂರ್ಣಗೊಂಡು ವರ್ಷ ಕಳೆಯುತ್ತ ಬಂದರೂ ಯಾಕೆ ಬಾಡಿಗೆ ಕಟ್ಟಡದಿಂದ ಸ್ಥಳಾಂತರ ಮಾಡಿಲ್ಲ ಎಂದು ಕೇಳಿದಾಗ, ಸಂಬಂಧಪಟ್ಟ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಬೇಕಾಗಿದೆ. ಅದನ್ನು ನೀಡಿ, ಆದಷ್ಟು ಬೇಗ ಸ್ಥಳಾಂತರ ಮಾಡಲಾಗುವುದುಎಂದು ಇಲಾಖೆಯ ಅಧಿ ಕಾರಿ ಹೇಳಿದ್ದರು. ಆದರೆ ಇಂದಿಗೂ ವಸತಿ ನಿಲಯದ ಮಕ್ಕಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡದಿರುವುದು ನೋಡಿದರೆ ಜಿಪಂ ಅಧ್ಯಕ್ಷರ ಮಾತಿಗೂ ಬೆಲೆ ಇಲ್ಲದಂತಾಗಿದೆ.
-ವೀರಾರೆಡ್ಡಿ ಆರ್.ಎಸ್