ನವದೆಹಲಿ : “ಲಖೀಂಪುರ ಖೇರಿಯಲ್ಲಿ 8 ಮಂದಿ ಸಾವಿಗೀಡಾಗಿ 4 ದಿನಗಳು ಕಳೆದವು. ನೀವು ಎಷ್ಟು ಮಂದಿ ಯನ್ನು ಬಂಧಿಸಿದ್ದೀರಿ? ಯಾರ ವಿರುದ್ಧ ಎಫ್ ಐಆರ್ ದಾಖಲಿಸಿದ್ದೀರಿ?’ ಇದು ಉತ್ತರಪ್ರದೇಶ ಸರ್ಕಾರಕ್ಕೆ ಗುರುವಾರ ಸುಪ್ರೀಂ ಕೋರ್ಟ್ ಕೇಳಿರುವ ಪ್ರಶ್ನೆ. ಲಖೀಂಪುರ ಘರ್ಷಣೆಗೆ ಸಂಬಂಧಿಸಿದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸಿಜೆಐ ಎನ್. ವಿ.ರಮಣ ನೇತೃತ್ವದ ನ್ಯಾಯ ಪೀಠ, “ಲಖೀಂಪುರ ಘಟನೆಯು ಅತ್ಯಂತ ದುರ ದೃಷ್ಟಕರ. ನಾಳೆಯೇ ( ಶುಕ್ರವಾರ) ನಮಗೆ ಈ ಬಗ್ಗೆ ಸ್ಥಿತಿಗತಿ ವರದಿ ಸಲ್ಲಿಸ ಬೇಕು. ]
ಹತ್ಯೆಗೀಡಾದ 8 ಮಂದಿ ಯಾರು? ಯಾರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ? ಎಷ್ಟು ಮಂದಿಯನ್ನು ಬಂಧಿಸಿದ್ದೀರಿ ಎಂಬೆಲ್ಲ ವಿವರವನ್ನೂ ನಮಗೆ ನೀಡಬೇಕು’ ಎಂದು ಸೂಚಿಸಿತು. “ವಿಚಾರಣೆ ವೇಳೆ ನಮಗೆ ಬಂದಿರುವ ಮಾಹಿತಿ ಪ್ರಕಾರ, ಮೃತ ವ್ಯಕ್ತಿಯೊಬ್ಬರ ತಾಯಿಯು ತನ್ನ ಮಗ ನನ್ನು ಕಳೆದು ಕೊಂಡು ಆಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದಾರೆ. ಅವರಿಗೆ ಉ.ಪ್ರದೇಶ ಸರ್ಕಾರ ಕೂಡಲೇ ವೈದ್ಯಕೀಯ ಚಿಕಿತ್ಸೆಗೆ ನೆರವಾಗಬೇಕು’ ಎಂದು ನ್ಯಾಯ ಪೀಠ ಹೇಳಿದೆ.
ಇಬ್ಬರು ವಶಕ್ಕೆ: ಸುಪ್ರೀಂ ಕೋರ್ಟ್ ನಿರ್ದೇಶನದ ಬೆನ್ನಲ್ಲೇ ಉತ್ತರ ಪ್ರದೇಶ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ತಲೆಮರೆಸಿಕೊಂಡಿದ್ದಾರೆ. ತನಿಖೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಸಮನ್ಸ್‌ಗೆ ಪ್ರತಿಕ್ರಿಯಿಸದಿದ್ದರೆ, ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಐಜಿಪಿ ಲಕ್ಷ್ಮೀ ಸಿಂಗ್ ಹೇಳಿದ್ದಾರೆ.
ಜತೆಗೆ, ಆಶಿಷ್ ಮಿಶ್ರಾಗೆ ಕಳುಹಿಸಲಾಗಿರುವ ಸಮನ್ಸ್‌ಗೆ ಯಾವುದೇ ಕಾಲ ಮಿತಿ ಹೇರಲಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಜತೆಗೆ, ವಶಕ್ಕೆ ಪಡೆಯಲಾದ ಇಬ್ಬರು ಆರೋಪಿಗಳ ಕುರಿತು ಮಾಹಿತಿಯನ್ನೂ ಅವರು ನೀಡಿಲ್ಲ.
ಹರ್ಯಾಣದಲ್ಲಿ ರೈತನಿಗೆ ಗಾಯ : ಹರ್ಯಾಣದ ಅಂಬಾಲಾದಲ್ಲಿ ಗುರುವಾರ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿರುವಾಗ ಬಿಜೆಪಿ ನಾಯಕರೊಬ್ಬರ ಬೆಂಗಾವಲು ಪಡೆಯ ವಾಹನ ಡಿಕ್ಕಿ ಹೊಡೆದು ರೈತರೊಬ್ಬರು ಗಾಯಗೊಂಡಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.