Advertisement

ಇರುವ ಕೆರೆ,ಬಾವಿ ಸುಸ್ಥಿತಿಗೆ ತಂದರೆ ಯಥೇತ್ಛ ನೀರು!

11:16 PM May 12, 2019 | Team Udayavani |

ಉಡುಪಿ: ಅಂಬಲಪಾಡಿಯ ಅರ್ಧದಷ್ಟು ಭಾಗ ಗ್ರಾ.ಪಂ ವ್ಯಾಪ್ತಿಯಲ್ಲಿದ್ದರೆ ಇನ್ನುಳಿದ ಭಾಗ ನಗರಸಭೆ ವ್ಯಾಪ್ತಿಯಲ್ಲಿದೆ. ನೀರು ಪೂರೈಕೆ ಕೂಡ ನಗರಸಭೆ ಮತ್ತು ಗ್ರಾ.ಪಂ.ನಿಂದ ನಡೆಯುತ್ತದೆ. ಆದರೆ ಎಪ್ರಿಲ್‌ ಬಂತೆಂದರೆ ನೀರಿಗೆ ಪರದಾಡಬೇಕು ಎಂಬ ಸ್ಥಿತಿ! ಈ ಬಾರಿಯಂತೂ ಸಮಸ್ಯೆ ಹೆಚ್ಚು. ಕೆಲವು ಬಾವಿಗಳಲ್ಲಿ ನೀರಿದೆ. ಸಾರ್ವಜನಿಕ ಬಾವಿಗಳು ಇಲ್ಲಿ ಕಡಿಮೆ. ಇರುವ ಬಾವಿಗಳು ದುಸ್ಥಿತಿಯಲ್ಲಿವೆ. ಹಾಗಾಗಿ ಟ್ಯಾಂಕರ್‌ ನೀರಿಗೆ ಕಾಯಬೇಕು. ಎತ್ತರದ ಕೆಲವು ಪ್ರದೇಶಗಳಿಗೆ ನಗರಸಭೆಯ ನೀರು ಬರದೆ 10-12 ದಿನಗಳು ಕೂಡ ಆಗಿವೆ.

Advertisement

ಫ್ಲ್ಯಾಟ್‌ಗಳಿಗೆ ಹೆಚ್ಚುವರಿ ಕನೆಕ್ಷನ್‌?
ಅಂಬಲಪಾಡಿಯಲ್ಲಿ ಹಲವು ವಸತಿ ಸಂಕೀರ್ಣಗಳಿವೆ. ಕೆಲವು ಸಂಕೀರ್ಣಗಳಿಗೆ ನಿಗದಿತ ಸಂಖ್ಯೆಗಿಂತ ಹೆಚ್ಚು ಸಂಪರ್ಕ ನೀಡಲಾಗಿದೆ ಎಂಬ ದೂರು ಸ್ಥಳೀಯರದ್ದು. ಫ್ಲ್ಯಾಟ್‌ಗಳಿಗೆ ನಗರಸಭೆಯಿಂದ ಬೇಕಾಬಿಟ್ಟಿ ನೀರಿನ ಸಂಪರ್ಕ ನೀಡಿರುವುದರಿಂದ ಇದರ ಸುತ್ತಮುತ್ತಲಿನ ಮನೆಗಳಿಗೆ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂಬ ದೂರು ಅವರದ್ದು.

ಅಂಬಲಪಾಡಿ ಜಂಕ್ಷನ್‌, ಪರಿಶಿಷ್ಟ ಜಾತಿಯವರ ಕಾಲನಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರತಿ ವರ್ಷವೂ ಇದೆ. ಇಲ್ಲಿನ ಕೆಲವು ಮನೆಯವರು ಸಮಸ್ಯೆಗೆ ಹೊಂದಿ ಕೊಂಡಿದ್ದಾರೆ! “ಟ್ಯಾಂಕರ್‌ ನೀರುಬಂದರೆ ತುಂಬಿಸಿಡುತ್ತೇವೆ. ಡ್ಯಾಂನಲ್ಲಿ ನೀರೇ ಇಲ್ಲದಿದ್ದರೆ ಕೊಡುವುದು ಎಲ್ಲಿಂದ? ವರ್ಷದಿಂದ ವರ್ಷಕ್ಕೆ ಸಮಸ್ಯೆ ಉಲ್ಬಣಿಸುತ್ತಿರುವುದು ಆತಂಕಕ್ಕೆ ಕಾರಣವಾಗಿಯೆಂದು ಸ್ಥಳೀಯರು ಹೇಳುತ್ತಾರೆ.

ಕೆರೆಗಳನ್ನು ಸುಸ್ಥಿತಿಗೆ ತನ್ನಿ
ಅಂಬಲಪಾಡಿ ವಾರ್ಡ್‌ನಲ್ಲಿ ನಾಯರ್‌ಕೆರೆ ಮತ್ತು ಬೀಡುರಸ್ತೆಯಲ್ಲಿ ಕೆರೆಗಳಿವೆ. ಈ ಕೆರೆಗಳ ಹೂಳು ತೆಗೆದು ಸ್ವತ್ಛಗೊಳಿಸಿದರೆ ನೀರು ದೊರೆಯಬಹುದು. ಪಕ್ಕದ ಮನೆಗಳ ಬಾವಿಗಳ ಅಂತರ್ಜಲ ಹೆಚ್ಚಾಗಬಹುದು. ಈ ಬಗ್ಗೆ ನಗರಸಭೆ ತುರ್ತಾಗಿ ಗಮನ ಹರಿಸಬೇಕು ಎಂಬ ಬೇಡಿಕೆ ಇದೆ.

ಕುಡಿಯಲಾಗದು
ಗ್ರಾ.ಪಂ.ನವರು ಪಂಪ್‌ ಮೂಲಕ ಟ್ಯಾಂಕರ್‌ಗೆ ನೀರು ಹರಿಸಿ ಅದನ್ನು ಮರುದಿನ ಪೂರೈಸುತ್ತಾರೆ. ಇಲ್ಲವಾದರೆ ಅದರಲ್ಲಿ ಕೆಸರು ಮಡ್ಡಿ ಇರುತ್ತದೆ. ಈ ನೀರು ಕುಡಿಯುವುದಕ್ಕೆ ಯೋಗ್ಯವಿಲ್ಲ. ಕುಡಿಯಲು ನಗರಸಭೆಯ ನೀರೇ ಬೇಕು. ಗ್ರಾ.ಪಂ.ನವರು ಗದ್ದೆ ಸಾಲಿನಲ್ಲಿರುವ ಬಾವಿಯನ್ನು ದುರಸ್ತಿಗೊಳಿಸಿದರೆಬೇಕಾದಷ್ಟು ನೀರು ಸಿಗಬಹುದು ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.

Advertisement

ಮಳೆ ಬಂದರೆ ಉಸಿರು!
ಕಳೆದ ಒಂದು ತಿಂಗಳಿನಿಂದ ದಿನಕ್ಕೆ ಎರಡು ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡುತ್ತಿದ್ದೇನೆ. ನಗರಸಭೆಯಿಂದ ಬರುವ ಲೈನ್‌ನಿಂದ ಎತ್ತರದ ಪ್ರದೇಶಗಳಿಗೆ ನೀರು ಹೋಗುತ್ತಿಲ್ಲ. ಜನರಿಗೆ ನೀರು ಒದಗಿಸುವುದು ನಮ್ಮ ಮೊದಲ ಕರ್ತವ್ಯ. ಸದ್ಯಕ್ಕೆ ಮಳೆಯೊಂದೇ ಪರಿಹಾರ. ವಾರಾಹಿಯಿಂದ ನೀರು ತಂದರೆ ಮಾತ್ರ ಶಾಶ್ವತ ಪರಿಹಾರ ದೊರೆಯಬಹುದು.
-ಹರೀಶ್‌ ಶೆಟ್ಟಿ, ನಗರಸಭಾ ಸದಸ್ಯರು, ಅಂಬಲಪಾಡಿ ವಾರ್ಡ್‌

ಕೆರೆಯಲ್ಲಿ ಯಥೇತ್ಛ ನೀರು
ಅಂಬಲಪಾಡಿ ಬೀಡು ರಸ್ತೆಯಲ್ಲಿರುವ ದೊಡ್ಡ ಪುರಾತನ ಕೆರೆಯಲ್ಲಿ ಹೂಳು ತುಂಬಿದೆ. ಕೆಲವು ವರ್ಷಗಳ ಹಿಂದೆ ಇದರ ಹೂಳು ತೆಗೆಯಲಾಗಿತ್ತು. ಆಗ 2 ಪಂಪ್‌ಗ್ಳನ್ನಿಟ್ಟು ನೀರು ತೆಗೆದರೂ ಅದು ಬತ್ತಿರಲಿಲ್ಲ. ಈಗ ಮತ್ತೆ ಇದರಲ್ಲಿ ಕಳೆಗಿಡ ಬೆಳೆದಿದೆ. ಹೂಳು ಕೂಡ ಇರಬಹುದು. ಸ್ವತ್ಛಗೊಳಿಸಿದರೆ ಇದರ ನೀರನ್ನು ಇಡೀ ವಾರ್ಡ್‌ಗೆ ಬಳಸಬಹುದು. ಪರಿಸರದ ಬಾವಿಗಳ ಅಂತರ್ಜಲ ಮಟ್ಟ ಕೂಡ ಹೆಚ್ಚಾಗಬಹುದು.
-ಅಶೋಕ್‌, ಸ್ಥಳೀಯ ನಿವಾಸಿ

ವಾರ್ಡ್‌ ಜನರ ಬೇಡಿಕೆ
– ಶಾಶ್ವತ ಪರಿಹಾರ ಕಲ್ಪಿಸಬೇಕು.
– ಟ್ಯಾಂಕರ್‌ ನೀರಿಗೆ ವ್ಯವಸ್ಥೆ ಮಾಡಬೇಕು.
– ಬಾವಿಗಳನ್ನು ದುರಸ್ತಿ ಮಾಡಬೇಕು.

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next