ದೇವನಹಳ್ಳಿ: ಕೆರೆಗಳು ರೈತರ ಪಾಲಿನ ಸಂಜೀವಿನಿಯಾಗಿದ್ದು, ಮಳೆಯಿಂದ ಕೆರೆಗಳು ತುಂಬಿ ತುಳುಕಿದರೆ ಮುಂದಿನ ದಿನಗಳಲ್ಲಿ ಸಮೃದ್ಧ ಬೆಳೆ ಇಡಲು ಸಹಕಾರಿ ಆಗುತ್ತದೆ ಎಂದು ಶಾಸಕ ಎಲ್. ಎನ್. ನಾರಾಯಣಸ್ವಾಮಿ ಹರ್ಷ ವ್ಯಕ್ತಪಡಿಸಿದರು.
ತಾಲೂಕಿನ ಚಿಕ್ಕಸಣ್ಣೆಯ ಸಣ್ಣ ಅಮಾನಿಕೆರೆ ಉತ್ತಮ ಮಳೆಯಿಂದ ಕೋಡಿ ಹರಿದಿದ್ದು, ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ತಾಲೂಕಾದ್ಯಂತ ದೇವರ ಕೃಪೆಯಿಂದ ಉತ್ತಮ ಮಳೆಯಾಗುತ್ತಿದೆ. 25ವರ್ಷಗಳಿಂದ ತುಂಬದ ಕೆರೆಗಳು ತುಂಬಿರುವುದು ಸಂತಸ ತಂದಿದೆ. ಕಳೆದ ವರ್ಷ ಬೇಸಿಗೆ ಸಂದರ್ಭದಲ್ಲೂ ಕುಡಿಯುವ ನೀರಿನ ಸಮಸ್ಯೆ ಯಾವ ಗ್ರಾಮದಲ್ಲೂ ಕಾಡಿಲ್ಲ. ಈ ಬಾರಿಯೂ ಯಾವುದೇ ನೀರಿನ ಸಮಸ್ಯೆ ಕಂಡು ಬರುವುದಿಲ್ಲ ಎಂದರು.
ಬಹುತೇಕ ಕೆರೆಗಳು ಭರ್ತಿ: ರೈತರಿಗೆ ಕೊಳವೆ ಬಾವಿಗಳಲ್ಲಿ ನೀರು ಸಿಗುವಂತೆ ಆಗಿದೆ. ಸುಮಾರು 25 ವರ್ಷಗಳಿಂದ ಭತ್ತಿ ಹೋಗಿದ್ದ ಕೆರೆಗಳು ಮಳೆಯಿಂದ ತುಂಬಿ ತುಳುಕುತ್ತಿದೆ. ತಾಲೂಕಿನಲ್ಲಿ ಬಹುಶಃ ಎಲ್ಲ ಕೆರೆಗಳು ತುಂಬಿರುವುದು ಸಂತೋಷದ ವಿಷಯವಾಗಿದೆ. ಸುಮಾರು ವರ್ಷಗಳಿಂದ ಕೆರೆಯಲ್ಲಿ ನೀರಿಲ್ಲದೆ ಬರಡಾಗಿತ್ತು. ಇದರಿಂದ ಕೆರೆಯ ಅಂದವೇ ಕಾಣುತ್ತಿರಲಿಲ್ಲ. ಇದೀಗ ಮಳೆಯಾಗುತ್ತಿರುವುದರಿಂದ ತಾಲೂಕಿನ ಬಹುತೇಕ ಕೆರೆಗಳು ತುಂಬಿ ತುಳುಕುತ್ತಿವೆ ಎಂದರು.
ಕೋಡಿ ಹರಿದಿರುವುದು ನಮ್ಮೆಲ್ಲರ ಪುಣ್ಯ: ಗ್ರಾಪಂ ಸದಸ್ಯ ಮಂಜುನಾಥ್ ಮಾತನಾಡಿ, ಕಳೆದ 25ವರ್ಷದ ಹಿಂದ ಕೆರೆ ತುಂಬಿ ಕೋಡಿ ಹರಿದಿತ್ತು. 25 ವರ್ಷದ ನಂತರ ಕೆರೆಕೋಡಿ ಹರಿದಿದೆ. ಉತ್ತಮ ಮಳೆಯಾಗುತ್ತಿರುವುದರಿಂದ ಕೆರೆಗೆ ನೀರು ಬಂದಿರುವುದು ಸಂತಸ ತಂದಿದೆ. ಕೆರೆ ಕೋಡಿ ಹರಿದಿರುವುದು ನಮ್ಮೆಲ್ಲರ ಪುಣ್ಯ. ಸತತ ಮಳೆರಾಯನ ಕೃಪೆಯಿಂದ ಈ ಭಾಗದ ಕೆರೆಗಳಲ್ಲಿ ನೀರು ತುಂಬಿದೆ ಎಂದರು. ಗ್ರಾಪಂ ಸದಸ್ಯ ಮುಕುಂದ ಮಾತನಾಡಿದರು.
ಮಾಜಿ ಶಾಸಕ ಕೆ.ವೆಂಕಟಸ್ವಾಮಿ, ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಸಿ. ಜಗನ್ನಾಥ್, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್. ಮುನೇಗೌಡ, ಅಣ್ಣೇಶ್ವರ ಗ್ರಾಪಂ ಅಧ್ಯಕ್ಷ ವೇಣುಗೋಪಾಲ್, ಉಪಾಧ್ಯಕ್ಷ ವಾಣಿಶ್ರೀ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಚಂದ್ರಶೇಖರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪಟಾಲಪ್ಪ, ಮಾಜಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸಿ.ಮುನಿರಾಜು, ದೊಡ್ಡಸಣ್ಣೆ ವಿಎಸ್‌ಎಸ್‌ಎನ್ ಅಧ್ಯಕ್ಷ ಸಿ.ಮುನಿರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ವಿ.ಮಂಜುನಾಥ್, ತಾಲೂಕು ಜೆಡಿಎಸ್ ಎಸ್‌ಟಿ. ಘಟಕದ ಅಧ್ಯಕ್ಷ ಯರ್ತಿಗಾನಹಳ್ಳಿ ಶಿವಣ್ಣ,ಜಿಪಂ ಮಾಜಿ ಸದಸ್ಯ ಬಸವರಾಜು, ಎ.ಎನ್.ವೆಂಕಟೇಶಪ್ಪ ಇದ್ದರು.
ಅಂತರ್ಜಲ ಮಟ್ಟ ಹೆಚ್ಚಳ
ಮುಂದಿನ ಬೇಸಿಗೆ ನೀರಿನ ಅಭಾವ ಬರುವುದಿಲ್ಲ. ಈ ಹಿಂದೆ ನೀರಿಗಾಗಿ ಸಾಕಷ್ಟು ಪರದಾಡುವ ಪರಿಸ್ಥಿತಿ ಇತ್ತು. ಕೆರೆಗಳು ಭತ್ತಿ ಹೋಗಿದ್ದವು. ಇದೀಗ ಕೆರೆಗಳಲ್ಲಿ ನೀರು ನಿಂತಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಳ ಆಗುತ್ತಿದೆ. ಜತೆಗೆ ಬೋರ್‌ವೆಲ್ ಗಳಲ್ಲಿ ನೀರು ಸಿಗುವಂತೆ ಆಗಿದೆ. ತಾಲೂಕಿನ ಜನರಿಗೆ ಈ ಬಾರಿ ಬೇಸಿಗೆಯಲ್ಲಿ ನೀರಿನ ಕೊರತೆ ಕಂಡು ಬರುವುದಿಲ್ಲ. ಕೆರೆ ಕೋಡಿ ಹರಿದಿದ್ದರಿಂದ ಈ ಭಾಗದಲ್ಲಿರುವ ರೈತಾಪಿ ವರ್ಗದವರಿಗೆ ನೀರಿನ ಅಭಾವ ತಲೆ ತೂರುವುದಿಲ್ಲ ಎಂದು ಶಾಸಕ ಎಲ್. ಎನ್. ನಾರಾಯಣಸ್ವಾಮಿ ಹೇಳಿದರು.