Advertisement

ಸರೋವರ ದೇಗುಲ ಅನಂತಪುರ ಅಭಿವೃದ್ಧಿಗೆ ಸಂಕಲ್ಪ

11:17 PM Sep 18, 2019 | Sriram |

ಕಾಸರಗೋಡು: ದೇವರ ನಾಡು ಎಂದು ಪ್ರಖ್ಯಾತವಾಗಿರುವ ಕೇರಳದ ಯಾತ್ರಿಕರ ನೆಚ್ಚಿನ ತಾಣ ಹಾಗೂ ಏಕೈಕ ಸರೋವರ ದೇವಾಲಯವಾಗಿರುವ ಕುಂಬಳೆ ಸಮೀಪದ ಅನಂತಪುರ ಅನಂತಪದ್ಮನಾಭ ದೇವಾಲಯವನ್ನು ಅಭಿವೃದ್ಧಿಪಡಿಸಲು ಕ್ಷೇತ್ರ ಸಮಿತಿ ತೀರ್ಮಾನಿಸಿದೆ.

Advertisement

ಇದರಂತೆ ಉದ್ಯಾನವನ ಮತ್ತು ಅತಿಥಿ ಮಂದಿರವನ್ನು ನಿರ್ಮಿಸಲು ಸುಮಾರು 1.25 ಕೋ. ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಕೇರಳದ ಪ್ರಮುಖ ದೇವಾಲಯಗಳ ಮಟ್ಟಕ್ಕೆ ಅನಂತಪುರ ಸರೋವರ ದೇವಾಲಯವನ್ನು ಏರಿಸುವ ಉದ್ದೇಶದೊಂದಿಗೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು.

ತಿರುವನಂತಪುರದ ಅನಂತಪದ್ಮನಾಭ ದೇವಸ್ಥಾನದ ಆದಿ ದೇವಾಲಯ ಅನಂತಪುರ ಎಂಬುದಾಗಿ ನಂಬಲಾಗಿದೆ. ನಮಸ್ಕಾರ ಮಂಟಪ, ಕಾಲ್ಸೇತುವೆ ನವೀಕರಣ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ. ಇತ್ತೀಚೆಗೆ ಸಜ್ಜುಗೊಳಿಸಿದ ಲೈಬ್ರೆರಿಯ ಉದ್ಘಾಟನೆ ಶೀಘ್ರವೇ ನಡೆಯಲಿದೆ. ಕ್ಷೇತ್ರದ ಎರಡು ಎಕರೆ ಸ್ಥಳದಲ್ಲಿ ಜೈವ ಕೃಷಿಯನ್ನು ಆರಂಭಿಸಲಾಗಿದೆ. ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಟ್ರಸ್ಟಿ ಬೋರ್ಡ್‌ ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಮುಂದಾಗಿದೆ.

ಅನಂತಶ್ರೀ ಲೈಬ್ರೆರಿ
ನೂರಾರು ಗ್ರಂಥಗಳೊಂದಿಗೆ ದೇವಸ್ಥಾನದ ಕಾರ್ಯಾಲಯ ಸಮೀಪದ ಕೊಠಡಿಯಲ್ಲಿ “ಅನಂತಶ್ರೀ’ ಲೈಬ್ರೆರಿಯನ್ನು ಸಜ್ಜುಗೊಳಿಸಲಾಗಿದೆ. ರಾಮಾಯಣ ಸಹಿತ ಆಧ್ಯಾತ್ಮಿಕ ಗ್ರಂಥಗಳು ಇಲ್ಲಿದ್ದು, ಓದುಗ ಬಳಗವನ್ನು ಹೆಚ್ಚಿಸುವ ಉದ್ದೇಶವನ್ನು ಇರಿಸಿಕೊಳ್ಳಲಾಗಿದೆ. ತಾಲೂಕು ಲೈಬ್ರೆರಿ ಕೌನ್ಸಿಲ್‌ ನೇತೃತ್ವದಲ್ಲಿ ಕಾರ್ಯಾಚರಿಸಲಿರುವ ಲೈಬ್ರೆರಿಯನ್ನು ಮುಂದಿನ ದಿನಗಳಲ್ಲಿ ಉದ್ಯಾನವನಕ್ಕೆ ಸ್ಥಳಾಂತರಿಸಲಾಗುವುದು.

ಜೈವ ಕೃಷಿ
ದೇವಸ್ಥಾನದಲ್ಲಿ ನಡೆಯುವ ಅನ್ನದಾನಕ್ಕೆ ತರಕಾರಿ ಯನ್ನು ಕ್ಷೇತ್ರದ ಭೂಮಿಯಲ್ಲಿ ಬೆಳೆಸಲಾಗಿದೆ. ದೇವಸ್ಥಾನದ ಎರಡು ಎಕರೆ ಸ್ಥಳದಲ್ಲಿ ಜೈವ ಕೃಷಿ ಆರಂಭಿಸಲಾಗಿದೆ. ತೆಂಗು, ಅಡಿಕೆ, ವಿವಿಧ ತರಕಾರಿ ಬೆಳೆಯಲಾಗಿದೆ. ಅನ್ನದಾನಕ್ಕೆ ಅಗತ್ಯವಾದ ತರಕಾರಿಯನ್ನು ಇಲ್ಲೇ ಬೆಳೆಯಲು ಉದ್ದೇಶಿಸಲಾಗಿದೆ. ದಿನಂಪ್ರತಿ 25ರಿಂದ 80 ಕಿಲೋ ತನಕ ಅಕ್ಕಿಯನ್ನು ಅನ್ನದಾನಕ್ಕೆ ಬಳಸಲಾಗುತ್ತದೆ.

Advertisement

ಉದ್ಯಾನವನ
ಕಲ್ಲಿಕೋಟೆಯ ಮಾನಂಚಿರ ಸ್ಕ್ವಾಯರ್‌ ಮಾದರಿಯಲ್ಲಿ 50 ಸೆಂಟ್ಸ್‌ ಸ್ಥಳದಲ್ಲಿ ಉದ್ಯಾನ ವನವನ್ನು ನಿರ್ಮಿಸಲಾಗುವುದು. ದೇವಸ್ಥಾನಕ್ಕೆ ಬರುವ ಮಕ್ಕಳ ಸಹಿತ ಸರ್ವರಿಗೂ ಉಪಯೋಗ ವಾಗುವಂತೆ ಉದ್ಯಾನವನದ ರೂಪುಕಲ್ಪನೆ ಮಾಡಲಾಗಿದೆ. ಉದ್ಯಾನವನದ ಮಧ್ಯದಲ್ಲಿ ಕಾರಂಜಿ ಯನ್ನು ನಿರ್ಮಿಸಲಾಗುವುದು. ಪಾರ್ಕ್‌ ನಿರ್ಮಾಣ ಕ್ಕಾಗಿ ಪೂನಾದ ಕಂಪೆನಿಯನ್ನು ಸಂಪರ್ಕಿಸಲಾಗಿದೆ. ಸುಮಾರು 10 ಲಕ್ಷ ರೂ. ಇದಕ್ಕಾಗಿ ವೆಚ್ಚ ನಿರೀಕ್ಷಿಸಲಾಗಿದೆ.

ಅತಿಥಿ ಮಂದಿರ ನಿರ್ಮಾಣ
ದೂರದಿಂದ ಬರುವ ಯಾತ್ರಾರ್ಥಿಗಳಿಗೆ ಮುಂಜಾನೆಯೇ ದೇವಸ್ಥಾನ ದರ್ಶನಗೈಯ್ಯಲು ಅನುವು ಮಾಡಿಕೊಡುವ ಉದ್ದೇಶದಿಂದ ಅತಿಥಿ ಮಂದಿರವನ್ನು ಕಲ್ಪಿಸಲಾಗುವುದು.
ಸದ್ಯ ಇಲ್ಲಿ ಭಕ್ತರಿಗೆ ಉಳಕೊಳ್ಳಲು ಸೌಕರ್ಯವಿಲ್ಲ. ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆಯ ವರೆಗೆ ಭಕ್ತರು ಇಲ್ಲಿಗೆ ಬರುತ್ತಾರೆ. ರಜಾ ದಿನಗಳಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ. ವಾಸ್ತವ್ಯ ಸೌಕರ್ಯ ಕಲ್ಪಿಸಲು 20 ಸೆಂಟ್ಸ್‌ ಸ್ಥಳದಲ್ಲಿ ಐದು ರೀತಿಯ ಕೊಠಡಿಗಳಿರುವ ಎರಡು ಅಂತಸ್ತಿನ ಅತಿಥಿ ಮಂದಿರವನ್ನು ನಿರ್ಮಿಸಲು ಯೋಜಿಸಲಾಗಿದೆ. ಇದಕ್ಕಾಗಿ ಭಕ್ತರಿಂದಲೇ ನೆರವು ಪಡೆಯಲಾಗುವುದು. ಅತಿಥಿ ಮಂದಿರಕ್ಕೆ ಸುಮಾರು 50 ಲಕ್ಷ ರೂ. ಅಂದಾಜಿಸಲಾಗಿದೆ. ಅತಿಥಿ ಮಂದಿರದ ರೂಪುರೇಷೆ ತಯಾರಿಸಲಾಗಿದೆ.

ಬಬಿಯಾ ಪ್ರತಿಮೆ ಸ್ಥಾಪನೆ
ಪ್ರವಾಸಿಗರನ್ನು ಆಕರ್ಷಿಸುವ ಬಬಿಯಾ ಎನ್ನುವ ಮೊಸಳೆಯ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ ಆಲೋಚಿಸಲಾಗಿದೆ. ದೇವಸ್ಥಾನದ ತಂತ್ರಿಗಳ ಅನುಮತಿಯ ಬಳಿಕ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಔಷಧೀಯ ಸಸ್ಯಗಳು, ವಿವಿಧ ಹೂಗಳ ಗಿಡಗಳನ್ನು ನೆಟ್ಟು ಬೆಳೆಸಲಾಗುವುದು. ಮಕ್ಕಳಿಗೆ ಆಟಿಕೆ ಸಾಮಗ್ರಿಗಳನ್ನು ಸ್ಥಾಪಿಸುವ ಕುರಿತು ಚಿಂತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next