ಪುತ್ತೂರು: ಅಂತರ್ಜಲ ಸಂರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ 2022-23ನೇ ಆರ್ಥಿಕ ಸಾಲಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಎರಡು ವಿಭಾಗದಲ್ಲಿ ದ.ಕ. ಜಿಲ್ಲೆಯಲ್ಲಿ 112 ಕೆರೆಗಳ ಪುನರುತ್ಥಾನದ ಗುರಿ ನಿಗದಿಪಡಿಸಲಾಗಿದೆ.
ಅಮೃತ ಸರೋವರ ವಿಭಾಗದಡಿ ಕೆರೆ ನಿರ್ಮಾಣ, ಅಭಿವೃದ್ಧಿ ಹಾಗೂ ಸಾವಿರ ಕೆರೆಗಳ ಅಭಿವೃದ್ಧಿ ವಿಭಾಗದ ಅಡಿಯಲ್ಲಿ ಅಭಿವೃದ್ಧಿಗೆ ಗುರಿ ನೀಡಲಾಗಿದೆ. ತಾ.ಪಂ. ಮೂಲಕ ಸಮೀಕ್ಷೆ ನಡೆಸಿ ಆಯಾ ಗ್ರಾಮ ಪಂಚಾಯತ್‌ಗಳಿಗೆ ಗುರಿ ವಿಂಗಡಿಸಲಾಗಿದೆ.
ಸಾವಿರ ಕೆರೆಗಳ ಅಭಿವೃದ್ಧಿ ವಿಭಾಗದಡಿ ಸಮಗ್ರ ಕೆರೆ ಅಭಿವೃದ್ಧಿಯ ವೆಚ್ಚವನ್ನು 15.50 ಲಕ್ಷ ರೂ. ಯಿಂದ 19.90 ಲಕ್ಷ ರೂ.ಗೆ ಏರಿಸಲಾಗಿದೆ. ಅಮೃತ ಸರೋವರ ವಿಭಾಗದಲ್ಲಿ ಹೊಸ ಕೆರೆ ನಿರ್ಮಾಣ, ಪುನರುತ್ಥಾನ ಎರಡಕ್ಕೂ ಅವಕಾಶ ಇದ್ದು ಇಲ್ಲಿ ವೆಚ್ಚ ಮಿತಿ ನಿಗದಿಪಡಿಸಿಲ್ಲ. ಈಗಾಗಲೇ 35 ಲಕ್ಷ ರೂ. ಕ್ರಿಯಾ ಯೋಜನೆ ಕೂಡ ಸಲ್ಲಿಕೆ ಆಗಿದೆ. ಬೇರೆ-ಬೇರೆ ಸಂಘ ಸಂಸ್ಥೆ, ಯೋಜನೆಗಳ ಸಹಯೋಗ ಪಡೆದು ಕಾಮಗಾರಿ ಅನುಷ್ಠಾನಕ್ಕೆ ಸೂಚಿಸಲಾಗಿದೆ. ಕೆರೆ ಅಳತೆ, ಉದ್ದ- ಅಗಲ, ಹೊಸ ಕೆರೆ ಅಥವಾ ಹಳೆ ಕೆರೆ, ಕೆರೆ ಸುತ್ತ ಸೌಂದರ್ಯ ವೃದ್ಧಿ ಇತ್ಯಾದಿ ಮಾಪನ ದಲ್ಲಿ ಪಾವತಿ ಮೊತ್ತ ನಿಗದಿಯಾಗುತ್ತದೆ. ಹೊಸ ಕೆರೆ ಹಾಗೂ ಹಳೆ ಕೆರೆ ಪುನುರುತ್ಥಾನ ಈ ಎರಡು ಕಾಮಗಾರಿಯ ಮೌಲ್ಯ ಮಾಪನದ ಬಳಿಕವಷ್ಟೇ ಮೊತ್ತ ಪಾವತಿಸಲಾಗುತ್ತದೆ.
ನಮ್ಮ ಹೊಲ ನಮ್ಮ ರಸ್ತೆ ವಿಭಾಗದ ಅಡಿಯಲ್ಲಿ ಗ್ರಾಮಕ್ಕೊಂದರಂತೆ 1 ಕಿ.ಮೀ. ರಸ್ತೆ ನಿರ್ಮಿಸಲು ಅವಕಾಶ ನೀಡಲಾಗಿದೆ. ಎನ್‌ಆರ್‌ಎಲ್‌ಎಂ ವರ್ಕ್ ಶೆಡ್ ವಿಭಾಗದ ಅಡಿಯಲ್ಲಿ ಸಂಜೀವಿನಿ ಕಟ್ಟಡ ನಿರ್ಮಿಸಬಹುದಾಗಿದೆ. ಸ್ವ-ಸಹಾಯ ಸಂಘದ ಮಹಿಳೆಯರನ್ನು ಸೇರಿಸಿಕೊಂಡು ನರ್ಸರಿ ನಿರ್ಮಿಸಲು ಅನುಮತಿ ನೀಡಲಾಗಿದೆ. 200ಕ್ಕಿಂತ ಅಧಿಕ ಕಾಮಗಾರಿಗಳನ್ನು ನಡೆಸಲು ಅವಕಾಶವಿದ್ದು, ಈ ಬಾರಿ ಇನ್ನಷ್ಟು ಕಾಮಗಾರಿ ಸೇರಿಸಲಾಗಿದೆ. ಶಾಲೆಯ ಮೈದಾನ, ಮಳೆ ನೀರು ಕೊಯ್ಲು, ಆವರಣ ಗೋಡೆ, ಶಾಲೆ ಅಡುಗೆ ಕೋಣೆ, ಶೌಚಾಲಯ, ಅಕ್ಷರ ಕೈತೋಟ ಮುಂತಾದ ಕಾಮಗಾರಿಗಳನ್ನು ಶಾಲಾ ಸಮಗ್ರ ಅಭಿವೃದ್ಧಿ ವಿಭಾಗದ ಅಡಿಯಲ್ಲಿ ನಡೆಸಲು ಸೂಚಿಸಲಾಗಿದೆ. ಗ್ರಾಮ ಪಂಚಾಯತ್‌ಗೊಂದು ಕ್ರೀಡಾಂಗಣ ವಿಭಾಗದಲ್ಲಿ ಕಬಡ್ಡಿ, ಕೊಕ್ಕೊ, ವಾಲಿಬಾಲ್, ಬಾಸ್ಕೆಟ್‌ಬಾಲ್ ಅಂಕಣ, ರನ್ನಿಂಗ್ ಟ್ರ್ಯಾಕ್ ನಿರ್ಮಿಸಲು ಅವಕಾಶವಿದೆ.
ಘಟಕ ವೆಚ್ಚ ಹೆಚ್ಚಳ
ಸಮುದಾಯ ಕಾಮಗಾರಿಗಳ ಘಟಕ ವೆಚ್ಚವನ್ನು ಹೆಚ್ಚಿಸಲಾಗಿದೆ. ಈ ಆರ್ಥಿಕ ವರ್ಷದಲ್ಲಿ ಆರಂಭಿಸುವ ಕಾಮಗಾರಿಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ. ಉದಾಹರಣೆಗೆ ಭಾರತ್ ನಿರ್ಮಾಣ್ ಸೇವಾ ಕೇಂದ್ರದ ಘಟಕ ವೆಚ್ಚವನ್ನು 28.60 ಲಕ್ಷ ರೂ.ಯಿಂದ 35.50 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. 36 ಸಮುದಾಯ ಕಾಮಗಾರಿಗಳ ಘಟಕ ವೆಚ್ಚ ಪರಿಷ್ಕರಿಸಿದ್ದು, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಕೂಲಿ ಮೊತ್ತ ಏರಿಕೆ
ಕಳೆದ ವರ್ಷ ನರೇಗಾ ಯೋಜನೆಯಲ್ಲಿ ಕೂಲಿ ಮೊತ್ತ 289 ರೂ. ನಿಗದಿ ಮಾಡಲಾಗಿದ್ದರೆ, ಈ ಬಾರಿ ಅದನ್ನು 309 ರೂ.ಗಳಿಗೆ ಹೆಚ್ಚಿಸಲಾಗಿದೆ. ವರ್ಷವೊಂದರಲ್ಲಿ ಕುಟುಂಬಕ್ಕೆ ಗರಿಷ್ಠ 100 ಮಾನವ ದಿನಗಳನ್ನು ನೀಡಲಾಗಿದೆ. 2.5 ಎಕ್ರೆ ಮಿತಿಯ ಜಮೀನು ಹೊಂದಿರುವ ಅತೀ ಸಣ್ಣ ರೈತರು ಮತ್ತು 5 ಎಕ್ರೆ ಮಿತಿಯೊಳಗೆ ಜಮೀನು ಹೊಂದಿರುವ ಸಣ್ಣ ರೈತರು ಯೋಜನೆಯ ಫಲಾನುಭವಿಗಳಾಗಲು ಅರ್ಹರು. -ನವೀನ್ ಕುಮಾರ್ ಭಂಡಾರಿ ಇಒ, ತಾ.ಪಂ. ಪುತ್ತೂರು ವಿಶೇಷ ವರದಿ