Advertisement

ಸೊರ್ಕಳ ಕೆರೆಗೆ ಬೇಕಿದೆ ಸೂಕ್ತ ಕಾಯಕಲ್ಪ

07:50 PM Jan 10, 2019 | Team Udayavani |

ಶಿರ್ವ: ದಶಕಗಳ ಹಿಂದೆ ಶಿರ್ವ, ಕುತ್ಯಾರು ಮತ್ತು ಪಿಲಾರು ಗ್ರಾಮಗಳ ಕೃಷಿಕರ ಕೃಷಿ ಚಟುವಟಿಕೆಗಳಿಗೆ ಜೀವನಾಡಿಯಾದ ಪುರಾತನ ಶಿರ್ವ ಸೊರ್ಕಳ ಕೆರೆಯು ಹೂಳು ತುಂಬಿ ನಿರ್ವಹಣೆಯಿಲ್ಲದೆ ಸೊರಗಿದೆ. ಕುತ್ಯಾರು, ಶಿರ್ವ ಹಾಗೂ ಪಿಲಾರು ಗ್ರಾಮ ವ್ಯಾಪ್ತಿಯಲ್ಲಿರುವ ಸುಮಾರು10 ಎಕ್ರೆ ಪ್ರದೇಶದಲ್ಲಿ ಸೊರ್ಕಳ ಕರೆ ಹರಡಿದೆ. ಇದರಲ್ಲಿ 7.55 ಎಕ್ರೆ ಪ್ರದೇಶವು ಕುತ್ಯಾರು ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಬರುತ್ತದೆ.

Advertisement

ನಿರ್ವಹಣೆಯಿಲ್ಲದ ತೋಡುಗಳು
ರೈತರು ಭತ್ತದ ಬೇಸಾಯ ಮಾಡುತ್ತಿದ್ದ ಸಂದರ್ಭ ತೋಡುಗಳ ಕಸಕಡ್ಡಿ ತೆಗೆದು ನಿರ್ವಹಣೆ ಮಾಡುತ್ತಿದ್ದರು. ಇತ್ತೀಚೆಗೆ ಕೃಷಿ ಚಟುವಟಿಕೆ ಸ್ಥಗಿತಗೊಂಡಿರುವುದರಿಂದ ಈ ಬಗ್ಗೆ ಗಮನಹರಿಸುತ್ತಿಲ್ಲ. ಇದರ ಪರಿಣಾಮ ಮಳೆಗಾಲದಲ್ಲಿ ಸೊರ್ಕಳ ಕೆರೆಗೆ ಹೂಳು, ಮಣ್ಣು ಕಸಕಡ್ಡಿ ತುಂಬಿ ತೋಡಿನಲ್ಲಿ ಬಾರದೆ ಕೃಷಿಭೂಮಿಯಲ್ಲಿ ಹರಿದು ಕೆರೆಗೆ ಸೇರುತ್ತಿದೆ. ಕೆರೆಯಲ್ಲೂ ಹೂಳು ತುಂಬಿ ದಿಬ್ಬವುಂಟಾಗಿ ಕೆರೆಯ ವಿಸ್ತೀರ್ಣ ಕಡಿಮೆಯಾಗುತ್ತಾ ಬಂದಿದೆ.

ಕಿಂಡಿ ಆಣೆಕಟ್ಟು ದುಃಸ್ಥಿತಿ


ಕೆರೆಯಿಂದ ಹರಿದು ಹೊರಹೋಗುವ ನೀರಿಗೆ ದಶಕಗಳ ಹಿಂದಿನಿಂದಲೂ ಪ್ರತಿ ವರ್ಷ ಕಾವೇರಿ ಸಂಕ್ರಮಣದಂದು ಗ್ರಾಮಸ್ಥರು ಒಟ್ಟು ಸೇರಿ ಅಣೆಕಟ್ಟು ಕಟ್ಟುತ್ತಿದ್ದರು. ಕುತ್ಯಾರು, ಪುನ್ಕೆಟ್ಟು ಪ್ರದೇಶದ ರೈತರು ಸುಗ್ಗಿ,ಕೊಳಕೆ ಭತ್ತದ ಬೇಸಾಯದೊಂದಿಗೆ ವಾಣಿಜ್ಯ ಬೆಳೆಗಳಿಗೆ ನೀರುಣಿಸುತ್ತಿದ್ದರು. ಅಂತರ್ಜಲ ಮಟ್ಟವೂ ಏರಿಕೆಯಾಗಿ ನೀರಿನ ಅಭಾವವಿರಲಿಲ್ಲ. ಈಗ ಬಹುತೇಕ ಕೃಷಿ ಭೂಮಿ ಹಡಿಲು ಬಿದ್ದಿದೆ. ಅಣೆಕಟ್ಟಿನ ನಿರ್ವಹಣೆಯಿಲ್ಲದೆ ಕೃಷಿಯೂ ಇಲ್ಲ –
ನೀರೂ ಇಲ್ಲ ಎಂಬಂತಾಗಿದೆ. ಜತೆಗೆ ಕುಡಿಯುವ ನೀರಿಗೂ ತತ್ವಾರದ ಭೀತಿ ಕಾಡಿದೆ.

ಮಾದರಿ ಕೆರೆ ಆಗಲಿದೆಯೇ?
ಜಿ.ಪಂ.ನ 11ನೇ ಹಣಕಾಸು ಅನುದಾನ ದಿಂದ 2003-04ರಲ್ಲಿ ಮಂಜೂರಾದ ಹಣದಿಂದ 2005-06ರಲ್ಲಿ ಒಮ್ಮೆ ಕುತ್ಯಾರು ಗ್ರಾ.ಪಂ. ವತಿಯಿಂದ ರೂ. 3.6 ಲ.ರೂ. ವೆಚ್ಚದಲ್ಲಿ ಹೂಳೆತ್ತಲಾಗಿತ್ತು. ಆ ಸಮಯ ದಲ್ಲಿ ಅಸಮರ್ಪಕ ಹೂಳೆತ್ತುವಿಕೆ ಕಾಮಗಾರಿಯಿಂದಾಗಿ ಪರಿಸರದ ಕೃಷಿ ಭೂಮಿಗೆ ಮಣ್ಣು ಹರಿದು ರೈತರಿಂದ ವಿರೋಧ ವ್ಯಕ್ತವಾಗಿತ್ತು. ಜಿಲ್ಲಾಡಳಿತ ಸೊರ್ಕಳ ಕೆರೆಯ ಸಮಗ್ರ ಅಭಿವೃದ್ಧಿಗಾಗಿ ಮುತುವರ್ಜಿ ವಹಿಸಿ ಸೂಕ್ತ ಅನುದಾನ ನೀಡಿ ಕೆರೆಯನ್ನು ಪುನರುತ್ಥಾನಗೊಳಿಸಿದಲ್ಲಿ ಮುಂಬರುವ ದಿನಗಳಲ್ಲಿ ಪಿಲಾರು, ಶಿರ್ವ ಮತ್ತು ಕುತ್ಯಾರು ಗ್ರಾಮಗಳಿಗೆ ನೀರುಣಿಸುವ ಮೂಲಕ ಇದೊಂದು ಮಾದರಿ ಜಲಪೂರಣ ಕೆರೆಯಾಗಿ ಪರಿಣಮಿಸಬಹುದು.

ಪ್ರವಾಸಿ ತಾಣವಾಗಲು ಅವಕಾಶ
ಪ್ರಕೃತಿ ಸಹಜ ಸೌಂದರ್ಯದಿಂದ ಕಂಗೊಳಿಸುತ್ತಿರುವ ಸುಮಾರು 10 ಎಕ್ರೆ ಪ್ರದೇಶದ ಕೆರೆಯನ್ನು ಹೂಳು ತೆಗೆದು ಪ್ರವಾಸಿತಾಣವಾಗಿ ಅಭಿವೃದ್ಧಿ ಪಡಿಸಬೇಕಾ ಗಿದೆ. ಒಂದು ಬದಿಯಲ್ಲಿ ಬಂಡೆಕಲ್ಲು ಇರುವ ಕೆರೆ ವರ್ಷವಿಡೀ ನೀರಿನಿಂದ ತುಂಬುವಂತೆ ಮಾಡಿ ಬೋಟಿಂಗ್‌ ವ್ಯವಸ್ಥೆ ಮತ್ತು ಕೆರೆಯ ಸುತ್ತ ವಾಯು ವಿಹಾರಕ್ಕಾಗಿ ವ್ಯವಸ್ಥೆ ಕಲ್ಪಿಸಬಹುದು.

Advertisement

ಕೆರೆ ಹೊಳೆತ್ತಿ
ಜಿಲ್ಲಾಡಳಿತ ಮುತುವರ್ಜಿ ವಹಿಸಿಕೊಂಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸೊರ್ಕಳ ಕೆರೆಯನ್ನು ಅಭಿವೃದ್ಧಿ ಪಡಿಸಿದಲ್ಲಿ 3 ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಬಹುದು.
– ವಿಲ್ಸನ್‌ ರೋಡ್ರಿಗಸ್‌, ಶಿರ್ವ ಜಿ.ಪಂ. ಸದಸ್ಯ

ಜಿಲ್ಲಾಡಳಿತಕ್ಕೆ ಪ್ರಸ್ತಾವನೆ 
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕುತ್ಯಾರು ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಗಾಗಿ ಸೊರ್ಕಳ ಕೆರೆ ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತಕ್ಕೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೆರೆ ಅಭಿವೃದ್ಧಿಪಡಿಸಿ ಕುತ್ಯಾರು , ಶಿರ್ವ ಗ್ರಾಮಗಳ ನೀರಿನ ಸಮಸ್ಯೆಗೆ ತುರ್ತು ಕ್ರಮ ಕೈಗೊಳ್ಳಬೇಕಿದೆ.
– ಧೀರಜ್‌ ಶೆಟ್ಟಿ, ಅಧ್ಯಕ್ಷರು ಕುತ್ಯಾರು ಗ್ರಾಮ ಪಂಚಾಯತ್‌.

— ಸತೀಶ್ಚಂದ್ರ ಶೆಟ್ಟಿ, ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next