ನಂಜನಗೂಡು: ಅನೇಕ ವರ್ಷಗಳಿಂದ ಹೂಳು ತುಂಬಿ ನೀರು ಕಾಣದೇ ತಾಲೂಕಿನ ಅತಿ ದೊಡ್ಡಕರೆಗಳಲ್ಲಿ ತಾನೂ ಒಂದು ಎನಿಸಿದ್ದ ಹದಿನಾರಿನ ಕೆರೆ ಮಳೆ ನೀರಿನಿಂದ ಈಗ ತುಂಬಿ ತುಳುಕಲಾರಂಭಿಸಿ ಕೋಡಿ ಬಿದ್ದಿದೆ.
ಸುಮಾರು 198 ಎಕರೆ ವಿಸ್ತೀರ್ಣದ ಈ ಕೆರೆ ಪೂರ್ಣವಾಗಿ ಹೂಳು ಹಾಗೂ ಒತ್ತು¤ವರಿಯಿಂದಾಗಿ ಸಾಮಾನ್ಯ ಹೊಂಡದ ರೂಪ ತಳೆದಿತ್ತು. ಗ್ರಾಮದವರೇ ಆದ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ತಮ್ಮೂರ ಕೆರೆ ಕುರಿತು ವಿಶೇಷ ಕಾಳಜಿ ವಹಿಸಿದ್ದರ ಫಲವಾಗಿ ಇಂದು ಕೆರೆ ಭರ್ತಿಯಾಗುವಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಹೋಬಳಿಗೆ ಸೇರುವ ಈ ಕೆರೆಯನ್ನು ಸುಮಾರು 1 ಕೋಟಿ ರೂ ವೆಚ್ಚದಲ್ಲಿ ಆಧುನೀಕರಣ ಮಾಡಿ ಒತ್ತುವರಿ ಜಮೀನನ್ನು ಬಿಡಿಸಿ ಹೂಳು ತೆಗೆಸಲಾಗಿತ್ತು. ಹದಿನಾರಿನ ಪಾಳೆಗಾರರ ಕಾಲದಲ್ಲಿ ನಿರ್ಮಾಣವಾದ ಪುರಾತನ ಕೆರೆಯಲ್ಲಿ ಈಗ ಸುಮಾರು 0.55.3 ಎಂಸಿಎಫ್ಟಿ ನೀರು ಶೇಖರಣೆಯಾಗಿದೆ. ಹೀಗಾಗಿ ಕೆರೆ ತುಂಬದ ದಿನಗಳನ್ನೇ ಕಂಡಿದ್ದ ಹದಿನಾರಿನ ಜನತೆಗೆ ಸಂತಸವನ್ನುಂಟುಮಾಡಿದೆ.
ಮೀನು ಸಾಕಾಣಿಕೆ: ಕೆರೆಯಲ್ಲಿ ಸಾಕಷ್ಟು ನೀರು ಇರುವುದರಿಂದ ಸುಮಾರು 5 ಲಕ್ಷ ಮೀನಿನ ಮರಿಗಳನ್ನು ಬಿಡಲು ಸಿದ್ಧತೆ ನಡೆಸಲಾಗಿದೆ. ಹೀಗಾಗಿ ತಾಲೂಕಿನ ಪ್ರಮುಖ ಮೀನು ಉತ್ಪಾದನಾ ಕೇಂದ್ರವಾಗಿಯೂ ಹೊರಹೊಮ್ಮಲಿದೆ.
ಒಟ್ಟಾರೆ ಹದಿನಾರು, ಕೆರೆ ತುಂಬಿದ್ದರ ಫಲವಾಗಿ ಈ ಭಾಗದ ಮೂಡಳ್ಳಿ, ಮಲ್ಲರಾಜಯ್ಯನ ಹುಂಡಿ, ಹದಿನಾರು ಮೋಳೆ, ಮಾದಯ್ಯನ ಹುಂಡಿ, ಆಲತ್ತೂರು ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳ ರೈತರ ಜಮೀನುಗಳ ಕೊಳವೆ ಬಾವಿಗಳಿಗೆ ಅಂತರ್ಜಲ ಹೆಚ್ಚಾಗಿ ರೈತರ ಬದುಕು ಹಸನಾಗಲಿದೆ ಎಂದು ಜಿಪಂ ಮಾಜಿ ಸದಸ್ಯ ನಂಜಪ್ಪ ಅಭಿಪ್ರಾಯಪಟ್ಟಿದ್ದಾರೆ.
ಪಕ್ಷಿಧಾಮ ನಿರ್ಮಾಣ
ಪ್ರತಿ ವರ್ಷ ಈ ಕೆರೆಯನ್ನು ಆಶ್ರಯಿಸಿ ತಮ್ಮ ವಂಶಾಭಿವೃದ್ಧಿ ಮಾಡಿಕೊಳ್ಳಲು ದೇಶ-ವಿದೇಶಗಳಿಂದ ಆಗಮಿಸುವ ಪಕ್ಷಿಗಳಿಗಾಗಿ ಪಕ್ಷಿಧಾಮವನ್ನೂ ನಿರ್ಮಿಸಲಾಗಿದೆ. ಸದ್ಯದಲ್ಲೇ ಪಕ್ಷಿಗಳ ಆಗಮನವಾಗಲಿದೆ ಎಂದು ಕೆರೆಯ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಎಂಜನಿಯರ್ ಪ್ರಕಾಶ ತಿಳಿಸಿದ್ದಾರೆ.