ಶಿರಸಿ: ಮನುವಿಕಾಸ ಸಂಸ್ಥೆ ಮತ್ತು ಎಚ್ ಡಿಬಿ ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್ ಸಹಕಾರದಿಂದ ಅಂಡಗಿಯಲ್ಲಿ ರೈತರ ಸಹಭಾಗಿತ್ವದಲ್ಲಿ ಕೆಲಸಿಕಟ್ಟಿ ಕೆರೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಯಿತು.
ಕೆರೆ ಕೆಲಸದ ಭೂಮಿಪೂಜೆ ನೆರವೇರಿಸಿದ ಮನುವಿಕಾಸ ಸಂಸ್ಥೆ ನಿರ್ದೇಶಕ ಗಣಪತಿ ಭಟ್ಟ, ಶಿರಸಿ ತಾಲೂಕಿನಲ್ಲಿ ಕಳೆದ ವರ್ಷ 23 ದೊಡ್ಡ ಕೆರೆಗಳ ಹೂಳು ತೆಗೆದು ಅಭಿವೃದ್ಧಿ ಪಡಿಸಲಾಗಿದೆ. ಈ ವರ್ಷ ಈಗಾಗಲೇ ತಾಲೂಕಿನ ಭಾಶಿ ಪಂಚಾಯತ ವ್ಯಾಪ್ತಿಯ ಕಲಕೊಪ್ಪ ಮತ್ತು ಯಡಗೊಪ್ಪ ಗ್ರಾಮಗಳಲ್ಲಿ ಎರಡು ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮನುವಿಕಾಸ ಸಂಸ್ಥೆ ಈ ವರ್ಷ ತಾಲೂಕಿನ ಎಲ್ಲ ದೊಡ್ಡ ಕೆರೆಗಳನ್ನು ಅಭಿವೃದ್ಧಿಪಡಿಸಲು ಯೋಜಿಸಿದೆ ಎಂದರು.
ತಾಲೂಕಿನ ಪೂರ್ವಭಾಗದಲ್ಲಿ ಒಂದು ಕಡೆ ಅಂತರ್ಜಲ ಮಟ್ಟ ಕಡಿಮೆ ಆಗುತ್ತಿದ್ದು ಇನ್ನೊಂದು ಕಡೆ ಕೆರೆಗಳಲ್ಲಿ ಹೂಳು ತುಂಬಿ ನೀರಿನ ಸಂಗ್ರಹ ಕಡಿಮೆ ಆಗುತ್ತಿದೆ. ಮನುವಿಕಾಸ ಸಂಸ್ಥೆ ಇದನ್ನು ಗಮನಿಸಿ ಕಳೆದೆರಡು ವರ್ಷಗಳಿಂದ ಕೆರೆಗಳ ಹೂಳನ್ನು ರೈತರ ಸಹಭಾಗಿತ್ವದಲ್ಲಿ ಎತ್ತಿ ಹೊಲಗಳಿಗೆ ಸಾಗಿಸಲಾಗುತ್ತಿದೆ. ಅನೇಕ ಕೆರೆಗಳಿಗೆ ಸರಕಾರ ಏತ ನೀರಾವರಿ ಮೂಲಕ ತುಂಬಿಸುವ ಯೋಜನೆ ಹಮ್ಮಿಕೊಂಡಿದೆ. ಈ ವರ್ಷ ತಾಲೂಕಿನ ನಾಲ್ಕು ಎಕರೆಗಿಂತ ವಿಸ್ತಾರವುಳ್ಳ ಎಲ್ಲ ಕೆರೆಗಳನ್ನು ರೈತರು ಸಹಭಾಗಿತ್ವ ನೀಡಿದಲ್ಲಿ ಮತ್ತು ಸಂಬಂಧಪಟ್ಟ ಇಲಾಖೆಗಳು ಅನುಮತಿ ನೀಡಿದಲ್ಲಿ ಹೂಳೆತ್ತಿ ಅಭಿವೃದ್ಧಿಪಡಿಸಲು ಸಿದ್ಧವಿದೆ. ಈಗಾಗಲೇ ಬಿಳೂರು, ಗೊಣಗಟ್ಟ, ಸಂತೊಳ್ಳಿ, ಬ್ಯಾಗದ್ದೆ, ಭಾಶಿ ಮತ್ತು ಕಂತ್ರಾಜಿ ಕೆರೆಗಳ ಹೂಳೆತ್ತಲು ರೈತರು ಸಹಭಾಗಿತ್ವ ನೀಡಲು ಮುಂದೆ ಬಂದಿದ್ದಾರೆ ಎಂದರು.
ಗ್ರಾಪಂ ಸದಸ್ಯ ಮಂಜುನಾಥ ನಾಯ್ಕ, ನಮ್ಮ ಊರಿನಲ್ಲಿ ಮನುವಿಕಾಸ ಸಂಸ್ಥೆ ಕಳೆದ ವರ್ಷ ಎರಡು ಕೆರೆಗಳನ್ನು ಅಭಿವೃದ್ಧಿಪಡಿಸಿದ್ದು ರೈತರು ಹೂಳನ್ನು ತಮ್ಮ ಹೊಲಗಳಿಗೆ ಹಾಕಿದ್ದರಿಂದ ಉತ್ತಮ ಫಸಲು ಪಡೆದಿದ್ದಾರೆ. ನೀರಿನ ಸಂಗ್ರಹದ ಪ್ರಮಾಣ ಕೂಡ ಕೆರೆಗಳಲ್ಲಿ ಹೆಚ್ಚಿದ್ದು ಕೊಳವೆ ಬಾವಿಗಳಲ್ಲೂ ನೀರಿನ ಪ್ರಮಾಣ ಹೆಚ್ಚಾಗಿದೆ ಎಂದರು.
ಸ್ಥಳೀಯ ಉದ್ಯಮಿಗಳೂ ಮತ್ತು ಸಾಮಾಜಿಕ ಕಾರ್ಯಕರ್ತ ಚಂದ್ರು ನಾಯ್ಕ, ಕಳೆದೆರಡು ವರ್ಷಗಳಿಂದ ಮನುವಿಕಾಸ ಬನವಾಸಿ ಹೋಬಳಿಯಲ್ಲಿ ಅನೇಕ ಕೆರೆಗಳ ಹೂಳೆತ್ತಿದ್ದು ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ನಮ್ಮ ಊರಿನಲ್ಲಿ ಎರಡು ಕೆರೆಗಳನ್ನು ಹೂಳೆತ್ತಿದ್ದ ಮನುವಿಕಾಸ ಸಂಸ್ಥೆಗೆ ಈ ವರ್ಷವೂ ಒಂದು ಕೆರೆಯನ್ನು ಹೂಳೆತ್ತಲು ಮನವಿ ಮಾಡಿದಾಗ ಒಪ್ಪಿ ಕೆಲಸ ಪ್ರಾರಂಭಿಸಿರುವುದು ಸಂತಸ ತಂದಿದೆ ಎಂದರು.
ಮನುವಿಕಾಸ ಸಂಸ್ಥೆ ಶಿರಸಿ ತಾಕೂಕಿನಲ್ಲಷ್ಟೇ ಅಲ್ಲದೇ ಪಕ್ಕದ ಸೊರಬ, ಹಾನಗಲ್, ಮುಂಡಗೋಡ ಹಾಗೂ ಕಲಘಟಗಿಗಳಲ್ಲೂ ಕೆರೆ ಅಭಿವೃದ್ಧಿಯಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ಮನುವಿಕಾಸ ಸಂಸ್ಥೆ ಸಂಯೋಜಕ ಅಶ್ವತ್ಥ ನಾಯ್ಕ ಸ್ವಾಗತಿಸಿದರು. ಸುಭ್ರಮಣ್ಯ ಹೆಗಡೆ ವಂದಿಸಿದರು.