Advertisement

ಆರ್ಟ್‌ ಆಫ್‌ ಲಿವಿಂಗ್‌ನಿಂದ ಕೆರೆ ಅಭಿವೃದ್ಧಿ: ಗುರೂಜಿ

03:24 PM Aug 03, 2017 | |

ಚಿಕ್ಕಮಗಳೂರು: ಆರ್ಟ್‌ ಆಫ್‌ ಲಿವಿಂಗ್‌ನಿಂದ ರಾಜ್ಯಾದ್ಯಂತ 13,170 ಕೆರೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಲಾಗಿದೆ ಎಂದು ಆರ್ಟ್‌ ಆಫ್‌ ಲಿವಿಂಗ್‌ನ ಸಂಸ್ಥಾಪಕರಾದ ಶ್ರೀ ರವಿಶಂಕರ ಗುರೂಜಿ ಹೇಳಿದರು.

Advertisement

ಆರ್ಟ್‌ ಆಫ್‌ ಲೀವಿಂಗ್‌ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯತ್‌ ಸಹಯೋಗದಲ್ಲಿ ನಡೆಯುತ್ತಿರುವ ವೇದಾವತಿ ನದಿ ಪುನಶ್ಚೇತನ ಕಾಮಗಾರಿ ವೀಕ್ಷಣೆಗೆ ಬುಧವಾರ ಬೆಳಿಗ್ಗೆ ನಗರಕ್ಕೆ ಆಗಮಿಸಿದ ರವಿಶಂಕರ ಗುರೂಜಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಅವರು ನಂತರ ವೇದಾವತಿ ನದಿ ಪಾತ್ರದ ಗ್ರಾಮಗಳಾದ ಕಳಸಾಪುರ, ಸಿಂದಿಗೆರೆ ಹಾಗೂ ಹುಲಿಕೆರೆ ಗ್ರಾಮಗಳಿಗೆ ತೆರಳಿ ಹಲವು ಕಾಮಗಾರಿ ವೀಕ್ಷಿಸಿದರು.

ನೀರಿನ ಮೂಲಗಳನ್ನು ರಕ್ಷಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಂತರ್ಜಲ ದೊರಕುವುದೇ ಕಠಿಣವಾಗುತ್ತದೆ. ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅಂತರ್ಜಲ ರಕ್ಷಣೆಗೆ ಪ್ರಥಮ ಆದ್ಯತೆ ನೀಡಬೇಕಿದೆ. ಹೀಗಾಗಿ ನದಿ ಜೋಡಣೆ ಕಾರ್ಯ ಕೈಗೆತ್ತಿಕೊಳ್ಳುವ ಮೂಲಕ ದೇಶದ ನದಿಗಳನ್ನು ರಕ್ಷಿಸಬೇಕಾಗಿದೆ ಎಂದರು. 

ಒಂದು ನದಿಯನ್ನು ಕಳೆದುಕೊಂಡರೆ ಜೀವನ ಸೂತ್ರವೇ ಹಾಳಾಗುತ್ತದೆ. ಸಣ್ಣ ನೀರಿನ ಮೂಲಗಳು ಸಹ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಮಳೆ ಇಲ್ಲದ ಕಾರಣ ಸಂಸ್ಥೆ ಕೈಗೊಂಡಿರುವ ಕಾರ್ಯಗಳ ಫಲಿತಾಂಶ ಸ್ಪಷ್ಟವಾಗಿ  ಗೋಚರಿಸುತ್ತಿಲ್ಲ. ಮಳೆ ಬಂದರೆ ಈ ಫಲಿತಾಂಶ ಇನ್ನಷ್ಟು ಸ್ಪಷ್ಟವಾಗಿ ಕಾಣುತ್ತದೆ. ದೇಶದ ಒಟ್ಟು 30 ನದಿಗಳನ್ನು ಪುನಶ್ಚೇತನಗೊಳಿಸಲು ಸಂಸ್ಥೆ ಮುಂದಾಗಿದೆ ಎಂದರು.

ಮಹಾರಾಷ್ಟ್ರದಲ್ಲಿ 27 ನದಿಗಳನ್ನು ಪುನಶ್ಚೇತನಗೊಳಿಸಲಾಗುತ್ತಿದ್ದರೆ ಕರ್ನಾಟಕದಲ್ಲಿ ಉತ್ತರ ಪಿನಾಕಿನಿ, ಕುಮುದ್ವತಿ ಮತ್ತು ವೇದಾವತಿ ಹಾಗೂ
ಕೋಲಾರದಲ್ಲೂ ಪಲ್ಲಾರ್‌ ನದಿ ಪುನಶ್ಚೇತನಗೊಳಿಸಲು ಕಾರ್ಯಾರಂಭ ಮಾಡಲಾಗಿದೆ ಎಂದರು. ನದಿ ಪುನಶ್ಚೇತನ ಯೋಜನೆ ಅಡಿ ಸಿಂದಿಗೆರೆ ಗ್ರಾಮದ 25 ಅಡಿ ಆಳದ ನೀರಿನ ಕಟ್ಟೆಯಲ್ಲಿ ಕೈಗೊಂಡ ಕಾಮಗಾರಿಯಿಂದ ಮಳೆಯಾಗದಿದ್ದರೂ ನೀರಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದ ರವಿಶಂಕರ್‌ ಗುರೂಜಿ, ನದಿ ಪುನಶ್ಚೇತನ ಕಾರ್ಯಕ್ರಮದಲ್ಲಿ ಸಕ್ರಿಯವಾಗಿರುವ ಸಂಸ್ಥೆಯ  ಕಾರ್ಯಕರ್ತರನ್ನು ಮತ್ತಷ್ಟು ಪ್ರೋತ್ಸಾಹಿಸುವುದೆ ತಮ್ಮ ಭೇಟಿಯ ಮುಖ್ಯ ಉದ್ದೇಶ ಎಂದರು.

Advertisement

ಪುನಶ್ಚೇತನ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಬಗ್ಗೆ ವಿವರಣೆ ಪಡೆಯುವ ವೇಳೆ ಬೀರನಹಳ್ಳಿಯ ತಮ್ಮೇಗೌಡ ತಮ್ಮ ಊರಿನಲ್ಲಿ ಕಳೆದ 10 ವರ್ಷಗಳಿಂದ ಬೋರ್‌ವೆಲ್‌ನಲ್ಲಿ ನೀರು ಬರುತ್ತಿರಲಿಲ್ಲ. ಆದರೆ ನದಿ ಪುನಶ್ಚೇತನ ಕಾಮಗಾರಿ ಮೂಲಕ ಒಡ್ಡುಗಳನ್ನು ಕಟ್ಟಿ ಹಾಗೂ ಇಂಗುಗುಂಡಿಗಳನ್ನು ನಿರ್ಮಾಣ ಮಾಡಿದ್ದರಿಂದ ಬೋರ್‌ ವೆಲ್‌ಗ‌ಳಲ್ಲಿ ನೀರು ಬರುತ್ತಿವೆ ಎಂದು ವಿವರಿಸಿದರು. 

ನಂತರ ಗುರೂಜಿ ಮಾತನಾಡಿ ಮೊದಲು 600 ಅಡಿ ಕೊರೆದರೂ ಬೋರ್‌ವೆಲ್‌ಗ‌ಳಲ್ಲಿ ನೀರು ಬರುತ್ತಿರಲಿಲ್ಲ. ಇಂದು ನೀರು ಸಿಗುತ್ತಿದೆ. ಮಳೆ ಚೆನ್ನಾಗಿ ಬಂದರೆ ಪರಿಸ್ಥಿತಿ ಇನ್ನಷ್ಟು ಸುಧಾರಿಸಲಿದೆ. ವೇದಾವತಿ ನದಿ ಹರಿಯುವ ಪಾತ್ರದಲ್ಲಿ ಅತ್ಯಂತ ವೈಜ್ಞಾನಿಕವಾಗಿ ಪುನಶ್ಚೇತನ ಕಾಮಗಾರಿ ಕೈಗೊಂಡಿರುವುದರಿಂದ ಅಂತರ್ಜಲ ಮಟ್ಟ ಸುಧಾರಿಸುತ್ತಿದೆ ಎಂದು ತಿಳಿಸಿದರು. ಅರಣ್ಯ ಇಲಾಖೆ ಬಯಲು ಸೀಮೆಯ ಗುಡ್ಡಗಳಲ್ಲಿ ಅಕೇಶಿಯಾ ಮತ್ತು ನೀಲಗಿರಿ ಗಿಡಗಳನ್ನು ನೆಟ್ಟು ಬೆಳೆಸಿದೆ. ಇದು ಸರಿಯಲ್ಲ. ಈ ಪ್ರದೇಶದಲ್ಲಿ ನೀರಿನ ಸೆಲೆ ಹೆಚ್ಚಿಸುವ ಹಾಗೂ ವಾತಾವರಣಕ್ಕೆ ಪೂರಕವಾದ ಆಲ, ಹತ್ತಿ, ಬೇವು ಈ ರೀತಿಯ ಗಿಡಗಳನ್ನು ನೆಡಬೇಕು. ನೀಲಗಿರಿ ಅಧಿಕ ನೀರನ್ನು ಹೀರುವುದಲ್ಲದೆ, ವಾತಾವರಣಕ್ಕೆ ಪೂರಕವಾಗಿ
ವರ್ತಿಸುವುದಿಲ್ಲ. ಹೀಗಾಗಿ ಗ್ರಾಮಸ್ಥರು ನೀಲಗಿರಿ ನೆಡುವುದನ್ನು ವಿರೋಧಿಸಿ ದೇಶೀಯ ತಳಿಗಳನ್ನು ಬೆಳೆಯಲು ಇಲಾಖೆಗಳ ಮೇಲೆ ಒತ್ತಡ ಹೇರಬೇಕು ಎಂದರು.

ದೇಶೀ ತಳಿಯ ಗಿಡ ಹಾಗೂ ಹಣ್ಣಿನ ಗಿಡ ನೆಟ್ಟರೆ ಪ್ರಾಣಿ, ಪಕ್ಷಿಗಳಿಗೂ ಆಹಾರ ಸಿಗಲಿದೆ. ಅಲ್ಲದೆ ವಾತಾವರಣ ವೂ ಉತ್ತಮವಾಗಲಿದೆ. ನೀಲಗಿರಿ ಮತ್ತು ಅಕೇಶಿಯಾದಿಂದ ಯಾವ ರೀತಿಯ ಸಹಾಯವೂ ಆಗುವುದಿಲ್ಲ. ಇವು ನೀರನ್ನು ಹೀರಿಕೊಳ್ಳುವುದರಿಂದ ಇನ್ನಷ್ಟು ಅಂತರ್ಜಲ ಹಾಳು ಮಾಡುತ್ತದೆ ಎಂದು ಹೇಳಿದರು. ಲಕ್ಕುಮ್ಮನಹಳ್ಳಿ, ಸಿರಿಬಡಿಗೆ, ಬೀರನಹಳ್ಳಿ ಮುಂತಾದ ಕಡೆಗಳಲ್ಲಿ ವೇದಾವತಿ ಪುನಶ್ಚೇತನ
ಕಾಮಗಾರಿಗಳು ಉತ್ತಮ ಫಲಿತಾಂಶ ನೀಡಿರುವುದನ್ನು ಜನ ಸಹ ತಿಳಿಸಿ, ಮಳೆ ಕಳೆದ 10 ವರ್ಷಗಳಿಂದಲೂ ಸರಿಯಾಗಿ ಬರುತ್ತಿಲ್ಲ. ಒಮ್ಮೆ ಉತ್ತಮವಾಗಿ ಮಳೆ ಬಂದರೆ ಮಾಡಿರುವ ಕಾಮಗಾರಿಯ ಫಲ ಅರಿವಾಗುತ್ತದೆ ಎಂದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವು ನದಿಗಳು ಹುಟ್ಟಿ ಹರಿಯುತ್ತವೆ. ಬಯಲು ಸೀಮೆಯಲ್ಲಿ ಹಿಂದೊಮ್ಮೆ ಹರಿದು ನೀರುಣಿಸುತ್ತಿದ್ದ ವೇದಾವತಿ ನದಿ ಇಂದು ಮಂಕಾಗಿದೆ. ಆ ಹಿನ್ನೆಲೆಯಲ್ಲಿ ಪುನಶ್ಚೇತನ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿರುವುದಾಗಿ ತಿಳಿಸಿದ ಗುರೂಜಿ, ಕೊಡಗು ಜಿಲ್ಲೆಯಲ್ಲೂ ವೃಕ್ಷಾರೋಪಣೆ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಕೈಗೊಳ್ಳಲು ಸಂಸ್ಥೆ ನಿರ್ಧರಿಸಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next