Advertisement

ಮೊದಲ ಸಲ ಹಾಡಿದ ಲಹರಿ ವೇಲು

11:04 AM Sep 17, 2018 | |

ಲಹರಿ ವೇಲು ಬೆರಳೆಣಿಕೆ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದು ಗೊತ್ತು. ಆದರೆ, ಹಾಡಿದ್ದು ಗೊತ್ತಾ? ಅವರು ಇದೇ ಮೊದಲ ಸಲ ಹಾಡಿದ್ದಾರೆ. ಹೌದು, “ಇರುವುದೊಂದೇ ಜನ್ಮ ನೀ ಸಹಾಯ ಮಾಡು ತಮ್ಮ’ ಎಂಬ ಹೆಸರಿನ ಆಲ್ಬಂಗೆ  ಧ್ವನಿಯಾಗಿದ್ದಾರೆ. “ಸ್ವಾರ್ಥದಿಂದ ಬದುಕೋದು ಬ್ಯಾಡ ಮನುಸ, ಬದುಕೋದಿಲ್ಲ ನಾವಿಲ್ಲಿ ಕೋಟಿ ವರುಸ..’ ಎಂಬ ಅರ್ಥಪೂರ್ಣ ಹಾಡಿಗೆ ವೇಲು ಮೊದಲ ಸಲ ಹಾಡಿದ್ದಾರೆ.

Advertisement

ಅಂದಹಾಗೆ, ಈ ಹಿಂದೆ “ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ’ ಹಾಡು ಬರೆದಿದ್ದ ನಮ್‌ ರಿಷಿ ಈ ಹಾಡು ಬರೆದಿದ್ದಾರೆ. ಅಭಿಮನ್‌ರಾಯ್‌ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಯು ಟ್ಯೂಬ್‌ನಲ್ಲಿ ಈ ಹಾಡು ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ. ಮೊದಲ ಸಲ ಗಾಯಕರೆನಿಸಿಕೊಂಡಿರುವ ಲಹರಿ ವೇಲು, ಹೇಳುವುದಿಷ್ಟು. “ನಾನು ಗಾಯಕನಲ್ಲ. ಹೊಸ ಪ್ರತಿಭೆಗಳನ್ನು ಪರಿಚಯಿಸುವವನಷ್ಟೇ.

ನಾಲ್ಕು ದಶಕಳಿಂದ ಲಕ್ಷಾಂತರ ಹಾಡುಗಳನ್ನು ಬಿಡುಗಡೆ ಮಾಡಿದ ಹೆಮ್ಮೆ ನನ್ನ ಸಂಸ್ಥೆಯದ್ದು. ಎಲ್ಲೋ ಗೆಳೆಯರ ಜೊತೆಗೆ ಪ್ರವಾಸ ಹೋದ ಖುಷಿಯಲ್ಲಿ ಜಾನಪದ ಗೀತೆಗಳನ್ನು ಗುನುಗುತ್ತಿದ್ದೆ. ಅದು ಬಿಟ್ಟರೆ, ಹಾಡುಗಾರನಲ್ಲ. ಒಳ್ಳೆಯ ಹಾಡು ಗುನುಗುವ ಹವ್ಯಾಸವಿತ್ತು. ನನಗೆ ಬಂಡಾಯ ಸಾಹಿತಿಗಳ ಹಾಡುಗಳೆಂದರೆ ಇಷ್ಟ. ಅವುಗಳನ್ನು ಹೆಚ್ಚು ಗುನುಗುತ್ತಿದ್ದೆ. ಅದು ಬಿಟ್ಟರೆ, ಮನಸ್ಸಿಗೆ ಹತ್ತಿರವಾಗುವ, ಮೌಲ್ಯ ಇರುವಂತಹ ಹಾಡು ಕೇಳಿ ಮನದಲ್ಲೇ ಹಾಡುತ್ತಿದ್ದೆ.

ಒಮ್ಮೆ ಸಂಗೀತ ನಿರ್ದೇಶಕ ಅಭಿಮನ್‌ರಾಯ್‌ ಕಚೇರಿಗೆ ಬಂದಿದ್ದರು. ಅದೇ ವೇಳೆ ಗೀತರಚನೆಕಾರ ನಮ್‌ ರಿಷಿ ಕೂಡ ಇದ್ದರು. ಚರ್ಚೆ ಮಾಡುವಾಗ, ನೀವೊಂದು ಹಾಡು ಹಾಡಿ ಅಂದರು. ಅಲ್ಲೆ ಇದ್ದ ರಿಷಿ ನಾನು ಹಾಡು ಬರೆಯುತ್ತೇನೆ, ಅಭಿಮನ್‌ ಸಂಗೀತ ಸಂಯೋಜಿಸುತ್ತಾರೆ ನೀವು ಹಾಡಿ ಅಂತ ಒತ್ತಡ ತಂದರು. ಪ್ರಯತ್ನ ಮಾಡೋಣ ಅಂದೆ.

ಆದರೆ, ಅದು ಅಷ್ಟೊಂದು ಚೆನ್ನಾಗಿ ಮೂಡಿಬಂದು, ಯುಟ್ಯೂಬ್‌ನಲ್ಲಿ ಮೆಚ್ಚುಗೆ ಸಿಗುತ್ತೆ ಅಂದುಕೊಂಡಿರಲಿಲ್ಲ. ಎರಡು ದಿನ ಒಂದೊಂದು ಗಂಟೆಯಂತೆ ಕೇವಲ ಎರಡು ಗಂಟೆಯಲ್ಲಿ ಹಾಡಿದ್ದೇನೆ. ಹಾಡುವುದು ಅನಿವಾರ್ಯ ಕರ್ಮ ನನಗೆ ಅನ್ನುತ್ತಲೇ ಹಾಡಿದೆ. ನಾನು ಲಕ್ಷಾಂತರ ಗಾಯಕರ ಹಾಡು ಕೇಳಿದ್ದೆ. ಆ ಸ್ವರಗಳು ಕಿವಿಯಲ್ಲಿದ್ದವು. ಹಾಗಾಗಿ, ಸಂಗೀತ ನಿರ್ದೇಶಕರು ಹೇಳಿದಂತೆ ಹಾಡಿದ್ದೇನಷ್ಟೇ. ಆ ಹಾಡಲ್ಲಿ ತತ್ವ ಇದೆ.

Advertisement

ಬದುಕಿನ ಸಾರವಿದೆ. ಹಾಗಾಗಿ ಹಾಡುವ ಮನಸ್ಸು ಮಾಡಿದ್ದೇನೆ. ನನ್ನ ಹಾಡು ಅಮೆರಿಕ, ದುಬೈ, ಸಿಂಗಾಪುರದಲ್ಲೂ ಮೆಚ್ಚುಗೆ ಪಡೆಯುತ್ತಿದೆ. ಈ ಮೂಲಕ ಗಾಯಕನನ್ನಾಗಿಸಿದೆ ಎಂಬ ಖುಷಿ ನನಗಿದೆ. ಹಾಗಂತ ನಾನು ಕಮರ್ಷಿಯಲ್‌ ಹಾಡು ಹಾಡೋದಿಲ್ಲ. ಈ ರೀತಿಯ ಮೌಲ್ಯವಿರುವ ಸಾಹಿತ್ಯವಿದ್ದರೆ ಹಾಡುವ ಪ್ರಯತ್ನ ಮಾಡ್ತೀನಿ’ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ವೇಲು.

Advertisement

Udayavani is now on Telegram. Click here to join our channel and stay updated with the latest news.

Next