Advertisement
ಲೇಡಿಹಿಲ್ ಬಳಿ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಐವರು ಯುವತಿಯರಿಗೆ ಹಿಂದಿನಿಂದ ಅತೀ ವೇಗವಾಗಿ ಬಂದು ಕಾರು ಢಿಕ್ಕಿಯಾಗಿದ್ದು, ಇದರಲ್ಲಿ ಸುರತ್ಕಲ್ ಸಮೀಪದ ಕಾನ ಬಾಳ ಬಳಿಯ ನಿವಾಸಿ ರೂಪಶ್ರೀ (23) ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಕಾರು ಚಾಲಕ ಕಮಲೇಶ್ ಬಲದೇವ್‌ನ ನಿರ್ಲಕ್ಷéದ ಚಾಲನೆಯೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದ್ದು, ಸಿಸಿ ಕೆಮರಾದಲ್ಲಿ ಘಟನೆಯ ಸಂಪೂರ್ಣ ಚಿತ್ರಣ ಸೆರೆಯಾಗಿದೆ.
ಪ್ರಕರಣದ ತನಿಖೆಯ ಪ್ರಗತಿಗೆ ಸಂಬಂಧಿಸಿ “ಉದಯವಾಣಿ’ ಜತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಅನುಮಪ್ ಅಗರ್‌ವಾಲ್ ಅವರು, ಆರೋಪಿ ಚಾಲಕ ಠಾಣೆಗೆ ಬಂದು ಶರಣಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿದ ವೇಳೆ ಮದ್ಯ ಸೇವಿಸಿರುವುದಕ್ಕೆ ಸಂಬಂಧಿಸಿದಂತೆ ಪುರಾವೆ ಸಿಕ್ಕಿಲ್ಲ. ಕಾರಿನ ಎಂಜಿನ್ ಓವರ್ ಹೀಟ್ ಆಗಿ ನಿಯಂತ್ರಣ ತಪ್ಪಿದೆ ಎಂದು ವಿಚಾರಣೆ ವೇಳೆ ಆರೋಪಿ ಕಾರು ಚಾಲಕ ತಿಳಿಸಿದ್ದು, ಈ ನಿಟ್ಟಿನಲ್ಲಿ ಕಾರಿನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆಯೇ ಎಂದು ಆರ್‌ಟಿಒ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ. ಜತೆಗೆ ಇತರ ಸಾಧ್ಯತೆಗಳ ಬಗ್ಗೆಯೂ ತನಿಖೆ ನಡೆಯಲಿದ್ದು, ಸಿಸಿ ಕೆಮರಾ ಫುಟೇಜ್‌ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು. ಫುಟ್‌ಪಾತ್‌ಗಳು ಅವೈಜ್ಞಾನಿಕ
ನಗರದ ಬಹುತೇಕ ರಸ್ತೆಗಳಲ್ಲಿ ರಸ್ತೆ ಮತ್ತು ಫುಟ್‌ಪಾತ್ ನಡುವೆ ಇಂಟರ್‌ಲಾಕ್ ಅವಳಡಿಸಿದ ವಿಶಾಲವಾದ ಪ್ರದೇಶವಿದೆ. ಪಾದಚಾರಿಗಳು ಬಹುತೇಕ ಮಂದಿ ಫುಟ್‌ಪಾತ್ ಬದಲು ಇದರಲ್ಲೇ ನಡೆದುಕೊಂಡು ಹೋಗುತ್ತಾರೆ. ಕಾರು ಸಹಿತ ವಿವಿಧ ವಾಹನಗಳನ್ನೂ ಇಲ್ಲೇ ಪಾರ್ಕ್ ಮಾಡಲಾಗುತ್ತಿದೆ. ಕೆಲವು ಕಡೆಗಳಲ್ಲಿ ಫುಟ್‌ಪಾತ್‌ಗಳು ರಸ್ತೆಗಿಂತ ಒಂದು ಇಂಚಿನಷ್ಟು ಮಾತ್ರ ಎತ್ತರವಿದೆ. ಇಂತಹ ಕಡೆಗಳಲ್ಲಿ ವಾಹನಗಳನ್ನು ಫುಟ್‌ಪಾತ್‌ನಲ್ಲೇ ಪಾರ್ಕ್ ಮಾಡುವುದೂ ಕಂಡು ಬರುತ್ತದೆ. ನಗರ ಫುಟ್‌ಪಾತ್ ಅವೈಜ್ಞಾನಿಕವಾಗಿವೆ ಎನ್ನುವ ಆರೋಪಗಳು ಹಿಂದಿನಿಂದಲೂ ನಾಗರಿಕರಿಂದ ಕೇಳಿ ಬಂದಿತ್ತು.
Related Articles
ಬುಧವಾರ ಅಪಘಾತ ನಡೆದ ಸ್ಥಳದಲ್ಲೂ ಫುಟ್‌ಪಾತ್ ಕಾಂಕ್ರೀಟ್ ರಸ್ತೆಗಿಂತ ಸ್ವಲ್ಪವೇ ಎತ್ತರದಲ್ಲಿದೆ. ಇದರಿಂದ ಕಾರು ನೇರವಾಗಿ ಫುಟ್‌ಪಾತ್‌ಗೆ ಏರಲು ಸಾಧ್ಯವಾಗಿದೆ. ಫುಟ್‌ಪಾತ್ ನಿಗದಿತ ಪ್ರಮಾಣದ ಎತ್ತರದಲ್ಲಿದ್ದರೆ ಕಾರು ಸುಲಭವಾಗಿ ಫುಟ್‌ಪಾತ್‌ಗೆ ಏರಲು ಸಾಧ್ಯವಾಗುತ್ತಿರಲಿಲ್ಲ. ಫುಟ್‌ಪಾತ್‌ಗೆ ತಡೆಗೆ ಢಿಕ್ಕಿಯಾಗಿ ನಿಲ್ಲುವ ಅಥವಾ ಕಾರೇ ಪಲ್ಟಿಯಾಗುವ ಸಾಧ್ಯತೆಯೂ ಇತ್ತು ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.
Advertisement
ಚಾಲನೆ ವೇಳೆ ಮೊಬೈಲ್ ಬಳಕೆ ಶಂಕೆ
ಅಪಘಾತ ಸಂದರ್ಭ ಕಾರು ಚಾಲಕ ಮೊಬೈಲ್ ಬಳಕೆ ಮಾಡುತ್ತಿದ್ದನೇ ಎನ್ನುವ ನಿಟ್ಟಿನಲ್ಲೂ ತನಿಖೆ ಸಾಗಿದೆ. ಒಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡಿದ್ದಾಗ ಕಾರಿನ ಸ್ಟಿಯರಿಂಗ್ ಮೇಲಿನ ನಿಯಂತ್ರಣ ಕಳೆದುಕೊಂಡು ಕಾರು ಎಡಕ್ಕೆ ಚಲಿಸಿ ಫುಟ್‌ಪಾತ್ ಮೇಲಕ್ಕೆ ಏರಿರುವ ಸಾಧ್ಯತೆಯೂ ಇದೆ. ಆ ಹಿನ್ನೆಲೆಯಲ್ಲಿ ಪೊಲೀಸರು ಅಪಘಾತ ಸ್ಥಳಕ್ಕಿಂತ ಹಿಂದಿನ ಸಿಸಿ ಕೆಮರಾ ಫುಟೇಜ್‌ಗಳನ್ನು ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.