Advertisement

ರಾಜ್ಯ ಆರೋಗ್ಯ ಇಲಾಖೆ ಮೌಲ್ಯಮಾಪನ- ಲೇಡಿಗೋಷನ್‌ ಆಸ್ಪತ್ರೆಗೆ ದ್ವಿತೀಯ ಸ್ಥಾನ

12:22 AM Feb 08, 2024 | Team Udayavani |

ಮಂಗಳೂರು: ರಾಜ್ಯದ ಆರೋಗ್ಯ ಇಲಾಖೆಯ ಮೌಲ್ಯಮಾಪನದಲ್ಲಿ ಮಂಗಳೂರಿನ ಲೇಡಿಗೋಷನ್‌ ಸರಕಾರಿ ಹೆರಿಗೆ ಆಸ್ಪತ್ರೆ ದ್ವಿತೀಯ ಸ್ಥಾನ ಗಳಿಸಿ “ರಾಜ್ಯಮಟ್ಟದ ಕಾಯಕಲ್ಪ ಪ್ರಶಸ್ತಿ’ ಪಡೆದುಕೊಂಡಿದೆ.

Advertisement

ಮಂಗಳವಾರ ಮೈಸೂರಿನಲ್ಲಿ ಜರಗಿದ ಸಮಾರಂಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದುರ್ಗಾಪ್ರಸಾದ್‌ ಎಂ.ಆರ್‌. ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಮೌಲ್ಯಮಾಪನದಲ್ಲಿ ಲೇಡಿಗೋಷನ್‌ 100ರಲ್ಲಿ 91.15 ಅಂಕಗಳನ್ನು ಗಳಿಸಿದೆ. ಬೆಂಗಳೂರಿನ ಟ್ರಾಮ ಆ್ಯಂಡ್‌ ಎಮರ್ಜೆನ್ಸಿ ಕೇರ್‌ ಸೆಂಟರ್‌ 93.80 ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದೆ.
ಲೇಡಿಗೋಷನ್‌ನಲ್ಲಿ ಪ್ರತೀ ತಿಂಗಳು ಸರಾಸರಿ 500ರಿಂದ 600 ಹೆರಿಗೆಗಳಾಗುತ್ತಿದ್ದು ಆಸುಪಾಸಿನ 12 ಜಿಲ್ಲೆಗಳು ಈ ಆಸ್ಪತ್ರೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿವೆ. ಕೊರೊನಾ ಸಂದರ್ಭ ಪ್ರತೀ ತಿಂಗಳು ಸರಾಸರಿ 800 ಹೆರಿಗೆಗಳಾಗಿದ್ದವು. ಆಸ್ಪತ್ರೆಯು ಕೇಂದ್ರ ಸರಕಾರದ ಲಕ್ಷ್ಯ ಯೋಜನೆಯಲ್ಲಿ ಪ್ಲಾಟಿನಂ ಬ್ಯಾಜ್‌ ಪಡೆದಿದೆ. ಹಲವಾರು ಕ್ಲಿಷ್ಟಕರವಾದ ಹೆರಿಗೆ ಮಾಡಿಸಿದ ಹೆಗ್ಗಳಿಕೆ ಈ ಆಸ್ಪತ್ರೆಯ ತಜ್ಞರದ್ದಾಗಿದೆ. ರೋಟರಿ ಸಂಸ್ಥೆಯ ಸಹಕಾರದೊಂದಿಗೆ ಇಲ್ಲಿ 2022ರಲ್ಲಿ ಆರಂಭಗೊಂಡ ಬ್ಲಿಡ್‌ಬ್ಯಾಂಕ್‌ನಿಂದಾಗಿ ನೂರಾರು ಶಿಶುಗಳಿಗೆ ಎದೆಹಾಲು ದೊರೆಯುವಂತಾಗಿದೆ. ಇದು ರಾಜ್ಯದ ಎರಡನೇ, ದೇಶದ 9ನೇ ಹಾಗೂ ದ.ಕ. ಜಿಲ್ಲೆಯ ಮೊದಲ ಎದೆಹಾಲಿನ ಬ್ಯಾಂಕ್‌ ಆಗಿದೆ.

ಜಿಲ್ಲಾಧಿಕಾರಿಗಳು, ಕೆಎಂಸಿ ಆಸ್ಪತ್ರೆಯ ವೈದ್ಯರು ಹಾಗೂ ಇತರ ಎಲ್ಲ ಸಿಬಂದಿಯ ಸಹಕಾರದಿಂದಾಗಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗಿದೆ ಎಂದು ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next