Advertisement

ಸಾಲ ಮಾಡಿ ಶೌಚಾಲಯ ನಿರ್ಮಿಸಿಕೊಂಡ ಮಹಿಳೆ!

07:10 AM Sep 18, 2017 | |

ಕುಷ್ಟಗಿ: ಶೌಚಾಲಯ ನಿರ್ಮಿಸಿಕೊಳ್ಳದಿದ್ದರೆ ಪಡಿತರ ರದ್ದಾಗುವ ಭೀತಿಯಿಂದ  ತಾಲೂಕಿನ ಗುಮಗೇರಾದ ರತ್ನಮ್ಮ ಚಂದ್ರಗಿರಿ ಎಂಬುವರು ಸಾಲ ಮಾಡಿ, ಯಾರ ನೆರವೂ ಇಲ್ಲದೇ ಶೌಚಾಲಯ ನಿರ್ಮಿಸಿಕೊಂಡು ಮಾದರಿಯಾಗಿದ್ದಾರೆ.
ಸ್ವತ್ಛ ಭಾರತ ಅಭಿಯಾನದ ಹಿನ್ನೆಲೆಯಲ್ಲಿ ಕೊಪ್ಪಳ ಜಿಪಂ ಬಹಿರ್ದೆಸೆ ಮುಕ್ತವಾಗಿಸಲು  ಸಾರ್ವಜನಿಕರನ್ನು ಮನವೊಲಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಜಾಗೆ ತೋರಿಸಿದರೆ ಅಲ್ಲಿಯೇ ಶಾಚಾಲಯ ನಿರ್ಮಿಸಲಾಗುತ್ತಿದೆ. ಹೀಗಿರುವಾಗ ಗುಮಗೇರಾ ಮಹಿಳೆ ಸ್ವಂತ ಹಣದಲ್ಲೇ ಶೌಚಾಲಯ ನಿರ್ಮಿಸಿಕೊಂಡಿರುವುದು ಹುಬ್ಬೇರಿಸುವಂತೆ ಮಾಡಿದೆ.

Advertisement

ಶೌಚಾಲಯ ನಿರ್ಮಿಸಿಕೊಳ್ಳುವುದು ರತ್ಮಮ್ಮಳದ್ದು ಬಹುದಿನದ ಕನಸು. ಕಡು ಬಡತನದಿಂದ ಅದು ಸಾಕಾರಗೊಂಡಿರಲಿಲ್ಲ. ಶೌಚಾಲಯ ನಿರ್ಮಿಸಿಕೊಳ್ಳದಿದ್ದರೆ ಪಡಿತರ ಚೀಟಿ ರದ್ದಾಗುತ್ತಿದೆ ಎಂಬ ಸುದ್ದಿ ಕಿವಿಗೆ ಬಿದ್ದಿದ್ದೇ ತಡ, 10 ಸಾವಿರ ರೂ. ಸಾಲ ಪಡೆದು ಶೌಚಾಲಯ ನಿರ್ಮಿಸಲು ಮುಂದಾಗಿದ್ದಾರೆ. ನೆಲಗಟ್ಟಿಯಾಗಿದ್ದರಿಂದ ಶೌಚಾಲಯ ಫಿಟ್‌ ಅಗೆಯಲು ಕೆಲಸಗಾರರು ಹಿಂಜರಿದಾಗ ತಾನೇ ಗುದ್ದಲಿ, ಹಾರೆ, ಸಲಿಕೆಯೊಂದಿಗೆ ಅಗೆದು ರಿಂಗ್‌ ಸಹ ಇಳಿಸಿದ್ದಾರೆ. ಕೂಲಿಯಾಳಾಗಿ ದುಡಿದ ಅನುಭವದ ಹಿನ್ನೆಲೆಯಲ್ಲಿ ಶೌಚಾಲಯ ಕಟ್ಟಡ ನಿರ್ಮಿಸಿ ಪ್ಲಾಸ್ಟರ್‌ ಕೆಲಸ ನಿರ್ವಹಿಸಿ ಶೌಚಾಲಯ ಪೂರ್ತಿಗೊಳಿಸಿದ್ದಾರೆ!

ರತ್ಮಮ್ಮಗೆ ಶ್ರವಣ ದೋಷವಿದ್ದು, ಕುಟುಂಬ ನಿರ್ವಹಣೆಯ ಹೊಣೆ ಅವರ ಹೆಗಲಿಗಿದೆ.  ವೃದ್ಧ ತಾಯಿಯ ಆರೈಕೆ ಹೆಗಲಿಗಿದೆ. ಪತಿ ಬಸಪ್ಪ ಸಂಸಾರ ಜೀವನದಿಂದ ದೂರವಾಗಿದ್ದು, ಸಹೋದರರು ಪಿತ್ರಾರ್ಜಿತ ಆಸ್ತಿಯನ್ನೂ  ನೀಡದೆ ಕೈ ಕೊಟ್ಟಿದ್ದಾರೆ. ಇದ್ಯಾವುದನ್ನು ತಲೆಗೆ ಹಚ್ಚಿಕೊಳ್ಳದೆ ಕೂಲಿ ಕೆಲಸ, ಮನೆಯಲ್ಲಿ ಹೊಲಿಗೆ ಯಂತ್ರದ ಜೀವನಾಧಾರವಾಗಿಸಿಕೊಂಡು, ಗುಮಗೇರಾದ ಸಿದ್ದರಾಮೇಶ್ವರ ಬಡಾವಣೆಯಲ್ಲಿ ಇಬ್ಬರು ಪುತ್ರರು, ಪುತ್ರಿಯೊಂದಿಗೆ ರತ್ನಮ್ಮ ವಾಸವಿದ್ದಾರೆ.

ಗುಮಗೇರಾ ರತ್ಮಮ್ಮ ಕಷ್ಟಕರ ಪರಿಸ್ಥಿತಿಯಲ್ಲಿ ಶೌಚಾಲಯ ನಿರ್ಮಿಸಿಕೊಂಡು ಮಾದರಿಯಾಗಿದ್ದಾರೆ. 2-3  ದಿನಗಳಲ್ಲಿ ಶೌಚಾಲಯದ ಸಹಾಯಧನ ಬಿಡುಗಡೆಗೆ ವ್ಯವಸ್ಥೆ ಕಲ್ಪಿಸಲಾಗುವುದು. ಸೋಮವಾರ ಗುಮಗೇರಾಕ್ಕೆ ಭೇಟಿ ನೀಡಿ ರತ್ಮಮ್ಮ ನಿರ್ಮಿಸಿಕೊಂಡಿರುವ ಶೌಚಾಲಯ ಪರಿಶೀಲಿಸುತ್ತೇನೆ.
ಡಾ.ಡಿ.ಮೋಹನ್‌, ತಾಪಂ ಇಒ

ಶೌಚಾಲಯ ಹೇಗೋ ನಿರ್ಮಿಸಿಕೊಂಡೆ. ಮನೆಗೆ ಸಹಾಯಧನ ನೀಡಿದರೆ ಅದನ್ನೂ ನಾನೇ ನಿರ್ಮಿಸಿಕೊಳ್ಳುತ್ತೇನೆ. ಬಡತನ ಇದ್ದರೂ ಶೌಚಾಲಯ ಇರಬೇಕು. ಆಗಲೇ ಸ್ವತ್ಛ ಭಾರತ ಕನಸು ನನಸಾಗುತ್ತದೆ.
-ರತ್ಮಮ್ಮ ಚಂದ್ರಗಿರಿ , ಶೌಚಾಲಯ ನಿರ್ಮಿಸಿಕೊಂಡ ಮಹಿಳೆ

Advertisement

– ಮಂಜುನಾಥ ಮಹಾಲಿಂಗಪುರ
 

Advertisement

Udayavani is now on Telegram. Click here to join our channel and stay updated with the latest news.

Next