Advertisement

Bangalore: ಲೇಡಿ ಪಿಎಸ್‌ಐಗೆ ಬ್ಲ್ಯಾಕ್‌ಮೇಲ್‌: ಪುರುಷ ಪಿಎಸ್‌ಐ ಸೆರೆ

01:17 PM Mar 14, 2024 | Team Udayavani |

ಬೆಂಗಳೂರು: ಮಹಿಳಾ ಪಿಎಸ್‌ಐವೊಬ್ಬರ ಜೊತೆಗಿನ ವೈಯಕ್ತಿಕ ದೃಶ್ಯಗಳನ್ನು ಸೆರೆ ಹಿಡಿದು ಲೈಂಗಿಕ ದೌರ್ಜನ್ಯ ಹಾಗೂ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಸಹೋದ್ಯೋಗಿ ಪುರುಷ ಪಿಎಸ್‌ಐಯನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಕೆಎಸ್‌ಐಎಸ್‌ಎಫ್ನ ಸಂಜಯ್‌ ಕುಮಾರ್‌ (34) ಬಂಧಿತ ಪಿಎಸ್‌ಐ.

ಈತನ ಸಹೋದ್ಯೋಗಿ 28 ವರ್ಷದ ಮಹಿಳಾ ಪಿಎಸ್‌ಐ ಕೊಟ್ಟ ದೂರಿನ ಆಧಾರದ ಮೇಲೆ ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ತರಬೇತಿ ಪಡೆಯುವ ವೇಳೆ ದೂರುದಾರ ಪಿಎಸ್‌ಐಗೆ ಆರೋಪಿ ಸಂಜಯ್‌ ಪರಿಚಯವಾಗಿತ್ತು. ಆರಂಭದಲ್ಲಿ ಸಂಜಯ್‌ ಪ್ರೇಮ ನಿವೇದನೆ ಮಾಡಿದ್ದರು. ಇದನ್ನು ದೂರುದಾರ ಮಹಿಳೆ ತಿರಸ್ಕರಿಸಿದ್ದರು. ಕೆಎಸ್‌ಐಎಸ್‌ಎಫ್ ಪಿಎಸ್‌ಐ ಆಗಿ ಇದ್ದುಕೊಂಡು ನಿಮ್ಮನ್ನು ವಿವಾಹ ಆಗುವುದಿಲ್ಲ. ಯುಪಿಎಸ್ಸಿ ಮಾಡುತ್ತೇನೆ. ನನಗೆ ಓದಲು ಸಹಾಯ ಮಾಡಿ ಎಂದು ಸಂಜಯ್‌ ಹೇಳಿದ್ದರು. ಓದಿನ ನೆಪ ಇಟ್ಟುಕೊಂಡು ದೂರುದಾರರಿಗೆ ಹತ್ತಿರವಾದರು. ತದನಂತರ ತರಬೇತಿ ಮುಗಿದ ಬಳಿಕ ಕರೆಮಾಡಿ ನೀವು ನನಗೆ ಓದಲು ಸಹಾಯ ಮಾಡುತ್ತೇನೆ ಎಂದು ಹೇಳಿದ್ದೀರಿ. ನನಗೆ ಹಲವು ಸಮಸ್ಯೆಗಳಿವೆ ಸಹಾಯ ಮಾಡಿ ಎಂದು ಹೇಳಿ ಆಗಾಗ ಹಣ ತೆಗೆದುಕೊಂಡು ವಾಪಸ್‌ ಕೊಡುತ್ತಿದ್ದರು ಎಂದು ದೂರಿನಲ್ಲಿ ಮಹಿಳಾ ಪಿಎಸ್‌ಐ ಉಲ್ಲೇಖೀಸಿದ್ದಾರೆ.

ಮಹಿಳಾ ಪಿಎಸ್‌ಐಗೆ ಬ್ಲ್ಯಾಕ್‌ ಮೇಲ್‌: 2020ರಲ್ಲಿ ನನ್ನಿಂದ 5.50 ಲಕ್ಷ ರೂ. ತೆಗೆದುಕೊಂಡರು. ಓದುವ ನೆಪದಲ್ಲಿ ಹತ್ತಿರ ಆಗಿ ಜೊತೆಗಿರುವ ಸಮಯದ ಫೋಟೋಗಳನ್ನು ನನಗೆ ತಿಳಿಯದೆ ತೆಗೆದುಕೊಂಡಿದ್ದಾರೆ.

Advertisement

ಅವುಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ ಮೇಲ್‌ ಮಾಡಿ ನನಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದಾರೆ. ಸಾಯುತ್ತೇನೆ ಎನ್ನುವುದು, ಕೈ ಕೊಯ್ದುಕೊಳ್ಳುವುದು ಮಾಡುತ್ತಿದ್ದರು. ಈ ರೀತಿಯಾಗಿ ಬ್ಲ್ಯಾಕ್‌ ಮೇಲ್‌ ಮಾಡಿ ನನ್ನನ್ನು ಕರೆಸಿಕೊಳ್ಳುತ್ತಿದ್ದರು. ಮದ್ಯಪಾನ, ಆನ್‌ಲೈನ್‌ ಬೆಟ್ಟಿಂಗ್‌ ಚಟ ಹೊಂದಿರುವುದು ಗಮನಕ್ಕೆ ಬಂದು ನಾನು ಸುಮ್ಮನಿದ್ದೆ. ಸಂಜಯ್‌ ಬಳಿ ಮಾತನಾಡದೇ ಇದ್ದಾಗ ಅವರು ನನ್ನ ಕರ್ತವ್ಯ ಸ್ಥಳದಲ್ಲಿ ಸಿಬ್ಬಂದಿಗೆ ಕರೆ ಮಾಡುತ್ತಿದ್ದರು.

ನನ್ನ ಬ್ಯಾಚ್‌ ನವರಿಗೆ ಕರೆಮಾಡಿ ನನ್ನ ಬಗ್ಗೆ ಇಲ್ಲ-ಸಲ್ಲದ ಆರೋಪ ಮಾಡಿದ್ದಾರೆ. ನನ್ನ ಮನೆಯ ಸುತ್ತಾ ಚಾಕು ಹಿಡಿದು ತಿರುಗಾಡಿ ಜೀವ ಬೆದರಿಕೆ ಹಾಕಿದ್ದಾರೆ. ಕರ್ತವ್ಯ ಸ್ಥಳಕ್ಕೆ ಬಂದು ಥಳಿಸಿ ನನಗೆ ತೊಂದರೆ ಕೊಟ್ಟಿದ್ದಾರೆ. ನನ್ನ ಖಾಕಿ ಯೂನಿಫಾರಂ ಗೌರವ ಮತ್ತು ನನ್ನ ಘನತೆಗೆ ಚ್ಯುತಿ ತಂದಿದ್ದಾರೆ. ನೀನು ನನ್ನನ್ನು ತಿರಸ್ಕರಿಸಿದರೆ ಅಪಹರಿಸಿಕೊಂಡು ಹೋಗಿ ತಾಳಿ ಕಟ್ಟುವುದಾಗಿ ಬೆದರಿಕೆ ಒಡ್ಡಿದ್ದಾರೆ. ಮಾ.11ರಂದು ಸಂಜಯ್‌ ನನ್ನ ಮನೆಗೆ ನುಗ್ಗಿ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಎಫ್ಐಆರ್‌ನಲ್ಲಿ ಮಹಿಳಾ ಪಿಎಸ್‌ಐ ಆರೋಪಿಸಿದ್ದಾರೆ. ಚಂದ್ರಾಲೇಔಟ್‌ ಠಾಣೆ ಪೊಲೀಸರು ತನಿಖೆ ನಡೆಸಿ ಸಂಜಯ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಎಫ್ಐಆರ್‌ನಲ್ಲಿ ಏನಿದೆ?

 ಕರ್ತವ್ಯ ಸ್ಥಳಕ್ಕೆ ಬಂದು ಥಳಿತ

 ಅಪಹರಿಸಿ ವಿವಾಹವಾಗುವ ಬೆದರಿಕೆ

 ಮನೆಗೆ ನುಗ್ಗಿ ಹಲ್ಲೆಗೆ ಯತ್ನ

 ಚಾಕು ಹಿಡಿದು ಜೀವ ಬೆದರಿಕೆ

 ನನ್ನ ಸ್ನೇಹಿತರಿಗೆ ಕರೆ ಮಾಡಿ ಅಪಪ್ರಚಾರ

-ಉದಯವಾಣಿ ಸಮಾಚಾರ

Advertisement

Udayavani is now on Telegram. Click here to join our channel and stay updated with the latest news.

Next