ನ್ಯೂಯಾರ್ಕ್ ನಗರದಲ್ಲಿರುವ ಸ್ವಾತಂತ್ರ್ಯದ ಪ್ರತಿಮೆ (statue of liberty) ಪ್ರವಾಸಿಗರನ್ನು ನಗರದತ್ತ ಆಕರ್ಷಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೊಳಪಿನ ಕಿರೀಟ ಮತ್ತು ಪಾದರಕ್ಷೆ ಧರಿಸಿ, ಮುರಿದುಹೋದ ಸರಪಳಿಯನ್ನು ಮೆಟ್ಟಿ, ಬಲಗೈಯಲ್ಲಿ ಪಂಜು ಹಾಗೂ ಉತ್ತರ ಅಮೆರಿಕ ಸಂಯುಕ್ತ ಸಂಸ್ಥಾನಗಳ ಸ್ವಾತಂತ್ರ್ಯ ದಿನವಾದ ಜುಲೈ 4, 1766ನ್ನು ಕೆತ್ತಿದ ಫಲಕವನ್ನು ಎಡಗೈಯಲ್ಲಿ ಹಿಡಿದು ನಿಂತ ಮಹಿಳೆಯೊಬ್ಬಳನ್ನು ಪ್ರತಿನಿಧಿಸುವ ಕೆತ್ತನೆ ಕಲಾಕೃತಿಯೂ ಇದರಲ್ಲಿ ಒಂದು. ರೋಮ್‌ನ ಸ್ವಾತಂತ್ರ್ಯ ದೇವತೆಯ ರೂಪದ ಕಲ್ಪನೆಯಲ್ಲಿ ಈ ಪ್ರತಿಮೆಯನ್ನು ವಿನ್ಯಾಸಗೊಳಿಸಲಾಗಿದೆ. ಉಕ್ಕಿನ ಚೌಕಟ್ಟಿನ ಮೇಲೆ ಶುದ್ಧ ತಾಮ್ರದ ರಕ್ಷಣ ಕವಚದಿಂದ ಈ ಪ್ರತಿಮೆಯನ್ನು ರಚಿಸಲಾಗಿದೆ.
ಈ ಪ್ರತಿಮೆಯನ್ನು ತಯಾರು ಮಾಡಿದಾಗ ತಾಮ್ರದ ಬಣ್ಣವನ್ನೇ ಹೊಂದಿತ್ತು. ಹವಾಮಾನದ ವೈಪರೀತ್ಯದಿಂದಾಗಿ ತಾಮ್ರದ ಮೇಲ್ಮೈ ತುಕ್ಕಿನಿಂದಾಗಿ ಹಸುರು ಬಣ್ಣದಿಂದ ಈ ಪ್ರತಿಮೆ ಕಂಗೊಳಿಸುತ್ತದೆ. ನ್ಯೂಯಾರ್ಕ್ ಬಂದರಿನಲ್ಲಿರುವ ಲಿಬರ್ಟಿ ದ್ವೀಪದ ಮೇಲಿರುವ 150 ಅಡಿ (46ಮೀ) ಎತ್ತರದ ಈ ಸ್ವಾತಂತ್ರ್ಯದ ಪ್ರತಿಮೆಯು ಆಯತಾಕಾರದ ಶಿಲೆಯ ಪೀಠಸ್ಥಾನದ ಮೇಲೆ ನಿಂತಿದೆ. ಪೀಠ ಮತ್ತು ಆಧಾರವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಅದು ಸುಮಾರು 305 ಅಡಿ ಎತ್ತರದಲ್ಲಿರುವಂತೆ ಕಾಣುತ್ತದೆ. ಜಗತ್ತಿನಾದ್ಯಂತ, ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರಮುಖ ಲಾಂಛನಗಳಲ್ಲಿ ಸ್ವಾತಂತ್ರ್ಯದ ಪ್ರತಿಮೆಯೂ ಸಹ ಒಂದು ಎಂದು ಪರಿಗಣಿಸಲಾಗುತ್ತದೆ. ಹೀಗೆ ಪ್ರಸಿದ್ಧವಾದ ಪ್ರತಿಮೆಯನ್ನು ನೋಡಬೇಕೆಂಬ ಆಸೆ ಬಹಳ ಹಿಂದೆಯೇ ನನ್ನಲ್ಲಿತ್ತು.
ನನ್ನ ಮೊದಲ ಸಲದ ನ್ಯೂಯಾರ್ಕ್ ಭೇಟಿ ಸುಮಾರು ಹದಿನಾರು ವರ್ಷಗಳ ಹಿಂದೆ ಆಗಿತ್ತು. ನಾನು ಮಾಂಟ್ರಿಯಲ್‌ನಲ್ಲಿ ಪಿಎಚ್.ಡಿ ವ್ಯಾಸಂಗ ಮಾಡುತ್ತಿದ್ದ ಸಮಯವದು. ಆ ವರ್ಷದ ಅಮೆರಿಕನ್ ಸೊಸೈಟಿ ಒಫ್ ಮೆಕ್ಯಾನಿಕಲ್ ಎಂಜಿನಿಯರ್ಸ್‌ನ ವಾರ್ಷಿಕ ಸಮ್ಮೇಳನ ನ್ಯೂಯಾರ್ಕ್ ನಗರದಲ್ಲಿ ಏರ್ಪಡಿಸಲಾಗಿತ್ತು. ಆ ಸಮ್ಮೇಳನದಲ್ಲಿ ನನ್ನದೊಂದು ತಾಂತ್ರಿಕ ಬರಹ ಪ್ರಕಟಗೊಂಡಿದ್ದು ಅದನ್ನು ಪ್ರಸ್ತುತಿಸಲು ನ್ಯೂಯಾರ್ಕ್‌ಗೆ ಪ್ರಯಾಣ ಮಾಡಿದ್ದೆ. ಅದು ನನ್ನ ಅಮೆರಿಕ ದೇಶಕ್ಕೆ ಮೊದಲ ಭೇಟಿ ಹಾಗೂ ಮೊದಲ ಸಮ್ಮೇಳನದಲ್ಲಿ ಪಾಲ್ಗೊಳ್ಳುವಿಕೆಯೂ ಆಗಿತ್ತು.
ಸಮ್ಮೇಳನದಲ್ಲಿ ಭಾಗವಹಿಸಿದವರಿಗಾಗಿ ವಿಶೇಷವಾಗಿ ರಾತ್ರಿಯ ಭೋಜನವನ್ನೊಳಗೊಂಡ ನೌಕಾವಿಹಾರದ ವ್ಯವಸ್ಥೆ ಮಾಡಿದ್ದರು. ಐಷಾರಾಮಿ ನೌಕೆಯಲ್ಲಿ ಕುಳಿತುಕೊಂಡು ನ್ಯೂಯಾರ್ಕ್ ನಗರವನ್ನು ವೀಕ್ಷಿಸುತ್ತ ಹೊರಟ ನಮ್ಮ ತಂಡ ಸ್ವಾತಂತ್ರ್ಯದ ಪ್ರತಿಮೆಯ ಬಳಿ ಬರುತ್ತಿದ್ದಂತೆ ಎಲ್ಲರೂ ಎದ್ದು ನಿಂತು “ಓ’ ಎಂದು ಉದ್ಘಾರ ತೆಗೆದಿದ್ದರು. ಆಗಿನ ಫೋನ್‌ಗಳ ಕೆಮರಾಗಳು ಈಗಿನಂತೆ ತಾಂತ್ರಿಕವಾಗಿ ಮುಂದೆ ಇಲ್ಲದುದರಿಂದ ಒಂದು ಸರಿಯಾದ ಭಾವಚಿತ್ರ ತೆಗೆದುಕೊಳ್ಳಲಾಗಿರಲಿಲ್ಲ. ಧ್ವನಿವರ್ಧಕದಲ್ಲಿ ನಿರಂತರವಾಗಿ ನಗರದ ಬಗ್ಗೆ ವಿವರಣೆಗಳನ್ನು ನೀಡಲಾಗುತ್ತಿದ್ದರೂ ಸಮ್ಮೇಳನದ ಭಾಗಿಗಳೆಲ್ಲ ತಮ್ಮ ತಮ್ಮ ಸಂಶೋಧನೆ ಬಗ್ಗೆ ಇತರರಿಗೆ ತಿಳಿಸುವುದರಲ್ಲೇ ಮುಳುಗಿದ್ದರು. ಹಗಲು ಹೊತ್ತಿನಲ್ಲಿ ಪೀಠದ ತುದಿಯವರೆಗೆ ಹೋಗಿ ಪ್ರತಿಮೆಯ ಬುಡಕ್ಕೆ ಹೋಗುವ ಅವಕಾಶವಿರುವುದೆಂದು ವಿವರಿಸಿದ್ದರು. ದೂರದಿಂದ ನೋಡಿದ ಸ್ವಾತಂತ್ರ್ಯದ ಪ್ರತಿಮೆಯನ್ನು ಹತ್ತಿರದಿಂದ ನೋಡುವ ತವಕವಿದ್ದರೂ ಆ ಭೇಟಿಯಲ್ಲಿ ಅದು ಸಾಧ್ಯವಾಗಲಿಲ್ಲ.
ಐದು ವರ್ಷಗಳ ಹಿಂದೆ ಅತ್ತೆ-ಮಾವ ಕೆನಡಾಕ್ಕೆ ಭೇಟಿ ಕೊಟ್ಟಿದ್ದಾಗ ಅಮೆರಿಕದ ವೀಸಾವನ್ನೂ ಮಾಡಿಸಿಕೊಂಡು ಬರಲು ಹೇಳಿದ್ದೇವು. ನ್ಯೂಯಾರ್ಕ್ ನಗರವನ್ನು ಅವರಿಗೆ ತೋರಿಸುವುದರ ಜತೆಗೆ ನಾವುಗಳು ಕೂಡಾ ನ್ಯೂಯಾರ್ಕ್ ನೋಡಿಕೊಂಡು ಬರಬೇಕೆಂದು ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಾಡಿದ್ದೇವು. ಈ ಸಲದ ನ್ಯೂಯಾರ್ಕ್ ಭೇಟಿಯಲ್ಲಿ ಸ್ವಾತಂತ್ರ್ಯದ ಪ್ರತಿಮೆಯನ್ನೂ ಒಂದು ಗಮ್ಯಸ್ಥಾನವಾಗಿಸಿ ನಮ್ಮ ಸಿದ್ಧತೆಗಳು ನಡೆದಿತ್ತು. ಸ್ಥಳದಲ್ಲಿ ಟಿಕೆಟ್ ದೊರಕದೆ ನಿರಾಸೆಯಾಗಬಾರದೆಂದು ಎರಡು ತಿಂಗಳುಗಳ ಹಿಂದೆಯೇ ಅಂತರ್ಜಾಲ ಮುಖೇನ ಲಿಬರ್ಟಿ ದ್ವೀಪಕ್ಕೆ ಹೋಗಲು ದೋಣಿಯ ಟಿಕೆಟ್‌ಗಳನ್ನು ಮುಂಗಡವಾಗಿ ಕಾದಿರಿಸಿದ್ದೇವು.
ನಮ್ಮ ನ್ಯೂಯಾರ್ಕ್ ಪ್ರಯಾಣದ ದಿವಸ ವರ್ಲ್ಡ್ ಟ್ರೇಡ್ ಸೆಂಟರ್ ಪಕ್ಕದಲ್ಲಿ ನಿರ್ಮಿಸಲಾದ ಸ್ಮಾರಕವನ್ನು ವೀಕ್ಷಿಸಿ ಅನಂತರ ದ್ವೀಪದತ್ತ ಕರೆದೊಯ್ಯುವ ನೌಕೆಗಳು ಹೊರಡುವ ಬ್ಯಾಟರಿ ಪಾರ್ಕ್‌ಗೆ ಹೋದೆವು. ನಿಗದಿತ ಸಮಯಕ್ಕೆ ನಮಗೆ ನೌಕೆಯನ್ನು ಏರಲು ಅನುವು ಮಾಡಿಕೊಟ್ಟಿದ್ದರು. ಸುಡು ಬಿಸಿಲಿನ ದಿವಸವಾದರೂ ಸುತ್ತಲಿನ ದೃಶ್ಯ ವೀಕ್ಷಣೆಯ ಉತ್ಸುಕತೆಯಲ್ಲಿ ಮಹಡಿಯ ಮೇಲಿನ ಆಸನವನ್ನೇ ಆರಿಸಿದೆವು. ಐದು ನಿಮಿಷಗಳ ಒಳಗೆ ಹೊರಡಬೇಕಾಗಿದ್ದ ನೌಕೆ ಸುಮಾರು ಇಪ್ಪತ್ತು ನಿಮಿಷಗಳಷ್ಟು ಸ್ಥಳದಲ್ಲಿ ನಿಂತು ಕೊನೆಗೆ ಹೊರಟಿತ್ತು.
ಧ್ವನಿವರ್ಧಕದ ಮೂಲಕ ಸ್ವಾತಂತ್ರ್ಯದ ದ್ವೀಪದಲ್ಲಿ ಒಂದು ಬೆಂಕಿ ಅಪಘಾತವಾಗಿ ಅಲ್ಲಿಗೆ ಯಾರನ್ನೂ ಹೋಗಲು ಬಿಡಲಾಗುವುದಿಲ್ಲ ಎಂದು ಹೇಳಿದ್ದರು. ನೌಕೆಯಲ್ಲಿ ದೂರದಿಂದಲೇ ಪ್ರತಿಮೆಯನ್ನೂ ತೋರಿಸಿ ಅನಂತರ ಎಲ್ಲಿಸ್ ದ್ವೀಪದಲ್ಲಿ ನಮಗೆ ಇಳಿಯಲು ಅನುವು ಮಾಡಿದರು. ಅಲ್ಲಿರುವ ವಲಸೆ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿ ನ್ಯೂಯಾರ್ಕ್ ನಗರದ ಬ್ಯಾಟರಿ ಪಾರ್ಕ್‌ಗೆ ಇನ್ನೊಂದು ನೌಕೆಯಲ್ಲಿ ಹಿಂದಿರುಗಿದೆವು. ಅಲ್ಲಿಯ ಟಿಕೆಟ್ ಕೌಂಟರ್‌ನಲ್ಲಿ ನಮ್ಮ ಟಿಕೆಟ್ ತೋರಿಸಿದರೆ ಪಾವತಿಸಿದ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ತಿಳಿಯಿತು.
ಸರದಿ ಸಾಲಿನಲ್ಲಿ ಸುಮಾರು ಅರ್ಧ ಗಂಟೆ ನಿಂತು ಟಿಕೆಟ್ ಹಣವನ್ನು ವಾಪಸು ಪಡೆದುಕೊಂಡು ಸ್ವಾತಂತ್ರ್ಯದ ಪ್ರತಿಮೆಯನ್ನು ಹತ್ತಿರದಿಂದ ನೋಡಲಾಗಲಿಲ್ಲ ಎಂಬ ನಿರಾಸೆಯೊಂದಿಗೆ ನ್ಯೂಯಾರ್ಕ್ ನಗರದಿಂದ ಹಿಂದಿರುಗಿ ಬರಬೇಕಾಯಿತು. ವಿಪರ್ಯಾಸವೆಂದರೆ ನಾವು ಟಿಕೆಟ್ ಹಣದ ಮರುಪಾವತಿ ಪಡೆದುಕೊಂಡು ಈ ಕಡೆ ಬರುತ್ತಿದ್ದಂತೆ ಲಿಬರ್ಟಿ ದ್ವೀಪಕ್ಕೆ ನೌಕೆಯ ಸೇವೆ ಪುನರಾರಂಭಗೊಂಡಿತ್ತು!
ಕಳೆದ ವರ್ಷ ಪ್ಯಾರಿಸ್‌ಗೆ ಮೂರು ದಿವಸಗಳ ಪ್ರವಾಸ ಕೈಗೊಳ್ಳುವ ಅವಕಾಶ ಒದಗಿ ಬಂದಿತ್ತು. ಮೊದಲ ದಿನ ಐಫೆಲ್ ಟವರ್, ನೊಟ್ರೆಡಾಂ ಚರ್ಚ್, ವಿಜಯದ ಕಮಾನು, ಲೂವ್ಡೆ ವಸ್ತು ಸಂಗ್ರಹಾಲಯ (ಜಗತ್ಪ್ರಸಿದ್ಧ ಮೊನಾಲಿಸಾ ಚಿತ್ರಕಲೆ ಪ್ರದರ್ಶನಕ್ಕಿಟ್ಟಿರುವ ವಸ್ತು ಸಂಗ್ರಹಾಲಯ) ಮುಂತಾದ ಪ್ಯಾರಿಸ್‌ನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿದೆವು. ಸೈನ್ ನದಿಯಲ್ಲಿ ಒಂದು ಗಂಟೆ ನೌಕಾವಿಹಾರವನ್ನೂ ಮೊದಲ ದಿವಸವೇ ಮುಗಿಸಿದ್ದೇವು. ಎರಡನೇಯ ದಿನ ಹೊಟೇಲ್‌ನಿಂದ ಹೊರಡುವ ಮೊದಲು ಇನ್ನು ಉಳಿದ ಮುಖ್ಯ ಸ್ಥಳಗಳು ಯಾವುವೆಂದು ಗೂಗಲ್‌ನಲ್ಲಿ ನೋಡಲಾಗಿ ಲಕ್ಸೆಮ್ ಬರ್ಗ್ ಉದ್ಯಾನವನ ಬಹಳ ಆಕರ್ಷದಾಯಕವಾಗಿರುವುದಾಗಿಯೂ ಅಲ್ಲಿ ಸ್ವಾತಂತ್ರ್ಯದ ಪ್ರತಿಮೆಯ ಪ್ರತಿರೂಪವಿರುವುದಾಗಿಯೂ ತಿಳಿಯಿತು.
ನ್ಯೂಯಾರ್ಕ್‌ನಲ್ಲಿ ಪ್ರತಿಮೆ ನೋಡಲು ಅವಕಾಶ ಸಿಗದೇ ನಿರಾಸೆಗೊಳಗಾದ ವಿಷಯ ನೆನಪಾಯಿತು. ಅದರ ಹೆಚ್ಚು ಮಾಹಿತಿಗಳನ್ನು ತಿಳಿದುಕೊಳ್ಳುವ ಗೋಜಿಗೆ ಹೋಗದೆ ಲಕ್ಸೆಮ್ ಬರ್ಗ್ ಉದ್ಯಾನವನ ಹಾಗೂ ಅದರ ಪಕ್ಕದ ಇನ್ನೂ ಕೆಲವು ಗಮ್ಯ ಸ್ಥಾನಗಳನ್ನು ಗುರಿತಿಸಿಕೊಂಡು ಆ ದಿನದ ಯೋಜನೆ ಸಿದ್ಧಮಾಡಿ ಬಸ್ ಮತ್ತು ಮೆಟ್ರೋದ ದೈನಿಕ ಪಾಸ್ ಖರೀದಿಸಿ ಹೊಟೇಲ್ ನಿಂದ ಹೊರಟೆವು.
ಸಮೀಪದ ಬಸ್ ನಿಲ್ದಾಣದಲ್ಲಿ ಇಳಿದು ಉದ್ಯಾನವನದ ಕಡೆಗೆ ಹೆಜ್ಜೆ ಹಾಕುತ್ತಿದ್ದಂತೆ ನಾನು ಸ್ವಾತಂತ್ರ್ಯದ ಪ್ರತಿಮೆಯ ತಲೆ ದೂರದಿಂದ ಕಾಣಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೆ. ಮೊಬೈಲ್ ಫೋನ್‌ನಲ್ಲಿ ಭೂಪಟವನ್ನು ತೆರೆದಿಟ್ಟು ಗೂಗಲ್ ತೋರಿಸಿದ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಾ ಹೋಗುತ್ತಿದ್ದೆವು. ಪ್ರತಿಮೆಯನ್ನು ನೋಡುವ ಏನೋ ಒಂದು ಕಾತರತೆ ಮನಸ್ಸಿನಲ್ಲಿ ಹೆಚ್ಚುತ್ತಾ ಇತ್ತು!
ಉದ್ಯಾನವನದ ಒಳಗೆ ಪ್ರವೇಶಿಸಿ ಸುತ್ತ ಕಣ್ಣು ಹಾಯಿಸಿದರೂ ಯಾವುದೇ ಪ್ರತಿಮೆ ಕಣ್ಣಿಗೆ ಕಾಣಿಸಲಿಲ್ಲ. ಸ್ವಲ್ಪ ಮುಂದೆ ನಡೆದುಕೊಂಡು ಹೋದರೆ, ಗೂಗಲ್ ಹಿಂದಿರುಗಿ ನಾವು ಬಂದ ದಿಕ್ಕಿನತ್ತ ನಡೆಯಲು ನಿರ್ದೇಶಿಸಿತ್ತು. ಅಲ್ಲಿ ಎಲ್ಲಿಯೂ ಪ್ರತಿಮೆ ಕಾಣದೇ ಕೊನೆಗೆ ಪಕ್ಕದಲ್ಲಿದ್ದ ಒಬ್ಬರನ್ನು ಕೇಳಿದೆವು. ಅವರು ತೋರಿಸಿದ ದಿಕ್ಕಿನತ್ತ ನೋಡಿದರೆ ಆ ಕಡೆ ಮರ-ಗಿಡಗಳು ಮಾತ್ರ ಕಾಣಿಸುತ್ತಿತ್ತು. ಅಲ್ಲಿಯವರೆಗೆ ನಡೆದುಕೊಂಡು ಹೋಗಿ ಸ್ವಾತಂತ್ರ್ಯದ ಪ್ರತಿಮೆ ನೋಡಿ ಒಂದು ರೀತಿಯ ಭ್ರಮನಿರಸನ! ನ್ಯೂಯಾರ್ಕ್ ನಗರದಲ್ಲಿರುವ ಪ್ರತಿಮೆಯ ಎತ್ತರ ನೂರ ಐವತ್ತು ಅಡಿಗಳು, ಲಕ್ಸೆಮ್ ಬರ್ಗ್ ಉದ್ಯಾನವನದಲ್ಲಿದ್ದ ಪ್ರತಿಮೆಯ ಎತ್ತರ ಕೇವಲ ಒಂಬತ್ತು ಅಡಿಗಳು!
ನ್ಯೂಯಾರ್ಕ್‌ನಲ್ಲಿರುವ ಸ್ವಾತಂತ್ರ್ಯದ ಪ್ರತಿಮೆಗೂ ಫ್ರಾನ್ಸ್ ದೇಶಕ್ಕೂ ಹತ್ತಿರದ ನಂಟು! ಆ ಪ್ರತಿಮೆಯನ್ನು ಫ್ರಾನ್ಸ್‌ನಲ್ಲಿ ನೆಲೆಸಿದ ಅಮೆರಿಕದ ಪ್ರಜೆಗಳು ಅಮೆರಿಕ ಸಂಯುಕ್ತ ಸಂಸ್ಥಾನಗಳ ಸ್ವಾತಂತ್ರ್ಯದ ಶತಮಾನೋತ್ಸವದ ಅಂಗವಾಗಿ ಉಡುಗೊರೆಯಾಗಿ ಕೊಟ್ಟಿದ್ದರು. 1886ರ ಅಕ್ಟೋಬರ್ 28ರಂದು ಈ ಪ್ರತಿಮೆ ಅನಾವರಣಗೊಂಡಿತು. ಪ್ರತಿಮೆ ಸಂಪೂರ್ಣವಾಗಿ ಫ್ರಾನ್ಸ್‌ನಲ್ಲಿಯೇ ತಯಾರಾಗಿ ಹಡಗಿನ ಮೂಲಕ ಅಮೆರಿಕಕ್ಕೆ ಕಳುಹಿಸಲಾಗಿತ್ತು.
ನ್ಯೂಯಾರ್ಕ್ ನಗರದಲ್ಲಿ ಸ್ವಾತಂತ್ರ್ಯದ ಪ್ರತಿಮೆ ಸ್ಥಾಪನೆಯಾದ ಅನಂತರ ಅದರ ಪ್ರತಿರೂಪಗಳು ಫ್ರಾನ್ಸ್ ಮತ್ತು ಇತರ ಐರೋಪ್ಯ ರಾಷ್ಟ್ರಗಳಲ್ಲಿ ನೂರಾರು ಕಡೆ ಸ್ಥಾಪನೆಯಾಗಿವೆಯಂತೆ. ಹತ್ತಿರದಿಂದ ಸ್ವಾತಂತ್ರ್ಯ ದೇವತೆಯ ಪ್ರತಿಮೆಯನ್ನು ವೀಕ್ಷಿಸಬೇಕೆಂಬ ನನಗೆ ಲಕ್ಸೆಮ್ ಬರ್ಗ್ ಉದ್ಯಾನವನದಲ್ಲಿ ಕಾಣಸಿಕ್ಕಿದ್ದು ಹೀಗೆ ಸ್ಥಾಪನೆಯಾದ ಪ್ರತಿರೂಪಗಳಲ್ಲಿ ಒಂದಾಗಿತ್ತು. ನ್ಯೂಯಾರ್ಕ್ ನಗರದಲ್ಲಿರುವ ಪ್ರತಿಮೆಯ ವೈಭವದ ಎದುರು ಲಕ್ಸೆಮ್ ಬರ್ಗ್ ಉದ್ಯಾನವನದಲ್ಲಿದ್ದ ಪ್ರತಿಮೆ ಬಹಳ ಗೌಣವಾಗಿ ಕಂಡಿತ್ತು. ಎರಡು ಸಲ ನಿರಾಸೆಗೊಳಿಸಿದ ಸ್ವಾತಂತ್ರ್ಯ ದೇವತೆ ಪ್ಯಾರಿಸ್‌ನಲ್ಲಿ ಪ್ರತ್ಯಕ್ಷಳಾಗಿ ದರ್ಶನ ನೀಡಿದ್ದಂತೂ ಸತ್ಯ. ಸ್ವಾತಂತ್ರ್ಯದ ಪ್ರತಿಮೆ ಎದುರು ನಿಂತು ಹತ್ತಿರದಿಂದ ಫೋಟೋ ತೆಗೆಸಿಕೊಳ್ಳುವ ಅವಕಾಶ ಸಿಕ್ಕಿದ್ದು ಮಾತ್ರ ನಿಜ.
ಲಕ್ಸೆಮ್ ಬರ್ಗ್ ಉದ್ಯಾನವನದಲ್ಲಿ ನಾವು ನೋಡಿದ ಪ್ರತಿಮೆಯ ಬಗ್ಗೆ ಸ್ವಲ್ಪ ಮಾಹಿತಿ ಕಲೆ ಹಾಕಿದೆ.
1899ನೇ ಇಸವಿಯಲ್ಲಿ ಎರಕ ಹೊಯ್ಯಲಾದ ಸ್ವಾತಂತ್ರ್ಯದ ಪ್ರತಿಮೆಯನ್ನು 1906ನೇ ಇಸವಿಯಿಂದ 2011ನೇ ಇಸವಿಯವರೆಗೆ ಲಕ್ಸೆಮ್ ಬರ್ಗ್ ಉದ್ಯಾನವನದಲ್ಲಿ ಇರಿಸಲಾಗಿತ್ತು. ಅನಂತರ ಅದರ ಇನ್ನೊಂದು ಪ್ರತಿರೂಪವನ್ನು ಕಂಚಿನಿಂದ ತಯಾರಿಸಿ ಉದ್ಯಾನವನದಲ್ಲಿ ಸ್ಥಾಪಿಸಿ, ಅಸಲಿ ಪ್ರತಿಮೆಯನ್ನು ವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗಿತ್ತು. ಮೂರ್ತಿ ಚಿಕ್ಕದಾದರೂ ಈ ಪ್ರತಿಮೆಯ ಕೀರ್ತಿ ಚಿಕ್ಕದಲ್ಲ, ಅದಕ್ಕೆ ಅದರದೇ ಆದ ಹಿನ್ನೆಲೆಯಿರುವುದಾಗಿ ತಿಳಿದು ಸ್ವಲ್ಪ ಸಮಾಧಾನವಾಗಿತ್ತು! ಆದರೆ ನ್ಯೂಯಾರ್ಕ್ ನಗರದಲ್ಲಿ ಸ್ವಾತಂತ್ರ್ಯದ ಪ್ರತಿಮೆಯನ್ನು ಹತ್ತಿರದಿಂದ ನೋಡುವ ಅವಕಾಶಕ್ಕಾಗಿ ಇನ್ನೂ ಕಾಯಬೇಕು!
*ಕೃಷ್ಣ ಪ್ರಸಾದ್ ಬಾಳಿಕೆ, ಬ್ರ್ಯಾಂಪ್ಟಾನ್