Advertisement

ಲಾಡ್ಲಾಪುರ: ಸಹಕಾರ ಸಂಘಕ್ಕೆ 12 ಸದಸ್ಯರ ಆಯ್ಕೆ

10:32 AM Dec 02, 2018 | |

ವಾಡಿ: ಲಾಡ್ಲಾಪುರ ಗ್ರಾಮದಲ್ಲಿ ನೂತನವಾಗಿ ರಚನೆಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶನಿವಾರ ಪೊಲೀಸ್‌ ಬಿಗಿ ಭದ್ರತೆ ಮಧ್ಯೆ ಚುನಾವಣೆ ನಡೆದಿದ್ದು, 12 ಜನ ಸದಸ್ಯರು ಚುನಾಯಿತರಾಗಿದ್ದಾರೆ.

Advertisement

ಲಾಡ್ಲಾಪುರ ಹಾಗೂ ಕೊಂಚೂರು ಗ್ರಾಮಗಳ ಒಟ್ಟು 200 ಕೃಷಿಕ ಮತದಾರರ ಪೈಕಿ 190 ಮತಗಳು ಚಲಾವಣೆಯಾದವು. 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 21 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಬೆಳಗ್ಗೆಯಿಂದ ಮತದಾನ ಶುರುವಾಗಿ ಸಂಜೆ ಮತ ಎಣಿಕೆ ನಡೆದು ವಿಜೇತ ಅಭ್ಯರ್ಥಿಗಳ ಹೆಸರು ಘೋಷಿಸಲಾಯಿತು. ಜುಮ್ಮಣ್ಣ ಪೂಜಾರಿ ಕೊಂಚೂರ, ವಿಶ್ವನಾಥ ಗಂದಿ, ಶರಣಪ್ಪ ಪೂಜಾರಿ, ತುಳಸಿರಾಮ ಗೋಪು, ಸುರೇಶ ಶಾಂತವೀರಗೌಡ, ದೇವಿಂದ್ರಪ್ಪ ದಂಡಬಾ, ಮಹೇಬೂಬ ಪಟೇಲ, ಜಗದೇವಿ ಮಾಳಪ್ಪ, ಬನ್ನಮ್ಮ ಮಲ್ಲಣ್ಣ, ಮಲ್ಲಿಕಾರ್ಜುನ ಭಾಗಪ್ಪ , ಸಾಬಯ್ಯ ಕಲಾಲ ಚುನಾಯಿತರಾದರೆ, ಹಣಮಂತ ಗಲಿಗಿನ್‌ ಅವಿರೋಧವಾಗಿ ಆಯ್ಕೆಯಾದರು. 

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಒಟ್ಟು 12 ಸ್ಥಾನಗಳ ಪೈಕಿ 6 ಸ್ಥಾನಗಳು ಸಾಮಾನ್ಯ, ಪರಿಶಿಷ್ಟ ಪಂಗಡಕ್ಕೆ ಒಂದು ಸ್ಥಾನ, ಪರಿಶಿಷ್ಟ ಜಾತಿಗೆ ಒಂದು ಸ್ಥಾನ, ಸಾಮಾನ್ಯ ಮಹಿಳೆ ಎರಡು ಸ್ಥಾನ ಮತ್ತು ಹಿಂದುಳಿದ ವರ್ಗಕ್ಕೆ ಎರಡು ಸ್ಥಾನಗಳನ್ನು ಮೀಸಲಿಡಲಾಗಿತ್ತು. ಪ್ರಜಾಪ್ರಭುತ್ವದ ನಿಯಮದಂತೆ ಮೀಸಲಾತಿ ಪ್ರಕಟಿಸಿ ಚುನಾವಣೆ ನಡೆಸಲಾಗಿದೆ. 

ಚುನಾಯಿತರಾದ ಸದಸ್ಯರಲ್ಲಿಯೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. 16 ದಿನಗಳ ಒಳಗಾಗಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ಪ್ರಕಟಗೊಳ್ಳಲಿದೆ ಎಂದು ಚುನಾವಣಾಧಿಕಾರಿ ಎಲ್‌.ಆರ್‌. ಪರಮೇಶ ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ನಿಯಮ ಪಾಲಿಸಿಲ್ಲ
 ವಾಡಿ: ಲಾಡ್ಲಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಪ್ರಕ್ರಿಯೆಯಲ್ಲಿ ಪ್ರಜಾಪ್ರಭುತ್ವದ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಅಧಿಕಾರಿಗಳು ಚುನಾವಣೆ ನಡೆಸಿದ್ದಾರೆ ಎಂದು ಲಾಡ್ಲಾಪುರ ಗ್ರಾಪಂ ಅಧ್ಯಕ್ಷ, ಬಿಜೆಪಿ ಮುಖಂಡ ಸಾಬಣ್ಣ ಆನೇಮಿ ಆರೋಪಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಆನೇಮಿ, ನೂತನವಾಗಿ ಜಾರಿಗೆ ಬಂದಿರುವ ಲಾಡ್ಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗ್ರಾಪಂ ವ್ಯಾಪ್ತಿಯ ಕೊಂಚೂರು ಹಾಗೂ ಲಾಡ್ಲಾಪುರದ ರಾಜಕೀಯ ಮುಖಂಡರಾದ ಜುಮ್ಮಣ್ಣ ಪೂಜಾರಿ, ಸಾಬಯ್ಯ ಕಲಾಲ, ವಿಶ್ವನಾಥ ಗಂದಿ, ಶರಣಪ್ಪ ಪೂಜಾರಿ, ಹಣಮಂತ ಗದಗಿನ, ತುಳಸಿರಾಮ, ದೇವಿಂದ್ರಪ್ಪ ಸೋಮಣ್ಣ, ಬನ್ನಮ್ಮ ಮಲ್ಲಣ್ಣ ಸೇರಿದಂತೆ ಒಟ್ಟು 12 ಜನ ಪ್ರವರ್ತಕರನ್ನು ನೇಮಕ ಮಾಡಲಾಗಿತ್ತು. ಸಾಮಾಜಿಕ ನ್ಯಾಯದಡಿ ರೈತರು ಮತ್ತು ಕೃಷಿಕರಿಗೆ ಸದಸ್ಯತ್ವ ನೀಡಬೇಕಾದ ಪ್ರವರ್ತಕರು, ತಮ್ಮ ಕುಟುಂಬ ಸದಸ್ಯರನ್ನೇ ಸಂಘದ ಸದಸ್ಯರನ್ನಾಗಿ ಮಾಡಿ ಇತರರನ್ನು ಚುನಾವಣೆಯಿಂದ ಹೊರಗಿಟ್ಟಿದ್ದಾರೆ. 18 ವಯೋಮಿತಿ ಇಲ್ಲದವರಿಗೂ ಸಂಘದ ಸದಸ್ಯತ್ವ ನೀಡಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ದೂರಿದ್ದಾರೆ.

ಕ್ಷೇತ್ರದ ಶಾಸಕ, ಸಚಿವ ಪ್ರಿಯಾಂಕ್‌ ಖರ್ಗೆ ಅವರ ರಾಜಕೀಯ ಒತ್ತಡಕ್ಕೆ ಮಣಿದು ಸುಮಾರು 5000 ರೈತರ ಪೈಕಿ ತಮಗೆ ಬೇಕಾದ 200 ಕೃಷಿಕರಿಗೆ ಸದಸ್ಯತ್ವ ನೀಡಲಾಗಿದ್ದು, ಇನ್ನುಳಿದ 4000ಕ್ಕೂ ಹೆಚ್ಚು ರೈತರನ್ನು ಕಡೆಗಣಿಸಿದ್ದಾರೆ. ಇದರ ವಿರುದ್ಧ ದ್ವನಿ ಎತ್ತಿದರೂ ಕ್ಯಾರೆ ಎನ್ನದ ಅಧಿಕಾರಿಗಳು, ಚುನಾವಣೆ ನಡೆಸಿದ್ದಾರೆ. ಇದರ ವಿರುದ್ಧ ನಾವು ಕಲಬುರಗಿ ಹೈಕೋರ್ಟ್‌ನಲ್ಲಿ ಈಗಾಗಲೇ ದಾವೆ ಹೂಡಿದ್ದೇವೆ. ಅರ್ಹ ಕೃಷಿಕರಿಗೆ ಸಂಘದ ಸದಸ್ಯತ್ವ ನೀಡದೆ ಪ್ರವರ್ತಕರು ಮತ್ತು ಅಧಿಕಾರಿಗಳು ಏಕಾಏಕಿ ಚುನಾವಣೆ ನಡೆಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗಿದೆ. ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next