Advertisement

ಆಕಾಶಕ್ಕೆ ಏಣಿ : ಕನಸುಗಳಿಗೆ ಬೇಲಿ ಯಾಕೆ

11:05 AM Jul 10, 2020 | mahesh |

ನಿನ್ನೆ ರಾತ್ರಿ ನಮ್ಮ ಬ್ರಹ್ಮಚಾರಿ ಮನೆಯ ರಾಜು ಅಣ್ಣನನ್ನು ಅವರ ಕೆಲಸಕ್ಕೆ ಗಾಡಿಯಲ್ಲಿ ಡ್ರಾಪ್‌ ಮಾಡಿ ಬರುವಾಗ ಸ್ವಲ್ಪ ತಡವಾಗಿತ್ತು. ಪಕ್ಕದ ಮನೆಯ ಅಕ್ಕನ ಮಗು ಒಂದೇ ಸಮನೆ ಅಳುವುದು ಕೇಳಿತು. ನಾನು ಸಾಮಾನ್ಯವಾಗಿ ಮಾತನಾಡಿಸುವಂತೆ “ಏನ್‌ ಅಕ್ಕ ಇವತ್ತು ನಮ್ಮ ಪುಟ್ಟ ತುಂಬಾ ಜೋರು ಸದ್ದುಮಾಡ್ತಾ ಇದ್ದಾನೆ’ ಎಂದು ಕೇಳಿದೆ. ಅಕ್ಕ ಉತ್ತರಿಸಿದರು “ಮೂರು ದಿನಗಳಿಂದ ಇವನದ್ದು ಒಂದೇ ಹಠ, ಚಂದಮಾಮನನ್ನು ತಂದು ಕೊಡು ಅಂತ ಕುಳಿತಿದ್ದಾನೆ. ನಾನು ಎಲ್ಲಿಂದ ತಂದು ಕೊಡಲಿ ನೀನೆ ಹೇಳು’ ಅಂದ್ರು. ನಂಗೆ ಅವರ ಪಾಡನ್ನು ನೋಡಿ ನಗು ಬಂತು.

Advertisement

ನಮ್ಮ ಪುಟ್ಟನನ್ನು ಒಂದಷ್ಟು ಆಟವಾಡಿಸುವ ಮನಸ್ಸಾಯಿತು. ಅದಕ್ಕೆ ಅವನಿಗೆ ಕೇಳಿದೆ, “ಲೋ ಪುಟ್ಟ ಚಂದ ಮಾಮನನ್ನು ಹೇಗೆ ತಂದು ಕೊಡಬೇಕು ಅಂತ ಹೇಳು ನಾನೇ ಹೋಗಿ ತಂದು ಕೊಡ್ತಿನಿ’ ಅಂದೆ. ಅದಕ್ಕೆ ಪುಟ್ಟ ತನ್ನ ತೊದಲು ಮಾತುಗಳಲ್ಲಿ ಸುಂದರವಾಗಿ ಉತ್ತರಿಸಿದ; “ಅಣ್ಣ ಮೇಲೆ ನೋಡು ಚಂದ ಮಾಮ ನಮ್ಮ ಕಡೆ ನೋಡ್ತಾ ಇದ್ದಾನೆ. ನಾನು ನಿನ್ನಷ್ಟು ದೊಡ್ಡವನಿದ್ದಿದ್ದರೆ ನಾನೇ ಹೋಗಿ ತರಿದ್ದೆ’ ಎಂದ ಮುಗ್ಧವಾಗಿ. ಅದಕ್ಕೆ ನಾನು “ಬಲೇ ಚೂಟಿ ಬಿಡು ನೀನು’ ಎಂದು ಉತ್ತರಿಸಿ ಮನೆಗೆ ಮರಳಿದೆ.

ಆದರೆ ಅವನ ಉತ್ತರ ನನ್ನನ್ನು ಮಂಕಾಗಿಸಿ ಮನಸ್ಸನ್ನು ಕೊರೆಯಲಾರಂಭಿಸಿತ್ತು. ನಾನು ಅವನ ನಂಬಿಕೆ ಸುಳ್ಳೆಂದು ಸಾಧಿಸುವ ಸಲುವಾಗಿ ಪ್ರಯತ್ನಿಸಿದರೆ, ಅವನು ನನ್ನೊಳಗಿನ ಶಕ್ತಿಯನ್ನು ತೋರಿಸಲು ನಿಂತಿದ್ದ. ನಾವು ಚಿಕ್ಕವರಿದ್ದಾಗ ಕಾಣುತ್ತಿದ್ದ ಎಷ್ಟೋ ಕನಸುಗಳನ್ನು ಸ್ವಲ್ಪ ಬುದ್ಧಿ ಬರುತ್ತಲೇ ಅವನ್ನು ಮರೆಯುತ್ತೇವೆ. ಆ ರೀತಿಯ ಹುಚ್ಚು ಕನಸುಗಳನ್ನು ಕಾಣಬಾರದು ಎಂದು ಯೋಚಿಸಿ ನಮ್ಮ ಕನಸುಗಳಿಗೆ ನಾವೇ ಬೇಲಿಯನ್ನು ಹಾಕಿಕೊಳ್ಳುತ್ತೇವೆ.

ರೈಟ್‌ ಸಹೋದರರು ಆಕಾಶದಲ್ಲಿ ಹಾರುವ ಕನಸು ಕಂಡಾಗ ಯಾರಾದರೂ ಅದು ಹುಚ್ಚು ಕನಸು ಎಂದು ತಡೆದಿದ್ದರೆ ನಾವಿಂದು ವಿಮಾನವನ್ನು ಹತ್ತುತ್ತಲೇ ಇರಲಿಲ್ಲವೇನೋ. ಹೀಗೆ ಮಕ್ಕಳು ಕಾಣುವ ಅದೆಷ್ಟೋ ಕನಸುಗಳು ಮುಂದೆ ದೊಡ್ಡ ದೊಡ್ಡ ಆವಿಷ್ಕಾರಗಳಾದ ನಿದರ್ಶನಗಳು ನಮ್ಮ ಮುಂದೆ ಇವೆ. ಹಾಗಾಗಿ ನಾನು ಮನದಲ್ಲೇ ಯೋಚಿಸಿದೆ ಇನ್ನು ಮುಂದೆ ನಾನು ಯಾರ ಕನಸುಗಳನ್ನೂ ಸುಳ್ಳೆಂದು ಸಾಧಿಸಲು ಹೋಗುವುದಿಲ್ಲ ಎಂದು. ಯಾಕೆಂದರೆ ಯಾರಿಗೆ ಗೊತ್ತು ಆ ಮಗುವಿನ ಇಂದಿನ ಹುಚ್ಚು ಕನಸೇ ಮುಂದೆ ಜನರನ್ನು ಬೆರಗಾಗಿಸುವ ಆವಿಷ್ಕಾರವಾಗಬಹುದು.

ಸ್ವತ್ಛಂದವಾದ ಕನಸುಗಳಿಗೆ ಬೇಲಿ ಕಟ್ಟುವುದು ಯಾಕೆ ? ಪುಟ್ಟ ಹೃದಯಗಳು ಕಂಡ ಕನಸುಗಳಿಗೆ ಬಣ್ಣ ಹಚ್ಚಿ ನನಸು ಮಾಡುವ ಛಲ ಹೊತ್ತಿರುತ್ತವೆ. ಅವರ ಕನಸುಗಳನ್ನು ನನಸಾಗಿಸಲು ಸಹಕರಿಸೋಣ. ಸುಂದರ ಸಮಾಜವನ್ನು ನಿರ್ಮಿಸೋಣ.

Advertisement


ಸಂಜು .ಟಿ. ಎಸ್.

ಸಂತ ಫಿಲೋಮಿನಾ ಕಾಲೇಜು ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next