ಹೊಸದಿಲ್ಲಿ: ಭಾರತ-ಚೀನ ನೈಜ ಗಡಿ ರೇಖೆಯ ಬಳಿಯಲ್ಲಿರುವ (ಎಲ್‌ಎಸಿ) ಭಾರತದ ಕಟ್ಟ ಕಡೆಯ ಸೇನಾ ವಿಚಕ್ಷಣಾ ಗೋಪುರ ದೌಲತ್ ಬೇಗ್ ಓಲ್ಡಿಯಲ್ಲಿ (ಡಿಬಿಒ) ಅಂತರ್ಜಲ ಹುಡುಕಾಟದಲ್ಲಿ ಭಾರತೀಯ ಸೇನೆ ನಿರತವಾಗಿದೆ.
ಈ ಪ್ರದೇಶದಲ್ಲಿ 10 ಸಾವಿರ ವರ್ಷಗಳ ಹಿಂದೆ ಪಾಲೆಲೋ ಎಂಬ ಸರೋವರ ಅಸ್ತಿತ್ವದಲ್ಲಿದ್ದು ಕಾಲ ಕ್ರಮೇಣ ಅದು ಬತ್ತಿ ಹೋಗಿತ್ತು. ಕೆರೆಯ ತುಂಬಾ ಹೂಳು ತುಂಬಿಕೊಂಡು ಅದು ಈಗ ಸಮತಟ್ಟಾದ ಮೈದಾನವಾಗಿದೆ. ಕೆರೆಯ ನೀರಿನ ಮೂಲಗಳನ್ನು ಪತ್ತೆ ಮಾಡಿ ಅವುಗಳಿಗೆ ಮರುಜೀವ ನೀಡುವುದರ ಜೊತೆಗೆ, ಕೆರೆಯ ಹೂಳನ್ನು ತೆಗೆದು ಇಡೀ ಕೆರೆಯಲ್ಲಿ ಮತ್ತೆ ಜಲರಾಶಿ ಸಂಗ್ರಹವಾಗುವಂತೆ ಮಾಡುವ ಮಹತ್ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಇದಕ್ಕಾಗಿ, ಭಾರತದ ಪ್ರಖ್ಯಾತ ಭೂವಿಜ್ಞಾನಿ ಡಾ. ರಿತೇಶ್ ಆರ್ಯ ಅವರ ನೆರವನ್ನು ಪಡೆಯಲು ಸೇನೆ ನಿರ್ಧರಿಸಿದೆ. ಈ ಹಿಂದೆ, ಸೇನೆಗಾಗಿ ಡಾ. ಆರ್ಯ, ಹಲವಾರು ಜಲಸಂಪನ್ಮೂಲ ಸೃಷ್ಟಿ ಅಥವಾ ಜಲ ಮರುಪೂರಣದಂಥ ಮಹತ್ಕಾರ್ಯಗಳನ್ನು ಡಾ. ಆರ್ಯ ಕೈಗೂಡಿಸಿಕೊಟ್ಟಿದ್ದಾರೆ. ಪಾಂಗೊಂಗ್ ತ್ಸೋ ಸರೋವರದ ಜಲಮರುಪೂರಣವೂ ಇವರಿಂದಲೇ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು. ಅಷ್ಟೇ ಅಲ್ಲದೆ, ಲುಕುಂಗ್, ಥಾಕುಂಗ್, ಚುಶುಲ್, ರೆಝಾಗ್ ಲಾ ಹಾಗೂ ಟಾಂಗ್‌ಸ್ಟೆ, ಗಾಲ್ವನ್ ಪ್ರಾಂತ್ಯಗಳಲ್ಲಿನ ಕೆರೆಗಳನ್ನು ಪುನರುಜ್ಜೀವಗೊಳಿಸಿದ ಹೆಗ್ಗಳಿಕೆಯೂ ಇವರಿಗಿದೆ. ಡಾ. ಆರ್ಯ, ಡಿಬಿಒ ಪ್ರಾಂತ್ಯದಲ್ಲಿರುವ ಕರು ಎಂಬಲ್ಲಿಂದ ಟ್ಯಾಂಗಲ್ ಎಂಬ ಪ್ರದೇಶದವರೆಗೆ ಸುಮಾರು 28 ದಿನಗಳ ಕಾಲ ಅಡ್ಡಾಡಿ, ಭೂ ತಪಾಸಣೆ ಕಾರ್ಯವನ್ನು ಕೈಗೊಂಡಿದ್ದಾರೆ.
ರಸ್ತೆ ಮುಚ್ಚಲು ನಿರ್ಧಾರ: ಭಾರತ-ಚೀನ ಗಡಿಯಲ್ಲಿ ಸದ್ಯದಲ್ಲೇ ಶುರುವಾಗಲಿರುವ ತೀವ್ರ ಹಿಮಪಾತದ ಕಾರಣ, ಶ್ರೀನಗರ-ಝೋಜಿ ಲಾ- ಕಾರ್ಗಿಲ್-ಲೇಹ್ ರಸ್ತೆಯನ್ನು 45 ದಿನ ಮುಚ್ಚಲು ಬಾರ್ಡರ್ ಆ್ಯಂಡ್ ರೋಡ್ ಆರ್ಗನೈಸೇಷನ್ ನಿರ್ಧರಿಸಿದೆ. ಈ ಅವಧಿಯಲ್ಲಿ ಲೇಹ್‌ನಿಂದ ದೌಲತ್ ಬೇಗ್ ಓಲ್ಡಿವರೆಗೆ ಇರುವ ಸೇನಾ ಬಳಕೆಯ ಮಾರ್ಗದಲ್ಲಿನ ಸೇತುವೆಗಳನ್ನು ಬಲಿಷ್ಠಗೊಳಿಸಿ, ಅವುಗಳನ್ನು ಟ್ಯಾಂಕರ್ ಹಾಗೂ ಇನ್ನಿತರ ಭಾರೀ ಗಾತ್ರದ ವಾಹನಗಳ ಓಡಾಟಕ್ಕೆ ಸಜ್ಜುಗೊಳಿಸಲು ನಿರ್ಧರಿಸಲಾಗಿದೆ. ಇದೇ ವೇಳೆ, ಆಸ್ಟ್ರೇಲಿಯಾ ಚೀನದೊಂದಿಗಿನ ವಾಣಿಜ್ಯ ಬಾಂಧವ್ಯ ಕೈಬಿಟ್ಟು ಭಾರತದೊಂದಿಗೆ ವ್ಯವಹರಿಸುವ ಲೆಕ್ಕಾಚಾರ ಹಾಕಿದೆ.