ಲೇಹ್(ಲಡಾಖ್): ಮಗ ಬೌದ್ಧ ಮಹಿಳೆ ಜತೆ ಪರಾರಿಯಾಗಿ ವಿವಾಹವಾಗಿದ್ದಕ್ಕೆ ಭಾರತೀಯ ಜನತಾ ಪಕ್ಷ ತನ್ನ ಹಿರಿಯ ಮುಖಂಡರೊಬ್ಬರನ್ನು ಪಕ್ಷದಿಂದ ಉಚ್ಛಾಟಿಸಿರುವ ಘಟನೆ ಲಡಾಖ್ ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಒಂದು ತಿಂಗಳ ಹಿಂದೆ ನಝೀರ್ ಅಹ್ಮದ್ (74ವರ್ಷ) ಎಂಬವರ ಪುತ್ರ ಬೌದ್ಧ ಮಹಿಳೆ ಜತೆ ಓಡಿ ಹೋಗಿ ವಿವಾಹವಾಗಿದ್ದ. ಇದೀಗ ಲಡಾಖ್ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ನಝೀರ್ ಅವರನ್ನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ವಜಾಗೊಳಿಸಿರುವುದಾಗಿ ವರದಿ ವಿವರಿಸಿದೆ.
ನಝೀರ್ ಪುತ್ರ ಬೌದ್ಧ ಮಹಿಳೆ ಜತೆ ಸಂಬಂಧ ಹೊಂದಿರುವ ಸೂಕ್ಷ್ಮ ವಿಚಾರದ ಬಗ್ಗೆ ತಂದೆಯ ಪಾತ್ರವನ್ನು ಸ್ಪಷ್ಟಪಡಿಸುವಂತೆ ಸೂಚಿಸಲಾಗಿತ್ತು. ಆದರೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ನಝೀರ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಬಿಜೆಪಿ ಲಡಾಖ್ ಘಟಕ ಪ್ರಕಟನೆಯಲ್ಲಿ ತಿಳಿಸಿದೆ.
ಬುಧವಾರ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಲಡಾಖ್ ಬಿಜೆಪಿ ಅಧ್ಯಕ್ಷ ಫುನ್ ಚೋಕ್ ಸ್ಟಾಂಜಿನ್ ಪಕ್ಷದಿಂದ ಉಚ್ಛಾಟಿಸುವ ಆದೇಶ ಹೊರಡಿಸಿರುವುದಾಗಿ ವರದಿ ಹೇಳಿದೆ. ನಝೀರ್ ಅಹ್ಮದ್ ಪುತ್ರ ಮಂಝೂರ್ ಅಹ್ಮದ್ (39ವರ್ಷ), 35 ವರ್ಷದ ಬೌದ್ಧ ಮಹಿಳೆ ಜೊತೆ ಕೋರ್ಟ್ ನಲ್ಲಿ ವಿವಾಹವಾಗಿದ್ದರು. ಈ ಸಂದರ್ಭದಲ್ಲಿ ನಝೀರ್ ಅಹ್ಮದ್ ಅವರು ಹಜ್ ಯಾತ್ರೆಗೆ ತೆರಳಿದ್ದರು ಎಂದು ಅಹ್ಮದ್ ತಿಳಿಸಿದ್ದಾರೆ.
ಮಗ ಮಾಡಿದ ತಪ್ಪಿಗೆ ನನಗೆ ಯಾಕೆ ಶಿಕ್ಷೆ ಎಂದು ಅಚ್ಚರಿಯಾಗದೇ, ನಮ್ಮ ಇಡೀ ಕುಟುಂಬವೇ ಮಗನ ವಿವಾಹದ ಬಗ್ಗೆ ವಿರೋಧವಿದೆ. ನಾವು ಕೂಡಾ ಅವನನ್ನು ಪತ್ತೆ ಹಚ್ಚಲು ತುಂಬಾ ಹುಡುಕಾಟ ನಡೆಸಿದ್ದೇವು. ಆದರೆ ಆತ ಎಲ್ಲಿದ್ದಾನೆ ಎಂಬುದು ತಿಳಿದಿಲ್ಲ ಎಂಬುದಾಗಿ ನಝೀರ್ ಅಹ್ಮದ್ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.