ಚಿಕ್ಕಬಳ್ಳಾಪುರ: ಕೋವಿಡ್ 19 ಸೋಂಕು ತಡೆಗೆ ಲಾಕ್‌ಡೌನ್ ಘೋಷಣೆಯಿಂದ ಯಾರು ಹಸಿವುನಿಂದ ಇರಬಾರದು ಎಂದು ರಾಜ್ಯ ಸರ್ಕಾರ ಏಪ್ರಿಲ್, ಮೇ ತಿಂಗಳ ಪಡಿತರವನ್ನು ಒಂದೇ ಬಾರಿಗೆ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರದಾರರಿಗೆ ಸರ್ಕಾರ ವಿತರಿಸಲು ಮುಂದೆ ಬಂದರೂ ಜಿಲ್ಲೆಗೆ ಇನ್ನೂ ಗೋಧಿ ಮಾತ್ರ ಪೂರೈಕೆ ಆಗದೇ ಬರೀ ಅಕ್ಕಿ ಪಡೆಯುವಂತಾಗಿದೆ.
ರಾಜ್ಯ ಸರ್ಕಾರ ಈಗಾಗಲೇ ಸಿದ್ದರಾಮಯ್ಯ ಸರ್ಕಾರದಲ್ಲಿ ಕೊಡುತ್ತಿದ್ದ 7 ಕೆ.ಜಿ.ಅಕ್ಕಿ ಪೈಕಿ 2 ಕೆ.ಜಿ.ಅಕ್ಕಿ ಕಡಿತ ಮಾಡಿ 5 ಕೆ.ಜಿ. ಅಕ್ಕಿ, ಎರಡು ಕೆ.ಜಿ. ಗೋಧಿ ವಿತರಿಸಲು ನಿರ್ಧರಿಸಿದೆ. ಬಡವರಿಗೆ ಅನುಕೂಲವಾಗಲು ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ವಿತರಿಸಲು ಮುಂದಾದರೂ ಜಿಲ್ಲೆಗೆ ಮಾತ್ರ ಅಕ್ಕಿ ಬಿಟ್ಟರೆ ಗೋಧಿ ಬಂದಿಲ್ಲ. ಅಕ್ಕಿಯಲ್ಲೂ 20 ಸಾವಿರ ಕ್ವಿಂಟಲ್ ಕಡಿಮೆ ಪೂರೈಕೆ ಆಗಿದೆ.
ಪಡಿತರ ಸಮಸ್ಯೆ ಉಲ್ಬಣ: ಈಗಾಗಲೇ ಜಿಲ್ಲಾದ್ಯಂತ ಎರಡು ತಿಂಗಳ ಪಡಿತರವನ್ನು ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುತ್ತಿದ್ದರೂ ಗೋಧಿ ಪೂರೈಕೆ ಆಗದ ಪರಿಣಾಮ ಫಲಾನುಭವಿಗಳಿಗೆ ಅಕ್ಕಿ ಮಾತ್ರ ವಿತರಿಸಲಾಗುತ್ತಿದೆ. ಕಳೆದ ಮಾರ್ಚ್ 23 ರಿಂದಲೇ ಲಾಕ್‌ಡೌನ್ ಘೋಷಣೆ ಆಗಿದ್ದು, ಇದರಿಂದ ಸಾಮಾನ್ಯ ಜನರಿಗೆ ವಿಶೇಷವಾಗಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಪಡಿತರ ಸಮಸ್ಯೆ ಉಲ್ಬಣಿಸಿದೆ. ನಾಮಫಲಕ ಅಳವಡಿಕೆ: ಜಿಲ್ಲೆಯಲ್ಲಿ ಒಟ್ಟು 28,631 ಅಂತ್ಯೋದಯ ಪಡಿತರದಾರರಿಗೆ ತಿಂಗಳಿಗೆ 35 ಕೆ.ಜಿ.ಯಂತೆ ಎರಡು ತಿಂಗಳಿಗೆ ಒಟ್ಟು 70 ಕೆ.ಜಿ. ಅಕ್ಕಿ ವಿತರಿಸಬೇಕಿದೆ. ಅದೇ ರೀತಿ ಒಟ್ಟು 47,275 ಬಿಪಿಎಲ್ ಕುಟುಂಬಗಳಿಗೆ ಪ್ರತಿ ವ್ಯಕ್ತಿಗೆ ತಲಾ 5 ಕೆ.ಜಿ. ಅಕ್ಕಿ ಹಾಗೂ ಇಡೀ ಕುಟುಂಬಕ್ಕೆ ಎರಡು ಕೆ.ಜಿ.ಯಂತೆ ಗೋಧಿ ವಿತರಿಸಲಾಗುತ್ತಿದೆ. ಆದರೆ ಈಗ ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ವಿತರಿಸುವ ಕಾರ್ಯ ಲಾಕ್‌ಡೌನ್‌ನಿಂದ ಬಳಲುತ್ತಿರುವವರಿಗೆ ಸಂತಸ ತಂದರೂ ಬರೀ ಅಕ್ಕಿ ಮಾತ್ರ ವಿತರಿಸಿ ಗೋಧಿ ವಿತರಿಸದೇ ಮತ್ತೆ ಬನ್ನಿ ಎಂದು ಫಲಾನುಭವಿಗಳಿಗೆ ಹೇಳುತ್ತಿದ್ದಾರೆ. ಕೆಲವು ಕಡೆ ಗೋಧಿ ಬಂದಿಲ್ಲ. ಬಂದ ಮೇಲೆ ವಿತರಿಸಲಾಗುತ್ತಿದೆ ಎಂಬ ನಾಮಫಲಕಗಳನ್ನು ಹಾಕಲಾಗುತ್ತಿದೆ.
ಜಿಲ್ಲೆಗೆ ಬೇಡಿಕೆಗಿಂತ 20 ಸಾವಿರ ಕ್ವಿಂಟಲ್ ಅಕ್ಕಿ ಕಡಿಮೆ ಪೂರೈಕೆ ಆಗಿದೆ. ಆದರೂ ಅಕ್ಕಿಯನ್ನು ಸರ್ಕಾರದ ನಿರ್ದೇಶನಂತೆ ಎರಡು ತಿಂಗಳ ಪಡಿತರ ಒಟ್ಟಿಗೆ ವಿತರಿಸಲಾಗುತ್ತಿದೆ. ಆದರೆ ಗೋಧಿ ಇನ್ನೂ ಪೂರೈಕೆ ಆಗಿಲ್ಲ. ಗೋಧಿ ಬಂದ ನಂತರ ಫಲಾನುಭವಿಗಳಿಗೆ ವಿತರಿಸಲಾಗುವುದು.
-ಸೋಮಶೇಖರಪ್ಪ, ಪ್ರಭಾರಿ ಉಪ ನಿರ್ದೇಶಕರು, ಆಹಾರ ಇಲಾಖೆ
–ಕಾಗತಿ ನಾಗರಾಜಪ್ಪ