ಮೈಸೂರು: ಹಳೇ ಮೈಸೂರು ಭಾಗದಲ್ಲಿ ಮುಂಗಾರು ಚುರುಕಾಗದ ಹಿನ್ನೆಲೆ ಜುಲೈ ಎರಡನೇ ವಾರ ಆರಂಭವಾದರೂ ಭತ್ತ ಬಿತ್ತನೆ ಮಾಡಲು ರೈತರು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಜೂನ್ ಮತ್ತು ಜುಲೈನಲ್ಲಿ ಮಳೆ ಕೊರತೆ ಹಿನ್ನೆಲೆ ಕಬಿನಿ ಮತ್ತು ಕೆಆರ್‌ಎಸ್ ಡ್ಯಾಂಗಳು ನೀರಿನ ಕೊರತೆ ಎದುರಿಸುತ್ತಿದ್ದರೆ, ಇತ್ತ ರೈತರು ಜಲಾಶಯದ ನೀರಿನ ಮಟ್ಟ ಗಮನದಲ್ಲಿರಿಸಿಕೊಂಡು ಭತ್ತ ಬಿತ್ತನೆ ಮಾಡಲು ಎದುರು ನೋಡುತ್ತಿದ್ದಾರೆ.
ಸದ್ಯಕ್ಕೆ ಎರಡೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದರಿಂದ ಭತ್ತ ಬಿತ್ತನೆ ಇನ್ನೂ ತಡವಾಗುವ ಸಾಧ್ಯತೆಗಳಿದೆ. 2022ರ ಹಿಂಗಾರು ಮತ್ತು ಈ ವರ್ಷದ ಮುಂಗಾರು ಪೂರ್ವ ಹಾಗೂ ಮುಂಗಾರು ದುರ್ಬಲವಾದ ಪರಿಣಾಮ ಕೆ.ಆರ್.ಎಸ್., ಕಬಿನಿ ಹಾಗೂ ಹಾರಂಗಿ ಜಲಾಶಯಗಳು ಬತ್ತಿವೆ. ಈ ಮೂರು ಜಲಾಶ ಯಗಳೂ ಜಿಲ್ಲೆಯ ಕೃಷಿ ಭೂಮಿಗೆ ನೀರುಣಿಸುವ ಮೂಲಕ ಭತ್ತ ಮತ್ತು ಕಬ್ಬು ಬೆಳೆಗೆ ಆಧಾರವಾಗಿವೆ. ಆದರೆ, ಮಳೆಯ ಅಭಾವದಿಂದ ಈ ಬಾರಿ ನಾಲೆಗಳಿಗೆ ನೀರು ಹರಿಸುವ ಸಾಧ್ಯತೆಗಳು ಕಡಿಮೆಯಾಗಿದೆ. ಪರಿಣಾಮ ಭತ್ತ ಬಿತ್ತನೆ ಕಾರ್ಯ ಶೇ.10ರಷ್ಟು ಮಾತ್ರ ನಡೆದಿದೆ.
ಭರವಸೆ ಕಳೆದುಕೊಂಡ ರೈತ: ಈಗಾಗಲೇ ಮಾರುಕಟ್ಟೆಯಲ್ಲಿ ಬಿತ್ತನೆ ಬೀಜ ಲಭ್ಯವಿದೆ. ಆದರೆ ಬಿತ್ತನೆ ಬೀಜ ಕೊಳ್ಳಲು ರೈತರು ನಿರಾಸಕ್ತಿ ತೋರುತ್ತಿದ್ದಾರೆ. ವಾಡಿಕೆ ಯಂತೆ ಮೇ-ಜೂನ್ ವೇಳೆಗೆ ಬಿತ್ತನೆ ಮಾಡಿ, ಜುಲೈ ನಲ್ಲಿ ಭತ್ತ ನಾಟಿ ಮಾಡುವ ಕಾರ್ಯ ಪೂರ್ಣವಾಗು ತ್ತಿತ್ತು. ಆದರೆ ಉತ್ತಮ ಮಳೆಯಾಗದ ಹಿನ್ನೆಲೆ ಜಲಾಶಯಗಳು ಬರಿದಾದ ಹಿನ್ನೆಲೆ ಈ ಬಾರಿ ಭತ್ತ ಬೆಳೆಯುವ ಭರವಸೆಯನ್ನು ಜಿಲ್ಲೆಯ ರೈತರು ಕಳೆದುಕೊಂದಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 1,03200 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಿದ್ದು, 8 ಲಕ್ಷ ಮೆಟ್ರಿಕ್ ಟನ್ ಭತ್ತ ಉತ್ಪಾದನೆಯಾಗಲಿದೆ. ಆದರೆ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 299.9 ಮಿ.ಮೀ ನಷ್ಟು ವಾಡಿಕೆ ಮಳೆ ಯಾಗಬೇಕಿದ್ದು, ಇದರಲ್ಲಿ 271.8ರಷ್ಟು ಮಳೆಯಾಗುವ ಮೂಲಕ 38 ಮಿ.ಮೀಟರ್‌ನಷ್ಟು ಮಳೆ ಕೊರತೆ ಯಾಗಿದೆ. ಪರಿಣಾಮ ಈಗಾಗಲೇ ಬಿತ್ತನೆ ಮಾಡಿರುವ ಇತರೆ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ.
ಇಳುವರಿ ಕುಂಠಿತ ಭೀತಿ: ಸಾಮಾನ್ಯವಾಗಿ ಭತ್ತ ಬೆಳೆ ಯುವ ರೈತರು ಮೇ, ಜೂನ್ ತಿಂಗಳಲ್ಲಿ ಬಿತ್ತನೆ ಮಾಡಿ ಜುಲೈ ವೇಳೆಗೆ ನಾಟಿ ಕಾರ್ಯ ಮುಗಿಸುತ್ತಿದ್ದರು. ಈ ಬಾರಿ ಇನ್ನೂ ಬಿತ್ತನೇ ಕಾರ್ಯ ಆಗದೇ ಇರುವುದರಿಂದ ಭತ್ತದ ನಾಟಿ ತಡವಾಗಲಿದೆ. ಒಂದು ವೇಳೆ ಆಗಸ್ಟ್‌ನಲ್ಲಿ ನಾಟಿ ಮಾಡಿದರೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಭತ್ತ ಹೂ ಕೊರೆಗೆ ಸಿಲುಕಿ ಇಳುವರಿ ಕಡಿಮೆಯಾಗುವ ಸಾಧ್ಯತೆಗಳಿವೆ. ಪರ್ಯಾಯ ಬೆಳೆಯತ್ತ ರೈತರ ಚಿತ್ತ: ಈಗಾಗಲೇ ಭತ್ತ ಬಿತ್ತನೆಗೆ ಸಮಯ ಮೀರಿರುವುದು ಹಾಗೂ ಜಲಾಶ ಯಗಳಲ್ಲಿ ನೀರಿನ ಅಭಾವ ಇರುವುದರಿಂದ ಭತ್ತ ಬೆಳೆ ಯುವ ಭತ್ತದ ಬದಲಿಗೆ ಜೋಳ, ರಾಗಿ, ಹಲಸಂದೆ, ಉದ್ದು, ಎಳ್ಳು ಬೆಳೆಗೆ ಮುಂದಾಗಿದ್ದು, ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲಸಂದೆ ಬಿತ್ತನೆ ಕಾರ್ಯ ಗರಿಗೆ ದರಿದೆ.
ಕ್ಷೀಣಿಸಿದ ಕಬಿನಿ ಒಳ ಹರಿವು: ನಾಲ್ಕೈದು ದಿನಗಳ ಹಿಂದೆ ಕಬಿನಿ ಜಲಾಶಯದಲ್ಲಿ 17 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದ್ದ ಒಳ ಹರಿವಿನ ಪ್ರಮಾಣ ಸಂಪೂರ್ಣವಾಗಿ ಕುಸಿದಿದ್ದು, ಮಂಗಳವಾರ 4485 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಹಾಗೆಯೇ ಕೆಆರ್‌ಎಸ್‌ನಲ್ಲಿ ವಾರದ ಹಿಂದೆ 15 ಸಾವಿರ ಕ್ಯೂಸೆಕ್ ಇದ್ದ ಒಳ ಹರಿವಿನ ಪ್ರಮಾಣ 7624ಕ್ಕೆ ಕುಸಿದಿದ್ದು, ನೀರಿನ ಸಂಗ್ರಹ 87.40 ಅಡಿಗೆ ಏರಿಕೆಯಾಗಿದೆ. ಈ ಮೂಲಕ ಡ್ಯಾಂ ಭರ್ತಿಯಾಗುವ ನಿರೀಕ್ಷೆ ಹುಸಿಯಾಗಿದೆ.
ಜಿಲ್ಲೆಯಲ್ಲಿ ಭತ್ತದ ಬಿತ್ತನೆ ಬೀಜ ಪೂರೈಕೆಯಾಗಿದ್ದು, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ. ಆದರೆ ಮಳೆ ಕೊರತೆ ಹಿನ್ನೆಲೆ ಭತ್ತ ಬಿತ್ತನೆ ಆಗಿಲ್ಲ. ಜಲಾಶಯಗಳು ತುಂಬಲು ಇನ್ನೂ ಸಮಯವಿದ್ದು, ಜುಲೈ, ಆಗಸ್ಟ್‌ನಲ್ಲಿಯೂ ಬಿತ್ತನೆ ಮಾಡಲು ಅವಕಾಶವಿದೆ. ಒಂದು ವೇಳೆ ಮಳೆ ಬಾರದಿದ್ದರೆ ದ್ವಿದಳ ಧಾನ್ಯ, ಜೋಳ ಮತ್ತು ರಾಗಿಯನ್ನು ಬಿತ್ತನೆ ಮಾಡಬಹುದಾಗಿದೆ.
● ಚಂದ್ರಶೇಖರ್, ಜಂಟಿ ನಿರ್ದೇಶಕ ಕೃಷಿ ಇಲಾಖೆ
ಕಳೆದೊಂದು ತಿಂಗಳಿಂದ ಮೋಡ ಕವಿದ ವಾತಾವರಣವಿದೆಯೇ ಹೊರತು ಮಳೆ ಬೀಳುತ್ತಿಲ್ಲ. ಪರಿಣಾಮ ಹಳೇ ಮೈಸೂರು ಭಾಗದಲ್ಲಿ ನಿಗಧಿತ ಸಮಯದಲ್ಲಿ ಭತ್ತ ನಾಟಿ ಕಾರ್ಯವಾಗಿಲ್ಲ. ಈಗಾಗಲೇ ತಡವಾಗಿರುವುದರಿಂದ ಇಳುವರಿಯೂ ಕಡಿಮೆಯಾಗಲಿದೆ. ಸಮಸ್ಯೆ ಹೀಗೆ ಮುಂದುವರೆದರೆ ಜಿಲ್ಲೆಯಲ್ಲಿ ಶೇ.50ರಷ್ಟು ಭತ್ತ ಉತ್ಪಾದನೆ ಕಡಿಮೆಯಾಗಲಿದೆ.
● ಅತ್ತಹಳ್ಳಿ ದೇವರಾಜು, ರೈತ ಮುಖಂಡ
– ಸತೀಶ್ ದೇಪುರ