Advertisement

ಹುಮನಾಬಾದ್‌ನಲ್ಲಿ ನೀರಿಗಾಗಿ ಹಾಹಾಕಾರ

05:59 PM Sep 13, 2020 | Suhan S |

ಹುಮನಾಬಾದ: ಕಳೆದ ಎಂಟು ದಿನಗಳಿಂದಪಟ್ಟಣದಲ್ಲಿ ಕುಡಿಯುವ ನೀರು ಪೂರೈಕೆ ಆಗದ್ದರಿಂದ ಸಾರ್ವಜನಿಕರು ಹನಿ ನೀರಿಗೂ ಪರದಾಡುವಂತಾಗಿದೆ.

Advertisement

ಸ್ಥಳೀಯ ಪುರಸಭೆ ಸಮರ್ಪಕ ನೀರು ಪೂರೈಕೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಯಾವುದೇ ಮುನ್ಸೂಚನೆ ಇಲ್ಲದೆ ನೀರು ಪೂರೈಕೆ ಸ್ಥಗಿತಗೊಳಿಸಿದ್ದರಿಂದ ಜನ ನೀರಿಗಾಗಿ ಅಲೆದಾಡುವಂತಾಗಿದೆ. ಮನೆಯಿಂದ ಕಚೇರಿಗೆ ವಾಹನದಲ್ಲಿ ಸುತ್ತಾಡುವ ಪುರಸಭೆ ಅಧಿಕಾರಿಗಳು ಒಂದು ದಿನ ಕೂಡ ಪಟ್ಟಣದಲ್ಲಿನ ಜನರಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಹತ್ತು ದಿನಗಳ ಕಾಲ ಕುಡಿಯುವ ನೀರು ಬರದಿದ್ದರೆ ಜನರು ಹೇಗೆ ಜೀವನ ನಡೆಸುತ್ತಾರೆ ಎಂದು ಯೋಚಿಸುವ ಗೋಜಿಗೂ ಹೋಗಿಲ್ಲ. ಪಟ್ಟಣದ ಒಂದೇ ಒಂದು ವಾರ್ಡ್‌, ಬಡಾವಣೆಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ: ಕಳೆದ ಆರು ತಿಂಗಳ ಹಿಂದೆ ಕಾರಂಜಾ ಜಲಾಶಯದಿಂದ ಪಟ್ಟಣಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಜಾಕ್‌ವೆಲ್‌ ಮೋಟಾರ್‌ ಹಾಗೂ ಟಿಸಿ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ದುರಸ್ತಿಗೆ ಕಳುಹಿಸಲಾಗಿತ್ತು. ಆರು ತಿಂಗಳಾದರೂ ರಿಪೇರಿ ಆಗಿಲ್ಲ. ಒಂದು ಮೋಟಾರ್‌ ದುರಸ್ತಿಗೀಡಾದರೆ ಕೂಡಲೇ ಪರ್ಯಾಯ ಮೋಟರ್‌ ವ್ಯವಸ್ಥೆ ಮಾಡಬೇಕು ಎಂಬ ನಿಟ್ಟಿನಲ್ಲಿ ಎರಡು ಮೋಟಾರ್‌ ಮತ್ತು ಎರಡು ಟಿಸಿ ವ್ಯವಸ್ಥೆ ಮಾಡಲಾಗಿತ್ತು. ಕೂಡಲೇ ದುರಸ್ತಿ ಮಾಡಿದ್ದರೆ ಪಟ್ಟಣದಲ್ಲಿ ನೀರಿನ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ದುರಸ್ತಿ ಮಾಡಿಸುವಲ್ಲಿ ಪುರಸಭೆ ಮುಖ್ಯಾಧಿಕಾರಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ತಾಲೂಕಿನ ಹುಡಗಿ ಪಂಪ್‌ ಹೌಸನಲ್ಲಿ ಮೋಟಾರ್‌ ಹಾಗೂ ಟಿಸಿ ದುರಸ್ತಿಗೆ ಕಳುಹಿಸಿದ್ದು ಇಂದಿಗೂ ಮರಳಿ ಬಂದಿಲ್ಲ. ಅದೇ ರೀತಿ ಕಾರಂಜಾ ಜಲಾಶಯದಲ್ಲಿನ ಮೋಟಾರ್‌ ಹಾಗೂ ಟಿಸಿ ರಿಪೇರಿಗೆ ಕಳುಹಿಸಿದ್ದು, ಇಂದಿಗೂ ಮರಳಿ ಬರದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಪುರಸಭೆ ಸಿಬ್ಬಂದಿ ಹೇಳುತ್ತಾರೆ.

ಪ್ರತಿ ತಿಂಗಳು ಸಮಸ್ಯೆ: ಕಳೆದ ಅನೇಕ ತಿಂಗಳಿಂದ ಪ್ರತಿ ತಿಂಗಳು ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆ ಆಗುತ್ತಿದೆ. ಯಾವ ಕಾರಣಕ್ಕೆ ಪದೇಪದೇ ಮೋಟಾರ್‌, ಟಿಸಿ ದುರಸ್ತಿಗೆ ಬರುತ್ತಿವೆ ಎಂದು ಸಾರ್ವಜನಿಕರು ಪುರಸಭೆ ಅಧಿಕಾರಿಗಳಿಗೆ ಪ್ರಶ್ನಿಸುತ್ತಿದ್ದಾರೆ. ಆಯಾ ವಾರ್ಡ್‌ಗಳ ಜನರು ಸಮಸ್ಯೆಯನ್ನು ಸದಸ್ಯರಿಗೆ ಹೇಳಿಕೊಂಡರೆ, ಅವರು ಪುರಸಭೆ ಅಧಿಕಾರಿ ಯಾವುದೇ ಕೆಲಸ ಮಾಡುತ್ತಿಲ್ಲಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ ಹಳೆ ಪ್ರದೇಶದಲ್ಲಿನ ಕೊಳವೆಬಾವಿಗಳಲ್ಲಿ ಹಾಗೂ ತೆರೆದ ಬಾವಿಗಳಲ್ಲಿ ಉಪ್ಪು ನೀರು ಇದ್ದು, ಕುಡಿಯಲು ಯೋಗ್ಯವಾಗಿಲ್ಲ. ಪುರಸಭೆ ಕುಡಿಯುವ ನೀರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡು ಸಮಸ್ಯೆ ಆಗದಂತೆ ಕ್ರಮ ವಹಿಸಬೇಕಿದೆ. ಸ್ಥಳೀಯ ಶಾಸಕರು ಕೂಡ ನೀರಿನ ಸಮಸ್ಯೆಯತ್ತ ಮತ್ತು ಅಧಿಕಾರಿಗಳ ಕರ್ತವ್ಯದ ಕಡೆ ಗಮನಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮೋಟಾರ್‌ ದುರಸ್ತಿಗೆ ಬಂದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ರಿಪೇರಿಗೆ ಕಳುಹಿಸಿದ ಮೋಟಾರ್‌ ಹಾಗೂ ಟಿಸಿ ಇಂದಿಗೂ ಬಂದಿಲ್ಲ. ಪಟ್ಟಣದ ವಿವಿಧೆಡೆ ಕೊಳವೆ ಬಾವಿಗಳಿದ್ದು, ಜನರು ನೀರು ಬಳಸುವಂತೆ ತಿಳಿಸಲಾಗಿದೆ.- ಶಂಭುಲಿಂಗ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ

Advertisement

ಕುಡಿಯುವ ನೀರು ಪೂರೈಕೆ ಆಗದ ಹಿನ್ನೆಲೆಯಲ್ಲಿ ಪುರಸಭೆ ಸದಸ್ಯರು ಕೂಡ ಗಮನಕ್ಕೆ ತಂದಿದ್ದಾರೆ. ಪದೇಪದೇ ನೀರಿನಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಪುರಸಭೆ ಆಡಳಿತಾ ಧಿಕಾರಿ ಬಸವಕಲ್ಯಾಣ ಸಹಾಯಕ ಆಯುಕ್ತರಿಗೆ ಪಟ್ಟಣಕ್ಕೆ ಆಗಮಿಸಿ ಜನರ ಸಮಸ್ಯೆಗೆ ಸ್ಪಂದಿಸುವಂತೆ ತಿಳಿಸಿದ್ದೇನೆ. –ರಾಜಶೇಖರ ಪಾಟೀಲ, ಶಾಸಕರು ಹುಮನಾಬಾದ

 

-ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next